ಕಲಬುರಗಿ: ಬ್ಲೂಟೂತ್ ಸಾಧನ ಬಳಸಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಪರೀಕ್ಷೆ ಬರೆಯಲು ನೆರವಾದ ಅಕ್ರಮ ಪ್ರಕರಣದಲ್ಲಿ ಬಂಧಿತ ಪ್ರಮುಖ ಆರೋಪಿ ಆರ್.ಡಿ. ಪಾಟೀಲ ಸೇರಿ 12 ಆರೋಪಿಗಳ ವಿರುದ್ಧ ಸಿಐಡಿ ಪೊಲೀಸರು ‘ಕೋಕಾ’ (ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ)–2000 ಅಸ್ತ್ರ ಪ್ರಯೋಗಿಸಲಾಗಿದೆ.
ಅಶೋಕ ನಗರ ಠಾಣೆ ವ್ಯಾಪ್ತಿಯ ಖಾಸಗಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿದ ಸಂಬಂಧ ಪರೀಕ್ಷಾ ಅಭ್ಯರ್ಥಿಗಳು ಸೇರಿ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಮೂವರು ಅಭ್ಯರ್ಥಿಗಳನ್ನು ಬಿಟ್ಟು 12 ಆರೋಪಿಗಳ ವಿರುದ್ಧ ಸಿಐಡಿ ಪೊಲೀಸರು ಮಂಗಳವಾರ ‘ಕೋಕಾ’ ಪ್ರಕರಣ ದಾಖಲಿಸಿದ್ದಾರೆ.
ಸಿಐಡಿ ಡಿವೈಎಸ್‌ಪಿಗಳಾದ ಶಂಕರಗೌಡ ಪಾಟೀಲ, ತನ್ವೀರ್ ನೇತೃತ್ವದ ತಂಡ ತನಿಖೆ ನಡೆಸುತ್ತಿದೆ.
ಪ್ರಮುಖ ಆರೋಪಿ ಆರ್.ಡಿ. ಪಾಟೀಲ, ನೆಲೋಗಿ ಮೂಲದ ಬೆಳಗಾವಿಯ ಅಥಣಿಯ ಸಣ್ಣ ನೀರಾವರಿ ಇಲಾಖೆಯ ಎಇ ರುದ್ರಗೌಡ, ರಾಯಲ್ ಪಬ್ಲಿಕ್ ಶಾಲಾ ಕೇಂದ್ರದ ಮುಖ್ಯಸ್ಥನಾಗಿದ್ದ ಚಂದ್ರಕಾಂತ ಬುರಕಲ್ ಹಾಗೂ ಕಸ್ಟೋಡಿಯನ್ ಆಗಿದ್ದ ಬಸಣ್ಣ (ಬಸವರಾಜ) ಪೂಜಾರಿ, ಪ್ರಶ್ನೆ ಪತ್ರಿಕೆ ಸೋರಿಕೆಗಾಗಿ ಪ್ರಾಂಶುಪಾಲರನ್ನು ಭೇಟಿ ಮಾಡಿದ್ದ ಸಂತೋಷ ಕಟ್ಟೊಳಿ, ಡೀಲ್ ಮಾಡಿಕೊಂಡ ಅಭ್ಯರ್ಥಿಗಳ ಪಟ್ಟಿ ಮಾಡುತ್ತಿದ್ದ ಶಶಿಧರ ಜಮಾದಾರ, ಬ್ಲೂಟೂತ್ ಡಿವೈಸ್ ತರಿಸಿಕೊಂಡು ಅಭ್ಯರ್ಥಿಗಳಿಗೆ ಪೂರೈಸುತ್ತಿದ್ದ ಸಾಗರ್, ಶಿವಕುಮಾರ ಸೇರಿ ಒಟ್ಟು 12 ಆರೋಪಿಗಳ ವಿರುದ್ಧ ‘ಕೋಕಾ’ ಪ್ರಕರಣ ದಾಖಲಾಗಿದೆ ಎಂದು ಸಿಐಡಿ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಈ ಹಿಂದೆ ಜಾಮೀನು ನೀಡುವಾಗ ಇಂತಹ ಅಕ್ರಮದಲ್ಲಿ ಭಾಗಿಯಾಗದಂತೆ ಪ್ರಮುಖ ಆರೋಪಿಗೆ ಹೈಕೋರ್ಟ್ ಎಚ್ಚರಿಸಿತ್ತು. ಅದನ್ನು ಲೆಕ್ಕಿಸದೆ ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಪದೇ ಪದೇ ಅಕ್ರಮ ಎಸಗಿದ ಆರೋಪ ಕೇಳಿಬಂದಿತ್ತು. ಇದರಿಂದ ಪಾರದರ್ಶಕವಾಗಿ ಪರೀಕ್ಷೆ ನಡೆಸುವುದಕ್ಕೆ ಅಡ್ಡಿಯಾಗುತ್ತಿತ್ತು. ಹೀಗಾಗಿ, ಸಿಐಡಿ ಡಿಜಿಪಿ ಎಂ.ಎ.ಸಲೀಂ, ಸಿಐಡಿ ಡಿಐಜಿ ಸುಧೀರಕುಮಾರ ರೆಡ್ಡಿ ಸೇರಿ ಇತರೆ ಮೇಲಾಧಿಕಾರಿಗಳಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಅವರ ಒಪ್ಪಿಗೆ ಪಡೆದು ‘ಕೋಕಾ’ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ ಎಂದರು.
‘ಕೋಕಾ’ ಅಡಿ ಪ್ರಕರಣ ದಾಖಲಿಸಬೇಕಾದರೆ, ಆರೋಪಿಗಳ ವಿರುದ್ಧ ಕನಿಷ್ಠ ಎರಡು ಪ್ರಕರಣಗಳಾದರೂ ದಾಖಲಾಗಿರಬೇಕು. ಆದರೆ, ಪ್ರಮುಖ ಆರೋಪಿ ವಿರುದ್ಧ ಕೆಇಎ ನೇಮಕಾತಿ ಅಕ್ರಮ ಸಂಬಂಧ ಅಫಜಲಪುರ ಪೊಲೀಸ್ ಠಾಣೆ, ಗುಲಬರ್ಗಾ ವಿಶ್ವವಿದ್ಯಾಲಯ ಠಾಣೆ ಹಾಗೂ ಈ ಹಿಂದೆ ನಡೆದಿದ್ದ ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಈ ಪ್ರಕರಣದಲ್ಲಿ ಆರೋಪಿಗಳಿಗೆ ಸುಲಭಕ್ಕೆ ಜಾಮೀನು ಸಿಗುವುದಿಲ್ಲ, ಒಮ್ಮೆ ಆರೋಪ ಸಾಬೀತಾದರೆ 5 ವರ್ಷಗಳಿಂದ ಜೀವಾವಧಿವರೆಗೂ ಶಿಕ್ಷೆಯಾಗುವ ಸಾಧ್ಯತೆ ಇರುತ್ತದೆ ಎಂದು ಮಾಹಿತಿ ನೀಡಿದರು.
ಕಲಬುರಗಿ ನಗರದಲ್ಲಿ ಈ ಹಿಂದೆ ನಡೆದಿದ್ದ ಶ್ರೀಕಾಂತ ರೆಡ್ಡಿ ಮೇಲಿನ ಹಲ್ಲೆ ಪ್ರಕರಣ ಸಂಬಂಧ ಪೊಲೀಸರು ಐವರು ರೌಡಿಶೀಟರ್‌ಗಳ ವಿರುದ್ಧ ‘ಕೋಕಾ’ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಕೆಇಎ ಅಕ್ರಮದ ಆರೋಪಿಗಳ ವಿರುದ್ಧವೂ ಇದೇ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.