ADVERTISEMENT

‘ಬೆಂಗಳೂರು ಕಟ್ಟುವಲ್ಲಿ ಕೆಂಪೇಗೌಡರ ಪಾತ್ರ ಹಿರಿದು’

​ಪ್ರಜಾವಾಣಿ ವಾರ್ತೆ
Published 28 ಜೂನ್ 2024, 6:50 IST
Last Updated 28 ಜೂನ್ 2024, 6:50 IST
ಕಲಬುರಗಿಯಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕ ಗಣ್ಯರು ಪುಷ್ಪಾರ್ಚನೆ ಮಾಡಿದರು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡರ ಜಯಂತಿ ಅಂಗವಾಗಿ ಕೆಂಪೇಗೌಡರ ಭಾವಚಿತ್ರಕ್ಕ ಗಣ್ಯರು ಪುಷ್ಪಾರ್ಚನೆ ಮಾಡಿದರು –ಪ್ರಜಾವಾಣಿ ಚಿತ್ರ   

ಕಲಬುರಗಿ: ‘ಬೆಂಗಳೂರನ್ನು ಕಟ್ಟುವಲ್ಲಿ ಕೆಂಪೇಗೌಡರ ಶ್ರಮ ಹಾಗೂ ತ್ಯಾಗ ಅಪಾರವಾಗಿದೆ’ ಎಂದು ಸಂಪನ್ಮೂಲ ವ್ಯಕ್ತಿ ಶಶಿಕಾಂತ ಆರ್.ಖುಷಿಗೌಡ ಹೇಳಿದರು.

ನಗರದ ಡಾ.ಎಸ್‌.ಎಂ. ಪಂಡಿತ್ ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಹಾಗೂ ಜಿಲ್ಲಾ ಪಂಚಾಯಿತಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕೆಂಪೇಗೌಡರ ತಂದೆ ಕೆಂಪನಂಜೇಗೌಡರು ವಿಜಯನಗರದ ಸಾಮ್ರಾಜ್ಯದ ಅರಸರ ಸಾಮಂತರಾಗಿದ್ದರು. ತಂದೆಯ ಕಾಲವಾದ ನಂತರ ಕೆಂಪೇಗೌಡರು ಸಾಮಂತರಾಗಿ ಮುಂದುವರಿದರು. ಕೆಂಪೇಗೌಡರ ಆಳ್ವಿಕೆಯಲ್ಲಿ ವಿಜಯನಗರದಲ್ಲಿ ಅಚ್ಯುತರಾಯರು ಅರಸರಾಗಿದ್ದರು’ ಎಂದರು.

ADVERTISEMENT

‘ವಿಜಯನಗರದಂತೆ ಮತ್ತೊಂದು ಮಹಾನಗರ ಕಟ್ಟವ ಕನಸು ಕಂಡ ಕೆಂಪೇಗೌಡರು ನವನಗರ ನಿರ್ಮಾಣಕ್ಕೆ ಮುಂದಾದರು. ನಿರ್ಮಾಣಕ್ಕೆ ಬೇಕಾದ ಸಕಲ ಸಿದ್ಧತೆ ಮಾಡಿಕೊಂಡು, ಸಂಬಂಧಪಟ್ಪ ಎಲ್ಲ ತಜ್ಞರನ್ನು ಕರೆಯಿಸಿ, ಅವರ ಸಲಹೆಗಳನ್ನು ಪಡೆದು ಸುಸಜ್ಜಿತವಾದ ನವನಗರ ನಿರ್ಮಾಣ ಮಾಡಿದರು. ಎಲ್ಲಾ ವರ್ಗದವರಿಗೆ ಅನುಕೂಲ ಆಗುವಂತಹ ಮಾರುಕಟ್ಟೆ ನಿರ್ಮಿಸಿದರು. ಈಗಿನ ರಾಜ್ಯ ರಾಜಧಾನಿ ಬೆಂಗಳೂರಿಗೆ ಭದ್ರವಾದ ಬುನಾದಿ ಹಾಕಿದ್ದರು’ ಎಂದು ಹೇಳಿದರು.

ಜಿಲ್ಲಾ ಕುಡುಒಕ್ಕಲಿಗ ಅಭಿವೃದ್ಧಿ ಸೇವಾ ಸಂಘದ ಅಧ್ಯಕ್ಷ ಶಿವಯೋಗಪ್ಪ ಜಿ.ಚಿತ್ತಾಪುರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಟ್ಯಂಜಲಿ ಕಲಾ ಕೇಂದ್ರ ಹಾಗೂ ಪ್ರಿಯ ನೃತ್ಯ ಕಲಾ ಸಂಸ್ಥೆಯ ಕಲಾವಿದರು ಭರತನಾಟ್ಯ ಪ್ರದರ್ಶನ ನೀಡಿದರು.

ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸತೀಶಕುಮಾರ, ಶಿಷ್ಠಚಾರ ತಹಶೀಲ್ದಾರ್ ನಿಸಾರ್ ಅಹಮದ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ಸಂಘದ ರಾಜ್ಯಧ್ಯಕ್ಷರು ಶಿವರಾಜ ಪಾಟೀಲ, ಪಿಎಸ್‌ಐ ಯಶೋಧಾ ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.

‘ಕಾಟಾಚಾರಕ್ಕೆ ಜಯಂತಿ ಆಯೋಜನೆ’

‘ಮಹನೀಯರ ಸಾಧನೆ ಮತ್ತು ಆದರ್ಶಗಳನ್ನು ಇಂದಿನ ಯುವಕರಿಗೆ ತಿಳಿಸುವ ಉದ್ದೇಶದಿಂದ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಕೆಂಪೇಗೌಡರ ಜಯಂತಿಯನ್ನು ಕಾಟಾಚಾರಕ್ಕೆ ಆಯೋಜಿಸಿಕೊಂಡು ಬರಲಾಗುತ್ತಿದೆ. ನಗರದಲ್ಲೇ ಅಧಿಕಾರಿಗಳು ಜನಪ್ರತಿನಿಧಿಗಳು ಇದ್ದರೂ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ’ ಎಂದು ಸಂಘದ ಉಪಾಧ್ಯಕ್ಷ ಗುರುನಾಥ ದೇಸಾಯಿ ಬೇಸರ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.