ಕಲಬುರಗಿ: ಬ್ಲೂಟೂತ್ ಸಾಧನ ಬಳಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆ ಬರೆದ ಅಕ್ರಮ ಪ್ರಕರಣದಲ್ಲಿ ಆರೋಪಿಗಳಿಂದ ವಶಕ್ಕೆ ಪಡೆಯಲಾದ ಮೊಬೈಲ್‌ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಸೋಮವಾರ ಕಳುಹಿಸಲಾಗಿದೆ.
ಸುಮಾರು 14 ಮೊಬೈಲ್‌ಗಳನ್ನು ಬೆಂಗಳೂರಿನ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ಕೊನೆಯ ಬಾರಿಗೆ ಯಾರಿಗೆ ಕರೆ ಮಾಡಿದ್ದರು? ಏನೆಲ್ಲ ದತ್ತಾಂಶ ಇತ್ತು ಎಂಬುದು ಎಫ್‌ಎಸ್‌ಎಲ್‌ನಿಂದ ತಿಳಿದುಬರಲಿದೆ. ಅದರಲ್ಲಿನ ದತ್ತಾಂಶದಿಂದ ಮುಂದಿನ ತನಿಖೆಗೆ ನೆರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸಿಐಡಿ ವಶದಲ್ಲಿದ್ದು ವಿಚಾರಣೆ ಎದುರಿಸಿದ್ದ ಮೂವರ ಪೈಕಿ ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ಒಬ್ಬರನ್ನು ಉಳಿಸಿಕೊಳ್ಳಲಾಗಿದೆ. ಭದ್ರತೆಯ ದೃಷ್ಟಿಯಿಂದ ನಿತ್ಯ ಒಬ್ಬೊಬ್ಬರನ್ನು ಕರೆಸಿಕೊಂಡು ವಿಚಾರಣೆ ಮಾಡಲಾಗುತ್ತಿದೆ. ಅವರ ನೀಡುವ ಹೇಳಿಕೆಯನ್ನು ಪರಾಮರ್ಶೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಬಂಧ ವಶಕ್ಕೆ ಪಡೆಯಲಾದ ಮೊಬೈಲ್‌ಗಳನ್ನು ಭಾನುವಾರವೇ ಎಫ್‌ಎಸ್‌ಎಲ್ ಕಳುಹಿಸಲಾಗಿದೆ. ಇನ್ನಷ್ಟು ಮೊಬೈಲ್ ಜಪ್ತಿ ಮಾಡಿ, ಅವುಗಳನ್ನೂ ಕಳುಹಿಸಲಾಗುವುದು ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.