ADVERTISEMENT

ಕಲಬುರಗಿ | ಭುವನೇಶ್ವರಿಗೆ ನಮನ; ಕನ್ನಡ ಗೀತೆಗಳ ಅನುರಣನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2024, 3:49 IST
Last Updated 2 ನವೆಂಬರ್ 2024, 3:49 IST
ಕಲಬುರಗಿ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ 69ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಪ್ರಭಾರ ಜಿ.ಪಂ. ಸಿಇಒ ಆಗಿರುವ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಪಾಲ್ಗೊಂಡಿದ್ದರು
ಕಲಬುರಗಿ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ 69ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಪ್ರಭಾರ ಜಿ.ಪಂ. ಸಿಇಒ ಆಗಿರುವ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಪಾಲ್ಗೊಂಡಿದ್ದರು   

ಕಲಬುರಗಿ: ಒಂದೆಡೆ ನಾಡು–ನುಡಿಗೆ ಸಂಬಂಧಿಸಿದ ಕನ್ನಡ ಗೀತೆಗಳ ಗಾಯನ–ಗಾನ. ಮತ್ತೊಂದೆಡೆ ನಾಡದೇವಿ ಭುವನೇಶ್ವರಿಗೆ ಪೂಜೆ–ಪುಷ್ಪ ನಮನ. ನೆರೆದಿದ್ದವರಲ್ಲಿ ಅಚ್ಚಕನ್ನಡದ ಉತ್ಕಟ ಪ್ರೇಮದ ಪ್ರತೀಕವಾಗಿ ಕೊರಳಲ್ಲಿ ಹಳದಿ–ಕೆಂಪು ಶಾಲುಗಳು, ಕೈಗಳಲ್ಲಿ ನಾಡಧ್ವಜ ಹಿಡಿದ ಪುಳಕ. ಕನ್ನಡದ ನಾಡಿನ ಗರಿಮೆ ಸಾರುವ ಭಾಷಣ...

ಇದು ನಗರದ ವಿವಿಧೆಡೆ ಶುಕ್ರವಾರ ಆಚರಿಸಲಾದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮಗಳ ಝಲಕ್‌. ಬೆಳಕಿನ ಹಬ್ಬ ದೀಪಾವಳಿ ಸಡಗರದ ನಡುವೆಯೂ ರಾಜ್ಯೋತ್ಸವವನ್ನು ಸಂಭ್ರಮ ಆಚರಿಸಿ ಕನ್ನಡಪ್ರೇಮ ಮೆರೆದರು.

ಜಿ.ಪಂ. ಕಚೇರಿ:

ಕಲಬುರಗಿ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ಶುಕ್ರವಾರ 69ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಪ್ರಭಾರ ಜಿ.ಪಂ. ಸಿಇಒ ಆಗಿರುವ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ರಾಷ್ಟ್ರಧ್ವಜಾರೋಹಣ ನಡೆಸಿದರು. ಬಳಿಕ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮಣ ಶೃಂಗೇರಿ, ಯೋಜನಾ ನಿರ್ದೇಶಕ ಜಗದೇವಪ್ಪ ಬಿ., ಮುಖ್ಯ ಯೋಜನಾಧಿಕಾರಿ ಎಸ್.ಎಸ್.ಮಠಪತಿ, ಸಿಎಒ ವಿಕಾಸ ಸಜ್ಜನ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ADVERTISEMENT

ಕಾರಾಗೃಹದಲ್ಲಿ ರಕ್ತದಾನ:

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಕರ್ನಾಟಕ ರಾಜ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಆರ್., ‘ರಕ್ತದಾನ ಮಹಾದಾನವಾಗಿದೆ. ಪ್ರತಿಯೊಬ್ಬರು ರಕ್ತದಾನ ಮಾಡಬೇಕು. ಈ ಕುರಿತು ಇತರರಿಗೂ ಅರಿವು ಮೂಡಿಸಿ, ರಕ್ತದಾನಕ್ಕೆ ಪ್ರೋತ್ಸಾಹಿಸಬೇಕು’ ಎಂದು ಸಲಹೆ ನೀಡಿದರು.

ಕಾರಾಗೃಹದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕೆಎಸ್ಐಎಸ್ಎಫ್ ಸಿಬ್ಬಂದಿ ರಕ್ತದಾನ ಮಾಡಿದರು. ಜಿಮ್ಸ್ ಆಸ್ಪತ್ರೆ ರಕ್ತದಾನ ನಿಧಿ ಸಂಸ್ಥೆಯ ಡಾ.ಮಮತಾ ವಿ. ಪಾಟೀಲ ಮತ್ತು ತಂಡ ಶಿಬಿರ ನೇತೃತ್ವವಹಿಸಿದ್ದರು.

ಇದಕ್ಕೂ ಮುನ್ನ ರಾಜ್ಯೋತ್ಸವ ಅಂಗವಾಗಿ ಡಾ.ಅನಿತಾ ಆರ್. ಭುವನೇಶ್ವರಿ ಚಿತ್ರಕ್ಕೆ ಪುಷ್ಪಾರ್ಚಣೆ ಮಾಡಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.

ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ್ ಡಾಂಗೆ, ಸಹಾಯಕ ಅಧೀಕ್ಷಕ ಚನ್ನಪ್ಪ, ಡಾ.ಅರ್ಚನಾ, ಡಾ.ಆನಂದ ಅಡಕಿ, ಕಚೇರಿ ಅಧೀಕ್ಷಕ ಗುರುಶೇಶ್ವರ ಶಾಸ್ತ್ರಿ, ಜೈಲರ್‌ಗಳಾದ ಸುನಂದಾ ವಿ., ಸಾಗರ ಪಾಟೀಲ ಸೇರಿದಂತೆ ಎಲ್ಲಾ ಸಹಾಯಕ ಜೈಲರ್‌ಗಳು, ಕಾರಾಗೃಹದ ಲಿಪಿಕ ಮತ್ತು ಕಾರ್ಯನಿರ್ವಾಹಕ ಅಧಿಕಾರಿ–ಸಿಬ್ಬಂದಿ ಇದ್ದರು. ಕಾರಾಗೃಹದ ಶಿಕ್ಷಕ ನಾಗಾರಾಜ ಮುಲಗೆ ಕಾರ್ಯಕ್ರಮ ನಡೆಸಿಕೊಟ್ಟರು.

ಕೆಕೆಆರ್‌ಟಿಸಿ ಕೇಂದ್ರ ಕಚೇರಿ:

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ರಾಜ್ಯೋತ್ಸವ ಸಡಗರ ಮನೆ ಮಾಡಿತ್ತು.

ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಭುವನೇಶ್ವರಿ ಚಿತ್ರಕ್ಕೆ ಪೂಜೆ ಸಲ್ಲಿಸಿ, ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ 2023–24ನೇ ಸಾಲಿನಲ್ಲಿ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ70 ಹಾಗೂ ಅದಕ್ಕೂ ಹೆಚ್ಚಿನ ಅಂಕಗಳಿಸಿದ ಮತ್ತು ಪದವಿಯಲ್ಲಿ ಶೇ60ಕ್ಕೂ ಹೆಚ್ಚು ಅಂಕ ‍ಪಡೆದ ನಿಗಮದ ಅಧಿಕಾರಿ/ನೌಕರರ ಮಕ್ಕಳಿಗೆ ನಗದು ಪುರಸ್ಕಾರ ವಿತರಿಸಿದರು.

ಈ ಸಂದರ್ಭದಲ್ಲಿ ನಿಗಮದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ರಾಷ್ಟ್ರಧ್ವಜಾರೋಹಣ:

ಅಬ್ದುಲ್‌ ನಜೀರ್‌ಸಾಬ್‌ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ಕೇಂದ್ರದಲ್ಲಿ ಶುಕ್ರವಾರ ಕರ್ನಾಟಕ ರಾಜ್ಯೋತ್ಸವ ಸಂಭ್ರಮ ಕಂಡು ಬಂತು.

ಪ್ರಾದೇಶಿಕ ಕೇಂದ್ರದ ಉಪ ನಿರ್ದೇಶಕ ಧನರಾಜ್‌ ಬೋರಾಳೆ ಭುವನೇಶ್ವರಿ ಚಿತ್ರಕ್ಕೆ ಪೂಜಿಸಿ, ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಬಳಿಕ ಕನ್ನಡ ಏಕೀಕರಣದ ಕುರಿತು ಮಾತನಾಡಿದರು.

ಬೋಧಕರಾದ ಶಿವಪುತ್ರಪ್ಪ ಗೊಬ್ಬೂರು, ರಾಜು ಕಂಬಳಿಮಠ, ಸಂತೋಷ ಎನ್.‌, ಆಡಳಿತ ಮತ್ತು ಲೆಕ್ಕಾಧಿಕಾರಿ ಸಾಕ್ಷಿ ಪಾಟೀಲ, ವ್ಯವಸ್ಥಾಪಕ ಪ್ರಶಾಂತ ಅಂಗಡಿ, ಸಿಬ್ಬಂದಿ ಅರ್ಚನಾ ಪಾಟೀಲ, ಅಶ್ವಿನಿ ಪೂಜಾರಿ, ಶಾಂತಪ್ಪ, ಪ್ರಶಾಂತ, ನಾಗರಾಜ, ನೀತಿನ್‌ ಪಾಟೀಲ, ನಿಂಗಪ್ಪ ಉಪಸ್ಥಿತರಿದ್ದರು.

‘ದೈನಂದಿನ ಆಡಳಿತದಲ್ಲಿ ಕನ್ನಡವನ್ನೇ ಬಳಸಿ’

ಕಲಬುರಗಿ: ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎನ್ನುವ ಚನ್ನವೀರ ಕಣವಿಯವರ ಕವಿವಾಣಿಯಂತೆ ಅಧಿಕಾರಿಗಳು–ನೌಕರರು ತಮ್ಮ ದೈನಂದಿನ ಆಡಳಿತ ವ್ಯವಹಾರದಲ್ಲಿ ಕನ್ನಡವನ್ನೇ ಬಳಸಬೇಕು’ ಎಂದು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣನವರ ಹೇಳಿದರು.

ನಗರದ ಜೆಸ್ಕಾಂ ನಿಗಮದ ಕಚೇರಿ ಆವರಣದಲ್ಲಿ ಕವಿಪ್ರನಿನಿ ಮತ್ತು ಗುವಿಸಕಂನಿ ಕನ್ನಡ ಸಂಘದಿಂದ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಅಂಗವಾಗಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಸಮಾರಂಭದಲ್ಲಿ ನಿಗಮದ ಪ್ರಧಾನ ವ್ಯವಸ್ಥಾಪಕ ಆಶಪ್ಪ ಪ್ರಸರಣ ವಲಯದ ಮುಖ್ಯ ಎಂಜಿನಿಯರ್ ಗಿರಿಧರ ಕುಲಕರ್ಣಿ ಕಂಪನಿ ಕಾರ್ಯದರ್ಶಿ ಕಿರಣ ಪೊಲೀಸ್‌ಪಾಟೀಲ ಜಾಗೃತ ದಳದ ಪ್ರಭಾರ‌ ಎಸ್ಪಿ ಸುಬೇದಾರ ಕನ್ನಡ ಸಂಘದ ಅಧ್ಯಕ್ಷ ಮಹ್ಮದ್ ಮಿನ್ಹಾಜುದ್ದೀನ್ ಕವಿಪ್ರನಿನಿ ನೌಕರರ ಸಂಘದ ಉಪಾಧ್ಯಕ್ಷ ಬಾಬು ಕೋರೆ ಕವಿಮಂ ಎಂಜಿನಿಯರ್‌ಗಳ ಸಂಘದ ವಿಶ್ವನಾಥ ರೆಡ್ಡಿ ಎಸ್ಸಿಎಸ್ಟಿ ಕಲ್ಯಾಣ ಸಂಸ್ಥೆಯ ಕಾರ್ಯಾಧ್ಯಕ್ಷ ಬಿ.ಆರ್.ಬುದ್ಧ ಡಿ.ಇಂ. ಸಂಘದ ಸಂಘಟನಾ ಕಾರ್ಯದರ್ಶಿ ವೆಂಕಟಜೀವನ ಉಪಸ್ಥಿತರಿದ್ದರು. ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಶೇರಿಕಾರ್ ನಿರೂಪಿಸಿದರು.

ರಾಜ್ಯೋತ್ಸವ ದಿನಾಚರಣೆ ಅಂಗವಾಗಿ ರಸಮಂಜರಿ ಕಾರ್ಯಕ್ರಮಗಳು ಅದ್ದೂರಿಯಾಗಿ ಜರುಗಿದವು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ನೌಕರರ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.