ಕಲಬುರಗಿ: ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ನಿಂತಿದ್ದೇವೆ’ ಎಂದು ಪುನರುಚ್ಚರಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಐದು ವರ್ಷ ಸಿದ್ದರಾಮಯ್ಯ ಅವರೇ ಸಿ.ಎಂ. ಆಗಿರುತ್ತಾರೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ಹತ್ತು ವರ್ಷ ನಮ್ಮ ಸರ್ಕಾರವೇ ಇರಲಿದೆ’ ಎಂದು ಚುಟುಕಾಗಿ ಪ್ರತಿಕ್ರಿಯಿಸಿದರು.
ಇಲ್ಲಿ ಮಂಗಳವಾರ ಮಾತನಾಡಿದ ಅವರು, ‘ಶಾಸಕಾಂಗ ಸಭೆಯ ಬಳಿಕ ಮುಖ್ಯಮಂತ್ರಿಗಳು ದೆಹಲಿಗೆ ತೆರಳುವರು. ಅಲ್ಲಿನ ನಾಯಕರಿಗೆ ‘ಮುಡಾ’ ಪ್ರಕರಣದ ಸಂಪೂರ್ಣ ಮಾಹಿತಿ ನೀಡಲಿದ್ದು, ಇದರಲ್ಲಿ ಯಾವುದೇ ವಿಶೇಷ ಅರ್ಥವಿಲ್ಲ’ ಎಂದರು.
ರಾಜ್ಯಪಾಲರನ್ನು ಟೀಕಿಸಿದವರ ವಿರುದ್ಧ ಪ್ರಕರಣ ದಾಖಲಿಸಬೇಕೆಂಬ ಬಿಜೆಪಿಗರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಅವರನ್ನು ಹೊಸದಾಗಿ ಕಟ್ಟಿಸಿದ ಆಸ್ಪತ್ರೆಗೆ ಸೇರಿಸೋಣ. ರಾಜ್ಯಪಾಲರನ್ನು ಸಂವಿಧಾನದ ಹುದ್ದೆ ಮೇಲೆ ಕೂರಿಸಿದ್ದು ಜಾತಿಯ ಮೇಲಲ್ಲ’ ಎಂದು ಸ್ಪಷ್ಟಪಡಿಸಿದರು.
ಫೆಲೋಶಿಪ್ ಉದ್ಘಾಟಿಸಿ ಮಾತನಾಡಿದ ಡಿಸಿಎಂ, ‘ಮಹಾತ್ಮ ಗಾಂಧಿ, ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರು ಕುಳಿತಿದ್ದಂತಹ ಸ್ಥಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೂರಿಸಿದ ಶಕ್ತಿ ಇಲ್ಲಿನ ನೆಲಕ್ಕಿದೆ. ಇಂತಹ ಪ್ರಬುದ್ಧ ನಾಯಕನನ್ನು ಕೊಟ್ಟಿದ್ದಕ್ಕೆ ನಿಮಗೆ ನಮಸ್ಕರಿಸಲು ಬಂದಿದ್ದೇನೆ’ ಎಂದು ಖರ್ಗೆ ನಾಯಕತ್ವವನ್ನು ಹೊಗಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.