ADVERTISEMENT

ಶಹಾಬಾದ್ | ಕೆರೆಯಮ್ಮ ದೇವಿ ಜಾತ್ರಾಮಹೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಜೂನ್ 2024, 16:05 IST
Last Updated 23 ಜೂನ್ 2024, 16:05 IST
ಶಹಾಬಾದ್‌ ತಾಲ್ಲೂಕಿನ ಭಂಕೂರ ಗ್ರಾಮದಲ್ಲಿ ಕಾರಹುಣ್ಣಿಮೆ ಕರಿ ನಿಮಿತ್ತ ಗ್ರಾಮದೇವತೆ ಕೆರೆಯಮ್ಮ ದೇವಿಯ ಬಂಡಿ ದಿಬ್ಬಂದಿದ ಇಳಿಯುತ್ತಿರುವುದು
ಶಹಾಬಾದ್‌ ತಾಲ್ಲೂಕಿನ ಭಂಕೂರ ಗ್ರಾಮದಲ್ಲಿ ಕಾರಹುಣ್ಣಿಮೆ ಕರಿ ನಿಮಿತ್ತ ಗ್ರಾಮದೇವತೆ ಕೆರೆಯಮ್ಮ ದೇವಿಯ ಬಂಡಿ ದಿಬ್ಬಂದಿದ ಇಳಿಯುತ್ತಿರುವುದು   

ಶಹಾಬಾದ್: ತಾಲ್ಲೂಕಿನ ಭಂಕೂರ ಗ್ರಾಮದಲ್ಲಿ ಕಾರಹುಣ್ಣಿಮೆ ಕರಿ ನಿಮಿತ್ತ ಕೆರೆಯಮ್ಮ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ದಿಬ್ಬದಿಂದ ಬಂಡಿ ಇಳಿಯುವ ಮೈನವಿರೇಳಿಸುವ ದೃಶ್ಯಕ್ಕೆ ಜನ ಸಾಗರವೇ ಸಾಕ್ಷಿಯಾದರು.

ಶನಿವಾರ ಮಧ್ಯಾಹ್ನ ಗ್ರಾಮದ ಅಂಕಲಮ್ಮಾ ದೇವ ದೇವಸ್ಥಾನದ ಬಳಿ ದೇವಿ ಬಂಡಿಗೆ ಬಿಳಿ ಬಟ್ಟೆ, ಬೇವಿನ ಸೊಪ್ಪಿನಿಂದ ಸಿಂಗರಿಸಲಾಯಿತು. ನಂತರ ವಿವಿಧ ವಾದ್ಯವೃಂದದೊಂದಿಗೆ ಕುಂಭ ಪೂಜೆ ನಡೆದ ನಂತರ, ಗ್ರಾಮದ ದತ್ತಾತ್ರೇಯ ಕುಲಕರ್ಣಿ, ತಳವಾರರ ಮನೆಯಿಂದ ತಂದು ಕೊಟ್ಟ ಖಡ್ಗ ಹಿಡಿದು ಬಂಡಿ ಏರಿದರು. ಪ್ರಮುಖ ಬೀದಿಗಳಲ್ಲಿ ಬಂಡಿಯ ಭವ್ಯ ಮೆರವಣಿಗೆ ನಡೆಯಿತು.

ಸಂಜೆ ಬಂಡಿ ಕರೆಯಮ್ಮಾ ದೇವಿ ದೇವಸ್ಥಾನಕ್ಕೆ ಬಂದ ನಂತರ, ದತ್ತಾತ್ರೇಯ ಕುಲಕರ್ಣಿ, ಶಂಕರಗೌಡ ಮಜ್ಜಿಗೆ ಅವರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಂಡಿಯ ಹೂಡುವ ಮುಖ್ಯ ಎತ್ತುಗಳು ಮಾಲಿಪಾಟೀಲ ಅವರ ಎತ್ತುಗಳನ್ನು ಹೂಡಲಾಯಿತು. ನಂತರ ಎತ್ತರ ದಿಬ್ಬ ಏರಿದ ಬಂಡಿ, ಭಕ್ತರ ಜಯಘೋಷದೊಂದಿಗೆ ದಿಬ್ಬದಿಂದ ಬಂಡಿ ಇಳಿಯುವ ಮೈನವಿರೇಳಿಸುವ ದೃಶ್ಯಕ್ಕೆ ಸಾವಿರಾರು ಜನ ಕಣ್ತುಂಬಿಕೊಂಡರು.

ADVERTISEMENT

ರಾತ್ರಿ 8 ಗಂಟೆಗೆ ಮುಖ್ಯ ದ್ವಾರಕ್ಕೆ ಕಟ್ಟಿದ್ದ ಕರಿ (ಬೇವಿನ ಎಲೆಗಳು)ಯನ್ನು ಓಡುತ್ತಿರುವ ಬಂಡಿಯಿಂದಲೇ ಖಡ್ಗ ಹಿಡಿದ ಕುಲಕರ್ಣಿ ಕರಿಯನ್ನು ಹರಿಯುವ ಮೂಲಕ ಕಾರಹುಣ್ಣಿಮೆ ಭಂಕೂರ ಕರಿ ಸಂಪನ್ನಗೊಂಡಿತು.

ಕಾರ್ಯಕ್ರಮದಲ್ಲಿ ಮುಖಂಡರಾದ ಚನ್ನವೀರಪ್ಪ ಮಾಲಿಪಾಟೀಲ, ಶಶಿಕಾಂತ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಬಸಪ್ಪ ಧನ್ನಾ, ನೀಲಕಂಠ ಪಾಟೀಲ, ವಿಜಯಕಾಂತ ಪಾಟೀಲ, ಈರಣ್ಣ ಕಾರ್ಗಿಲ್, ಅಮೃತ ಮಾನಕರ, ಅಮೃತ ಘಟ್ಟದ, ಲಕ್ಷ್ಮಿಕಾಂತ ಕಂದಗೋಳ ಸೇರಿದಂತೆ ಸಾವಿರಾರು ಜನ ಪಾಲ್ಗೊಂಡಿದ್ದರು.

ಶಹಾಬಾದ್ ತಾಲ್ಲೂಕಿನ ಭಂಕೂರ ಗ್ರಾಮ ದೇವತೆಯ ಕೆರೆಯಮ್ಮ ದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಸೇರಿದ ಜನಸ್ತೋಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.