ಕಲಬುರಗಿ: ಮೂರೂವರೆ ದಶಕಗಳ ಹಿಂದೆ ಕಾಳಗಿ ಮಂಡಲ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದ ಜಗದೇವ ಗುತ್ತೇದಾರ ಅವರಿಗೆ ಈಗ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಹುಡುಕಿಕೊಂಡು ಬಂದಿದೆ.
ವಿಧಾನ ಪರಿಷತ್‌ನ ದ್ವೈವಾರ್ಷಿಕ ಚುನಾವಣೆಗೆ ಭಾನುವಾರ ಕಾಂಗ್ರೆಸ್ ಘೋಷಿದ ಎಂಟು ಅಭ್ಯರ್ಥಿಗಳ ಪಟ್ಟಿಯಲ್ಲಿ ಜಗದೇವ ಗುತ್ತೇದಾರ ಅವರ ಹೆಸರೂ ಇದೆ.
ಜಗದೇವ ಅವರು ಕಾಲೇಜು ವಿದ್ಯಾರ್ಥಿ ಆಗಿದ್ದಾಗ ತಮ್ಮ 19ನೇ ವಯಸ್ಸಿನಿಂದಲೇ ಕಾಂಗ್ರೆಸ್ ಜತೆ ಗುರುತಿಸಿಕೊಂಡರು. ದಿ. ಎನ್. ಧರ್ಮಸಿಂಗ್ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಟ್ಟಾ ಬೆಂಬಲಿಗರಾಗಿದ್ದು, ಪಕ್ಷದಲ್ಲಿ ತಳಮಟ್ಟದಿಂದ ಕಾರ್ಯಕರ್ತರಾಗಿ ಕೆಲಸ ಮಾಡಿದವರು. ಹಂತ– ಹಂತವಾಗಿ ಬೆಳೆದು 2017ರಿಂದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದಾರೆ.
1979ರಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಪಕ್ಷ ಸಂಘನೆಯಲ್ಲಿ ತೊಡಗಿಸಿಕೊಂಡರು. 1984ರಲ್ಲಿ ಹೈದರಾಬಾದ್– ಕರ್ನಾಟಕ ಶಿಕ್ಷಣ ಸಂಸ್ಥೆಯಲ್ಲಿ ಬಿಇ ಮೆಕ್ಯಾನಿಕಲ್ ಓದುವಾಗ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾದರು. ಚಿತ್ತಾಪುರ ತಾಲ್ಲೂಕು ಯುವ ಕಾಂಗ್ರೆಸ್ ಕಾರ್ಯದರ್ಶಿ, ಜಿಲ್ಲಾ ಗ್ರಾಮೀಣ ಆಶ್ರಯ ಸಮಿತಿ ಸದಸ್ಯ ಮತ್ತು 15 ವರ್ಷ ನಿರಂತರವಾಗಿ ಚಿತ್ತಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು.
ಈ ಹಿಂದೆ ಕಾಳಗಿ ಮತ ಕ್ಷೇತ್ರದಿಂದ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆಗೊಂಡಿದ್ದ ಜಗದೇವ ಅವರು, 2021–2023ರಲ್ಲಿ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದರು. ಖರ್ಗೆ ಅವರು ಕೇಂದ್ರ ಕಾರ್ಮಿಕ ಸಚಿವರಾಗಿದ್ದಾಗ ಇವರು ರಾಷ್ಟ್ರೀಯ ವೃತ್ತಿ ಶಿಕ್ಷಣ ಪರಿಷತ್‌ನ (ಎನ್‌ಸಿವಿಟಿ) ಸದಸ್ಯರೂ ಆಗಿದ್ದರು.
ಟಿಕೆಟ್ ಘೋಷಣೆ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಜಗದೇವರ ಗುತ್ತೇದಾರ, ‘ಪಕ್ಷ ಮತ್ತು ನಾಯಕರಿಗೆ ನಿಷ್ಠೆಯಾಗಿದ್ದು ಕೆಲಸ ಮಾಡಿಕೊಂಡು ಬಂದಿದ್ದರಿಂದ ಪರಿಷತ್ ಟಿಕೆಟ್ ಒಲಿದು ಬಂದಿದೆ. ರಾಜಕೀಯದ ಆರಂಭಿಕ ದಿನಗಳಿಂದಲೂ ಖರ್ಗೆ ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದೇನೆ. ಪಕ್ಷ ವಹಿಸಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬಂದಿದ್ದೇನೆ. ಒಬ್ಬ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ಟಿಕೆಟ್ ನೀಡಿದ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಸಚಿವರಾದ ಡಾ. ಶರಣಪ್ರಕಾಶ ಪಾಟೀಲ, ಪ್ರಿಯಾಂಕ್ ಖರ್ಗೆ ಸೇರಿದಂತೆ ಎಲ್ಲ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ’ ಎಂದರು.
‘ಕೆಲವು ದಿನಗಳ ಹಿಂದೆಯಷ್ಟೇ ಪರಿಷತ್‌ನ ಆಕಾಂಕ್ಷಿಯಾಗಿ ಹೈಕಮಾಂಡ್‌ಗೆ ಮನವಿ ಪತ್ರ ಸಲ್ಲಿಸಿದ್ದೆ. ನನ್ನ ಮನವಿಯನ್ನು ಪರಿಗಣಿಸಿದ ಹೈಕಮಾಂಡ್ ಟಿಕೆಟ್ ಘೋಷಣೆ ಮಾಡಿದೆ. ನಮ್ಮ ಭಾಗದ ಸಮಸ್ಯೆಗಳ ಬಗ್ಗೆ ಪರಿಷತ್‌ನಲ್ಲಿ ಧ್ವನಿ ಎತ್ತುತ್ತೇನೆ’ ಎಂದು ಹೇಳಿದರು.
Cut-off box - ‘ಕಲ್ಯಾಣ ಕರ್ನಾಟಕಕ್ಕೆ ಸಿಂಹಪಾಲು’ ‘ವಿಧಾನ ಪರಿಷತ್‌ಗೆ ಘೋಷಣೆಯಾದ ಟಿಕೆಟ್‌ಗಳ ಪೈಕಿ ಕಲ್ಯಾಣ ಕರ್ನಾಟಕಕ್ಕೆ ಸಿಂಹಪಾಲು ದಕ್ಕಿದೆ. ಕಲ್ಯಾಣ ಕರ್ನಾಟಕ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು ಈ ಬಾಗದಲ್ಲಿ ಪಕ್ಷವನ್ನು ಇನ್ನಷ್ಟು ಗಟ್ಟಿಗೊಳಿಸಲು ಈ ನಿಲುವು ಸಹಕಾರಿಯಾಗಲಿದೆ’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದ್ದಾರೆ. ‘ನಮ್ಮ ಭಾಗದ ಸಚಿವ ಎನ್.ಎಸ್. ಬೋಸರಾಜು ಜಗದೇವ ಗುತ್ತೇದಾರ ವಸಂತ್ ಕುಮಾರ್ ಬಸನಗೌಡ ಬಾದರ್ಲಿ ಅವರು ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಇತರೆ ನಾಯಕರು ಕೈಗೊಂಡಿರುವ ಈ ನಿರ್ಣಯವು ಮುಂಬರುವ ದಿನಗಳಲ್ಲಿ ಏಳು ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಬಲ ತಂದುಕೊಡಲಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.