ಕಲಬುರಗಿ: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ನಗರದ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೇಶ್ ಹಾಗರಗಿ ಅವರಿಗೆ ಕರ್ನಾಟಕ ಹೈಕೋರ್ಟ್ ಕಲಬುರಗಿ ಪೀಠವು ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ನಾಯಕಿಯೂ ಆದ ರಾಜೇಶ್ ಪತ್ನಿ ದಿವ್ಯಾ ಹಾಗರಗಿ ಅವರು ಮನೆಯಿಂದ ಪರಾರಿಯಾಗಲು ಸಹಕರಿಸಿದ ಆರೋಪಕ್ಕಾಗಿ ಸಿಐಡಿ ಅಧಿಕಾರಿಗಳು ಕಳೆದ ಏಪ್ರಿಲ್ 7ರಂದು ರಾಜೇಶ್ ಅವರನ್ನು ಬಂಧಿಸಿದ್ದರು.
ಹಗರಣದ ಪ್ರಮುಖ ಆರೋಪಿ ದಿವ್ಯಾ ಪತಿ ಎಂಬ ಕಾರಣಕ್ಕೆ ಅರ್ಜಿದಾರ ಆರೋಪಿಗೆ ಜಾಮೀನು ನಿರಾಕರಿಸಲಾಗದು ಎಂದು ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ನೇತೃತ್ವದ ಏಕಸದಸ್ಯ ಪೀಠವು ಆದೇಶದಲ್ಲಿ ಹೇಳಿದೆ.
'ಪ್ರಮುಖ ಆರೋಪಿಯಾಗಿರುವ ದಿವ್ಯಾ ಹಾಗರಗಿ ಪತಿ ಎಂಬ ಆಧಾರದ ಮೇಲೆ ಆರೋಪಿ ರಾಜೇಶ್ ಹಾಗರಗಿ ಜಾಮೀನಿಗೆ ಅರ್ಹರಲ್ಲ ಎಂದು ಹೇಳಲಾಗದು. ಆರೋಪ ಸಾಬೀತುಪಡಿಸುವ ದಾಖಲೆಗಳು ಇರಬೇಕು. ಐಪಿಸಿ ಸೆಕ್ಷನ್ 212 (ಆಶ್ರಯ ಅಥವಾ ನೆರವು ನೀಡುವುದು) ಹೊರತುಪಡಿಸಿ, ಅರ್ಜಿದಾರ ಆರೋಪಿ ವಿರುದ್ಧ ಗಂಭೀರ ಆರೋಪ ಕಾಣುತ್ತಿಲ್ಲ' ಎಂದು ಹೇಳಿದ ಪೀಠವು ಜಾಮೀನು ಮಂಜೂರು ಮಾಡಿತು.
ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸುವಂತಿಲ್ಲ. ವ್ಯಾಪ್ತಿ ಹೊಂದಿದ ಪೊಲೀಸ್ ಠಾಣೆಯಿಂದ ಅನುಮತಿ ಇಲ್ಲದೇ ಹೊರಹೋಗುವಂತಿಲ್ಲ ಎಂಬ ಷರತ್ತುಗಳನ್ನು ನ್ಯಾಯಾಲಯವು ಅರ್ಜಿದಾರ ಆರೋಪಿಗೆ ವಿಧಿಸಿದೆ.
ಸಿಐಡಿ ಪರ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ ಕಿರಣ್ ಜವಳಿ, 'ಪಿಎಸ್ಐ ದೊಡ್ಡ ಆರ್ಥಿಕ ಅಪರಾಧವಾಗಿದ್ದು, ಪತ್ನಿ ದಿವ್ಯಾ ಹಾಗರಗಿಗೆ ಆಶ್ರಯ ನೀಡುವ ಮೂಲಕ ಪ್ರಮಾದವೆಸಗಿದ್ದಾರೆ. ಹೀಗಾಗಿ, ಅವರಿಗೆ ಜಾಮೀನು ಮಂಜೂರು ಮಾಡಬಾರದು' ಎಂದು ಆಕ್ಷೇಪಿಸಿದರು.
ಅರ್ಜಿದಾರರ ಪರ ವಕೀಲ ಅವಿನಾಶ್ ಉಪಳಾಂವಕರ್ ಅವರು, 'ಪ್ರಕರಣದಲ್ಲಿ 15ನೇ ಆರೋಪಿಯಾದ ಮಲ್ಲಿಕಾರ್ಜುನ ಮೇಳಕುಂದಿ ವಿರುದ್ಧವೂ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ಗಳಾದ 120ಬಿ, 201, 212 ಜೊತೆಗೆ ಸೆಕ್ಷನ್ 34ರ ಅಡಿ ಪ್ರಕರಣ ದಾಖಲಾಗಿದ್ದು, ಅವರಿಗೆ ವಿಚಾರಣಾಧೀನ ನ್ಯಾಯಾಲಯ ಈಗಾಗಲೇ ಜಾಮೀನು ಮಂಜೂರು ಮಾಡಿದೆ. ರಾಜೇಶ್ ವಿರುದ್ಧವೂ ಇದೇ ಆರೋಪಗಳಿದ್ದು, ಅವರಿಗೆ ಜಾಮೀನು ನಿರಾಕರಿಸಲಾಗಿದೆ' ಎಂದು ಆಕ್ಷೇಪಿಸಿದರು.
ಪ್ರಕರಣದಲ್ಲಿ ಎಂಟನೇ ಆರೋಪಿಯಾಗಿರುವ ರಾಜೇಶ್ ಹಾಗರಗಿ ಅವರನ್ನು ಕಳೆದ ಏಪ್ರಿಲ್ 7ರಂದು ಬಂಧಿಸಲಾಗಿತ್ತು. ವಿಚಾರಣಾಧೀನ ನ್ಯಾಯಾಲಯವು ಅವರ ಜಾಮೀನು ಅರ್ಜಿ ವಜಾ ಮಾಡಿತ್ತು. ಆನಂತರ ಹೈಕೋರ್ಟ್ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ಅರ್ಜಿದಾರರ ಪಾತ್ರದ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಜಾಮೀನು ನಿರಾಕರಿಸಿತ್ತು.
ಈಗ ತನಿಖಾಧಿಕಾರಿ ಆರೋಪ ಪಟ್ಟಿ ಸಲ್ಲಿಸಿದ್ದು, ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದೆ.
ಈಗಾಗಲೇ ಪ್ರಕರಣದಲ್ಲಿ ಬಂಧಿತರಾಗಿದ್ದ ಮಹಾರಾಷ್ಟ್ರದ ಸುರೇಶ ಕಾಟೆಗಾಂವ್, ಕಾಳಿದಾಸ, ದಿವ್ಯಾ ಕಾರು ಚಾಲಕ, ಕಲಬುರಗಿಯ ಸದ್ದಾಂ, ಮಲ್ಲಿಕಾರ್ಜುನ ಮೇಳಕುಂದಿಗೆ ಜಾಮೀನು ನೀಡಲಾಗಿದೆ.
ಪ್ರಮುಖ ಆರೋಪಿಗಳಾದ ದಿವ್ಯಾ ಹಾಗರಗಿ, ಆರ್.ಡಿ. ಪಾಟೀಲ, ಮಂಜುನಾಥ ಮೇಳಕುಂದಿ, ಕಾಶಿನಾಥ ಚಿಲ್ಲ ಹಾಗೂ ಅಭ್ಯರ್ಥಿಗಳು ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕರಿಸಲಾಗಿದೆ.
ಸಿಐಡಿ ಇಲ್ಲಿಯವರೆಗೆ ಮೂರು ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.