ಕಲಬುರಗಿ: ‘ನರೇಗಾ ಯೋಜನೆಯಡಿ ಕೂಲಿ ದಿನಗಳನ್ನು 150ಕ್ಕೆ ಹೆಚ್ಚಿಸುವಂತೆ ರಾಜ್ಯ ಬಜೆಟ್ ಮಂಡನೆಗೂ ಮುನ್ನ ಮತ್ತೊಮ್ಮೆ ದೆಹಲಿಗೆ ಹೋಗಿ ಒತ್ತಾಯಿಸುತ್ತೇನೆ. ಸ್ಪಂದಿಸದಿದ್ದರೆ ನೀವು ಧರಣಿ ಕುಳಿತಿರುವಂತೆ ನಾನೂ ಶಾಸಕರೊಂದಿಗೆ ದೆಹಲಿಯಲ್ಲಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟಿಸುತ್ತೇನೆ’ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು.
ನಗರದಲ್ಲಿ ಸರ್ಕಾರಿ ಶಾಲಾ ಅಭಿವೃದ್ಧಿ ವೇದಿಕೆಯಡಿ ಅಹೋರಾತ್ರಿ ಧರಣಿ ನಡೆಸುತ್ತಿದ್ದ ಮಹಿಳೆಯರು, ‘ನರೇಗಾ ಕೂಲಿ ದಿನ ಹೆಚ್ಚಿಸುವುದು ಹಾಗೂ ಕೂಲಿ ಹಣ ಪಾವತಿಸಬೇಕು’ ಎಂದು ಬೇಡಿಕೆ ಮಂಡಿಸಿದಾಗ ಸಚಿವರು ಹೀಗೆ ಪ್ರತಿಕ್ರಿಯಿಸಿದರು.
‘ರಾಜ್ಯಕ್ಕೆ 13 ಕೋಟಿ ಮಾನವ ದಿನಗಳು ದೊರೆತಿದ್ದವು. ಈಗ 12 ಕೋಟಿ ಮಾನವ ದಿನಗಳನ್ನು ಬಳಸಿದ್ದೇವೆ. ಮಾನವ ದಿನ ಸೃಜಿಸಲು ರಾಜ್ಯ ಸರ್ಕಾರ ಕೇವಲ ಶಿಫಾರಸು ಮಾಡಬಲ್ಲದು. ಅದನ್ನು ಕೇಂದ್ರ ಅನುಮೋದಿಸಬೇಕಾಗುತ್ತದೆ. ಬರಗಾಲ ಬಂದಾಗ, ನರೇಗಾ ಕೂಲಿ ದಿನ ಹೆಚ್ಚಿಸುವಂತೆ ದೆಹಲಿಗೆ ಹೋಗಿ ಅಧಿಕಾರಿಗಳನ್ನು ಭೇಟಿಯಾಗಿ ಐದು ಸಲ ಮನವಿ ಕೊಟ್ಟರೂ ಸ್ಪಂದಿಸಿಲ್ಲ’ ಎಂದು ದೂರಿದರು.
‘ನರೇಗಾ ಕೂಲಿ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ವಿಳಂಬ ಮಾಡಿದ್ದರಿಂದ ಹಿಂದೆ ರಾಜ್ಯ ಸರ್ಕಾರವೇ ವಿತರಿಸಿದೆ. ಈಗಲೂ ಅಂದಾಜು ₹470 ಕೋಟಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.