ADVERTISEMENT

ವಕ್ಫ್ ಭೂ ಕಬಳಿಕೆಯಲ್ಲಿ ಖರ್ಗೆ, ಧರ್ಮಸಿಂಗ್ ಭಾಗಿ: ಬಸನಗೌಡ ಪಾಟೀಲ ಯತ್ನಾಳ ಆರೋಪ

ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ವಕ್ಫ್ ಉಲ್ಲೇಖವಿಲ್ಲ ಎಂದ ಕಿಡಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 15:40 IST
Last Updated 26 ನವೆಂಬರ್ 2024, 15:40 IST
ಚಿಂಚೋಳಿಯಲ್ಲಿ ಮಂಗಳವಾರ ನಡೆದ ಬಿಜೆಪಿಯ ವಕ್ಫ್ ವಿರೋಧಿ ಜನ ಜಾಗೃತಿ ಹೋರಾಟದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು
ಚಿಂಚೋಳಿಯಲ್ಲಿ ಮಂಗಳವಾರ ನಡೆದ ಬಿಜೆಪಿಯ ವಕ್ಫ್ ವಿರೋಧಿ ಜನ ಜಾಗೃತಿ ಹೋರಾಟದಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು   

ಚಿಂಚೋಳಿ: ‘ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ವಕ್ಫ್ ಮಂಡಳಿಯ ಉಲ್ಲೇಖವಿಲ್ಲ. ಕಾಶ್ಮೀರಕ್ಕೆ 370 ವಿಶೇಷ ಸ್ಥಾನಮಾನಕ್ಕೂ ಅಂಬೇಡ್ಕರ್ ವಿರೋಧವಿತ್ತು. ಆದರೆ ನೆಹರೂ ಅವರು ವಕ್ಫ್ ಕಾಯ್ದೆ ರಚಿಸಿದ್ದಲ್ಲದೇ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿ ಅಲ್ಲಿನ ದಲಿತರಿಗೆ, ಹಿಂದೂಗಳಿಗೆ ಅನ್ಯಾಯ ಮಾಡಿದ್ದಾರೆ’ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಪಟ್ಟಣದ ವೈಜನಾಥ ಪಾಟೀಲ ಸ್ಮಾರಕ ಬಳಿ ನಡೆದ ಬಿಜೆಪಿಯ ವಕ್ಫ್ ವಿರೋಧಿ ಜನಜಾಗೃತಿ ಹೋರಾಟದ ಬಹಿರಂಗ ಸಭೆಯಲ್ಲಿ ಮಂಗಳವಾರ ಮಾತನಾಡಿದರು.

‘ರಾಜ್ಯದಲ್ಲಿ ವಕ್ಫ್ ಮಂಡಳಿಯ ₹ 2.77ಲಕ್ಷ ಕೋಟಿ ಮೊತ್ತದ ಆಸ್ತಿ ಒತ್ತುವರಿಯಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ದಿ.ಧರ್ಮಸಿಂಗ್, ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ಮತ್ತು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಅವರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಉಲ್ಲೇಖಿಸಲಾಗಿದೆ’ ಎಂದರು.

ADVERTISEMENT

‘ಸಿ.ಎಂ. ಇಬ್ರಾಹಿಂ ನನಗೆ ಮಾನಹಾನಿ ನೋಟಿಸು ನೀಡಿದ್ದಾರೆ. ಅವರು ವಕ್ಫ್‌ನ ಖಬರಸ್ತಾನದಲ್ಲಿ ಕಾಂಪ್ಲೆಕ್ಸ್ ನಿರ್ಮಿಸಿದ್ದು ಉಲ್ಲೇಖಿಸಿ ಮಾಣಿಪ್ಪಾಡಿ ವರದಿಯ ಪುಟ 60 ಓದಿಕೊಳ್ಳಲು ತಿಳಿಸಿ ನೋಟಿಸಿಗೆ ಉತ್ತರ ನೀಡಿದ್ದೇನೆ’ ಎಂದರು.

ಮಾಜಿ ಸಚಿವ ಅರವಿಂದ ಲಿಂಬಾವಳಿ, ಮಾಜಿ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರು ಮಾತನಾಡಿದರು.

ಶಾಸಕರಾದ ರಮೇಶ ಜಾರಕಿಹೊಳಿ, ಬಿ.ಪಿ ಹರೀಶ, ಮುಖಂಡರಾದ ಜಿ.ಎಂ ಸಿದ್ದೇಶ್ವರ, ಕುಮಾರ ಬಂಗಾರಪ್ಪ, ಎನ್.ಆರ್. ಸಂತೋಷ, ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ವಿಕ್ರಮ ಪಾಟೀಲ, ಮುಖಂಡರಾದ ಆಕಾಶ ಗುತ್ತೇದಾರ, ಶಿವಶರಣಪ್ಪ ಜಾಪಟ್ಟಿ, ಜಗದೀಶ ಪಾಟೀಲ ರಾಜಾಪುರ, ವೀರಣ್ಣ ಗಂಗಾಣಿ, ಬಸನಗೌಡ ನಾಗರಹಾಳ್, ರುದ್ರಗೌಡ ಪಾಟೀಲ ಮೊದಲಾದವರು ಇದ್ದರು.

ಸಮಸ್ಯೆ ಹೇಳಿಕೊಂಡ ಬೆರಳೆಣಿಕೆಯಷ್ಟು ಸಂತ್ರಸ್ತರು: ವಕ್ಫ್ ಸಂತ್ರಸ್ತರಾದ ಶಿವಶಂಕರ ಶಿವಪುರಿ, ಸೋಮಯ್ಯ ಮಠಪತಿ, ಅಬ್ದುಲ್ ನಬಿ, ಶರಣಪ್ಪ ಶಂಕ್ರಪ್ಪ, ಉದಯಸಿಂಹ ಗುತ್ತೇದಾರ ಅವರು ತಮ್ಮ ಸಮಸ್ಯೆ ಹೇಳಿಕೊಂಡರು.

ನಂತರ ಸಿದ್ಧಸಿರಿ ಕಂಪನಿ ಕಾರ್ಯಾರಂಭಕ್ಕೆ ಒತ್ತಾಯಿಸಿ ನಡೆಸುತ್ತಿರುವ ಧರಣಿ ಸ್ಥಳಕ್ಕೆ ಭೇಟಿ ನೀಡಿದರು. ಇದಕ್ಕೂ ಮೊದಲು ಪಟ್ಟಣದ ಮಹಾಂತೇಶ್ವರ ಮಠಕ್ಕೆ ತೆರಳಿ ಗದ್ದುಗೆ ದರ್ಶನ ಮಾಡಿ ವಕ್ಫ್ ಸಮಸ್ಯೆ ಆಲಿಸಿದರು.

ಖಂಡ್ರೆ ವಿರುದ್ಧ ವಾಗ್ದಾಳಿ

‘ನಾನು ಟನ್‌ಗೆ ₹ 2650 ನೀಡಿದ್ದರಿಂದಲೇ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಷಡ್ಯಂತ್ರ ರಚಿಸಿ ಸಿದ್ಧಸಿರಿ ಕಂಪನಿ ಬಂದ್ ಮಾಡಿಸಿದ್ದಾರೆ. ಕಲಬುರಗಿಯ ಪ್ರಿಯಾಂಕ್ ಖರ್ಗೆ ಶರಣಪ್ರಕಾಶ ಪಾಟೀಲರು ಕಂಪನಿ ಬಂದ್ ಆಗಲು ಕಾರಣರಾಗಿದ್ದಾರೆ’ ಎಂದು ಯತ್ನಾಳ ವಾಗ್ದಾಳಿ ನಡೆಸಿದರು.

‘ಖಂಡ್ರೆ ಟನ್‌ ಕಬ್ಬಿಗೆ ₹ 1800 ನೀಡುತ್ತಿದ್ದರು. ಜತೆಗೆ ಪ್ರತಿ ಲೋಡ್‌ ಲಾರಿಗೆ 2 ಟನ್ ತೂಕದಲ್ಲಿ ಹೊಡೆಯುತಿದ್ದರು. ನನ್ನ ಬಳಿ ಇದೆಲ್ಲ ಇರಲಿಲ್ಲ ಹೀಗಾಗಿ ಬಂದ್ ಮಾಡಿಸಿದ್ದಾರೆ’ ಎಂದರು.

‘ಶಾಮನೂರ ಶಿವಶಂಕರಪ್ಪ ಯಡಿಯೂರಪ್ಪ ಈಶ್ವರ ಖಂಡ್ರೆ ಅವರು ವೀರಶೈವ ಮಹಾಸಭೆ ಆಸ್ತಿ ಮಾಡಿಕೊಂಡಿದ್ದಾರೆ. ನಾನು ಯಾವುದಕ್ಕೂ ಬಗ್ಗುವುದಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರುತ್ತದೆ. ಖಂಡ್ರೆ ಕಂಪನಿ ನೋಡಿಕೊಳ್ಳುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.