ADVERTISEMENT

Karnataka Rains | ಮಡಿಕೇರಿ ಸೇರಿ ಕೆಲವಡೆ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2024, 0:45 IST
Last Updated 17 ಆಗಸ್ಟ್ 2024, 0:45 IST
ಕಲಬುರಗಿ ನಗರದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಸಾಗಿದ ವಾಹನ ಸವಾರರು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಕಲಬುರಗಿ ನಗರದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಸಾಗಿದ ವಾಹನ ಸವಾರರು –ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್   

ಕಲಬುರಗಿ/ಮಡಿಕೇರಿ: ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಶುಕ್ರವಾರ ಬಿರುಸಿನ ಮಳೆಯಾಗಿದೆ. ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆಯೂ ಮಳೆ ಸುರಿದಿದೆ. 

ಕಲಬುರಗಿಯಲ್ಲಿ ಸಂಜೆ ಅರ್ಧಗಂಟೆ ಉತ್ತಮವಾಗಿ ಮಳೆ ಸುರಿಯಿತು. ಧಗೆಯಿಂದ ಕಂಗೆಟ್ಟ ಜನರಿಗೆ ನೆಮ್ಮದಿ ನೀಡಿತು. ಜಿಲ್ಲೆಯ ಶಹಾಬಾದ್‌, ಅಫಜಲಪುರ, ಕಾಳಗಿ, ಚಿಂಚೋಳಿಯಲ್ಲಿ ಮಳೆಯಾಯಿತು.

ಬೀದರ್‌ನಲ್ಲಿ ಸತತ ಎರಡನೇ ದಿನವೂ ಉತ್ತಮವಾಗಿ ಮಳೆಯಾಗಿದೆ. ಬಿರುಸಿನ ಮಳೆಗೆ ಇಲ್ಲಿನ ವಿದ್ಯಾನಗರ, ನಯಾ ಕಮಾನ, ಸಿದ್ದಿ ತಾಲೀಂ ಸುತ್ತಮುತ್ತ ರಸ್ತೆಗಳಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ಸಂಚಾರ ಅಸ್ತವ್ಯಸ್ತಗೊಂಡಿತು. ಔರಾದ್‌, ಭಾಲ್ಕಿ ಹಾಗೂ ಬಸವಕಲ್ಯಾಣದಲ್ಲಿ ಸಾಧಾರಣ ಮಳೆಯಾಗಿದೆ. ರಾಯಚೂರು, ಲಿಂಗಸುಗೂರು, ಮಸ್ಕಿ ಹಾಗೂ ಜಾಲಹಳ್ಳಿಯಲ್ಲಿ ಸಾಧಾರಣ ಮಳೆಯಾಯಿತು.

ADVERTISEMENT

ಮಡಿಕೇರಿ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 1 ಗಂಟೆಗಳ ಕಾಲ ಬಿರುಸಿನಿಂದ ಮಳೆ ಸುರಿಯಿತು. ಸಂಜೆ ಹೊತ್ತಿಗೆ ಮತ್ತೆ ಸಾಧಾರಣ ಮಳೆಯಾಯಿತು. ಕೊಡಗು ಜಿಲ್ಲೆಯ ಇನ್ನುಳಿದ ಕಡೆ ಬಿರುಸಿನ ಮಳೆಯಾಗಿಲ್ಲ.

ಚಿಕ್ಕಮಗಳೂರು ವರದಿ: ಜಿಲ್ಲೆಯ ಹಲವೆಡೆ ಶುಕ್ರವಾರ ಮಳೆಯಾಗಿದ್ದು, ಚಿಕ್ಕಮಗಳೂರು ಮತ್ತು ಆಲ್ದೂರಿನಲ್ಲಿ ಸಂಜೆ ಅಬ್ಬರದಿಂದ ಮಳೆ ಸುರಿಯಿತು.

ನಗರದ ಸುತ್ತಮುತ್ತ ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು. ಆಲ್ದೂರು ಸುತ್ತಮುತ್ತ ಅರ್ಧಗಂಟೆಗೂ ಹೆಚ್ಚು ಕಾಲ ಜೋರು ಮಳೆ ಸುರಿಯಿತು. ಕಡೂರು ಸುತ್ತಮುತ್ತ ಬಿರುಸಿನ ಮಳೆ ಸುರಿಯಿತು. ತರೀಕೆರೆ, ಕೊಪ್ಪ, ಕಳಸ ಸುತ್ತಮುತ್ತ ಸಾಧಾರಣ ಮಳೆಯಾಯಿತು.

ಬಾಗಲಕೋಟೆ ವರದಿ: ಜಿಲ್ಲೆಯ ಬನಹಟ್ಟಿ ಹಾಗೂ ಹುನಗುಂದದಲ್ಲಿ ಶುಕ್ರವಾರ ಭಾರಿ ಮಳೆಯಾಯಿತು. ಬನಹಟ್ಟಿಯ ಮಂಗಳವಾರ ಪೇಟೆ, ಸೋಮವಾರ ಪೇಟೆ ಮತ್ತು ಜಮಖಂಡಿ–ಕುಡಚಿ ರಾಜ್ಯ ಹೆದ್ದಾರಿ ಸಂಪೂರ್ಣ ಜಲಾವೃತವಾಗಿದ್ದವು.

ಗುಡ್ಡ ಪ್ರದೇಶದಿಂದ ರಭಸದ ಮಳೆ ನೀರು ಮಗ್ಗದ ಮನೆಗಳಿಗೆ ನುಗ್ಗಿ ಬಹಳಷ್ಟು ಬೀಮ್‌ಗಳಿಗೆ ತೊಂದರೆಯಾಗಿದೆ. ಸ್ಥಳೀಯ ಎಸ್‌ಆರ್‌ಎ ಮೈದಾನ ನೀರಿನಿಂದ ತುಂಬಿತ್ತು. ನೀರಿನ ರಭಸಕ್ಕೆ ಕಾಲೇಜು ತಡೆಗೋಡೆ ಕೊಚ್ಚಿ ಹೋಗಿದೆ.

ಬೀದರ್‌ನಲ್ಲಿ ಶುಕ್ರವಾರ ಸುರಿದ ಬಿರುಸಿನ ಮಳೆಗೆ ವಿದ್ಯಾನಗರದ ಮುಖ್ಯರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸಂಚಾರಕ್ಕೆ ತೊಡಕಾಯಿತು. –ಪ್ರಜಾವಾಣಿ ಚಿತ್ರ: ಲೋಕೇಶ ವಿ. ಬಿರಾದಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.