ಜೇವರ್ಗಿ: ತಾಲ್ಲೂಕಿನ ಆಂದೋಲಾ ಗ್ರಾಮದಲ್ಲಿ ಆದಿಯೋಗಿ ಪುತ್ಥಳಿ ಅನಾವರಣ, ಭಾರತಮಾತಾ ಪೂಜೆ ಹಾಗೂ ಮಾತೃ ಸಮಾವೇಶ ಕಾರ್ಯಕ್ರಮವನ್ನು ಕಾಶಿ ಪೀಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು.
ಕಳೆದ ಮೂರು ದಿನಗಳ ಕಾಲ ಗ್ರಾಮದ ಆಂದೋಲಾ ಕರುಣೇಶ್ವರ ಮಠದ ಆವರಣದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜನಸಾಗರವೇ ಹರಿದು ಬಂದಿತ್ತು. ಗುರುವಾರ ಆದಿಯೋಗಿ ಪುತ್ಥಳಿ ಅನಾವರಣಕ್ಕೆ ಸಾವಿರಾರು ಮಹಿಳೆಯರು ಶಿವಾರತಿ ಹೊತ್ತು ಬಂದಿದ್ದು ಕಾರ್ಯಕ್ರಮದ ಸಂಭ್ರಮ ಇನ್ನಷ್ಟು ಹೆಚ್ಚಿಸಿತ್ತು.
ಬುಧವಾರ ನಡೆದ ಸಂತರ ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಸುಮಾರು 200ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಿ ಧರ್ಮದ ಮಾರ್ಗದ ಬಗ್ಗೆ ಭಕ್ತರಿಗೆ ಸಾರಿದರು.
ಮಾತೃ ಸಮಾವೇಶ ನಂತರ ಆಂದೋಲಾ ಕರುಣೇಶ್ವರ ಮಠದ ಆವರಣದಿಂದ ಹೋರಟ ಶಿವಾರತಿ ಬಸವೇಶ್ವರರ ಪುತ್ಥಳಿವರೆಗೆ ಮೆರವಣಿಗೆ ನಡೆಸಿ ನಂತರ ಆದಿಯೋಗಿ ಪುತ್ಥಳಿ ಬಳಿ ತೆರಳಿ ಶಿವನಿಗೆ ಭಕ್ತಿ ಪೂರಕವಾಗಿ ಆರತಿ ಮಾಡಿದರು.
ಕಾರ್ಯಕ್ರಮದಲ್ಲಿ ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಸಿದ್ಧಲಿಂಗ ಸ್ವಾಮೀಜಿ, ನಾಲವಾರದ ಸಿದ್ಧತೊಟೇಂದ್ರ ಸ್ವಾಮೀಜಿ, ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಅರುಣಕುಮಾರ ಪಾಟೀಲ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಶೋಭಾ ಬಾಣಿ, ಗುರುಲಿಂಗಪ್ಪಗೌಡ ಆಂದೋಲಾ, ಗೌಡಪ್ಪಗೌಡ ಪಾಟೀಲ, ಸಂಗನಗೌಡ ಮಾಲಿಪಾಟೀಲ, ಸಿದ್ದು ಸಾಹು ಅಂಗಡಿ, ದಂಡಪ್ಪಗೌಡ ಕುರಳಗೇರಾ, ಸಿದ್ದಣ್ಣ ಹೂಗಾರ, ದೇವಿಂದ್ರಪ್ಪಗೌಡ ಮಾಗಣಗೇರಿ, ಶರಣಗೌಡ ಬಿರೆದಾರ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ರವಿ ಪಡಶೆಟ್ಟಿ, ಬಾಗೇಶ ಹೋತಿನಮಡು, ಪ್ರಶಾಂತಗೌಡ ಪಾಟೀಲ ಜೈನಾಪುರ, ರಾಕೇಶ ಹರಸೂರ ಸೇರಿದಂತೆ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.