ಕಲಬುರಗಿ: ಸೂಫಿ ತತ್ವವನ್ನು ದೇಶದೆಲ್ಲೆಡೆ ಪಸರಿಸಲು ಶ್ರಮಿಸಿದ್ದ, ವೈದ್ಯಕೀಯ, ಎಂಜಿನಿಯರಿಂಗ್ ಕಾಲೇಜುಗಳ ಬೆಳವಣಿಗೆಗೆ ತಮ್ಮದೇ ಆದ ಕೊಡುಗೆ ನೀಡಿದ್ದ, ಸೂಫಿ ತತ್ವದ ಮೂಲ ತತ್ವಗಳಾದ ಕರುಣೆ, ಪ್ರೀತಿಯನ್ನು ಹರಡುವ ಮೂಲಕ ಕೆಬಿಎನ್ ದರ್ಗಾವನ್ನು ಭಾವೈಕ್ಯದ ಕೇಂದ್ರವನ್ನಾಗಿಸಿದ ಸಜ್ಜಾದೆ ಸೈಯದ್ ಶಹಾ ಖುಸ್ರೊ ಹುಸೇನಿ (79) ಅವರು ಇನ್ನು ನೆನಪಷ್ಟೇ.
ಕಲಬುರಗಿಯ ಸಾಹಿತ್ಯಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳಲ್ಲಿ ತಮ್ಮ ಕೊನೆಯ ದಿನಗಳವರೆಗೂ ಅಹರ್ನಿಶಿಯಾಗಿ ತೊಡಗಿಸಿಕೊಂಡಿದ್ದ ಸೈಯದ್ ಶಹಾ ಖುಸ್ರೊ ಹುಸೇನಿ ಅವರು ಸೂಫಿ ಚಿಂತನೆಗಳನ್ನು ಹರಡಲು ಆರಂಭವಾದ ನಿಯತಕಾಲಿಕೆ ‘ಶಹಬಜ’ಕ್ಕೆ ತಮ್ಮ 15ನೇ ವಯಸ್ಸಿನಲ್ಲಿಯೇ ಸಂಪಾದಕರಾಗಿ ಕೊನೆವರೆಗೂ ಅದರ ಜವಾಬ್ದಾರಿ ವಹಿಸಿಕೊಂಡಿದ್ದರು.
ಪ್ರತಿ ವರ್ಷ ದೇಶದ ಲಕ್ಷಾಂತರ ಭಕ್ತರು ಸೇರಿ ಆಚರಿಸುವ ಖಾಜಾ ಬಂದಾನವಾಜ್ ಉರುಸ್ ಸಂದರ್ಭದಲ್ಲಿ ಖುಸ್ರೊ ಹುಸೇನಿ ಅವರು ಸಕ್ರಿಯವಾಗಿ ಭಾಗವಹಿಸುವ ಮೂಲಕ ಅಚ್ಚುಕಟ್ಟಾಗಿ ಕಾರ್ಯಕ್ರಮಗಳು ನಡೆಯುವಂತೆ ನಿಗಾ ವಹಿಸುತ್ತಿದ್ದರು. ಹೈದರಾಬಾದ್, ದೆಹಲಿ, ಇಂದೋರ್, ಲಖನೌ, ಅಜ್ಮೇರ್ ಸೇರಿದಂತೆ ವಿವಿಧ ಕಡೆಗಳಿಂದ ಸೂಫಿ ಸಂತರು, ಕವ್ವಾಲಿ ಹಾಡುಗಾರರು ಬರುತ್ತಾರೆ. ಆ ಮೂಲಕ ಕಲಬುರಗಿಯನ್ನು ಒಂದು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಖುಸ್ರೊ ಹುಸೇನಿ ಅವರ ಪಾತ್ರ ಸ್ಮರಣೀಯ.
1927ರಲ್ಲಿ 7ನೇ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಅವರಿಂದ ಪ್ರಾರಂಭವಾದ, ಹೈದರಾಬಾದ್‌ನಿಂದ ಪ್ರಕಟವಾಗುತ್ತಿದ್ದ ಇಸ್ಲಾಮಿಕ್ ತ್ರೈಮಾಸಿಕ ಹಿಸ್ಟರಿಕ್ ಜರ್ನಲ್ ಇನ್ ಇಸ್ಲಾಮಿಕ್ ಸ್ಟಡೀಸ್ ನಿಯತಕಾಲಿಕಕ್ಕೆ ಸೈಯದ್ ಶಹಾ ಖುಸ್ರೊ ಹುಸೇನಿ ಮತ್ತು ಪ್ರೊ. ಮೊಹಮ್ಮದ್ ಸುಲೇಮಾನ್ ಸಿದ್ದಿಕಿ ಅವರು ಮಾರ್ಗದರ್ಶನ ನೀಡಿದ್ದರು.
ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಅರೇಬಿಕ್, ಸಮಾಜಶಾಸ್ತ್ರ ಹಾಗೂ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಪಡೆದ ಖುಸ್ರೊ ಹುಸೇನಿ ಅವರು ಅರೇಬಿಕ್ ಭಾಷೆ ಹಾಗೂ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರೈಸಿದರು. 1972ರಲ್ಲಿ ಕೆಲ ಕಾಲ ನಗರದ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಗೆ ಸೇರಿಕೊಂಡರು. ಸದಾ ಸಂಕೋಚ ಸ್ವಭಾವದವರಾಗಿದ್ದ ಸಜ್ಜಾದೆ ಅವರು ಅಗತ್ಯ ಬಂದಾಗ ವಿಷಯವನ್ನು ನಿರರ್ಗಳವಾಗಿ, ವಿಸ್ಕೃತವಾಗಿ ಚರ್ಚಿಸುತ್ತಿದ್ದರು. ಸ್ನಾತಕೋತ್ತರ ಪದವಿ ಬಳಿಕ ಅವರ ಹಸಿವಿನ ದಾಹ ತಣಿದಿರಲಿಲ್ಲ. ಹೀಗಾಗಿ, ಹೆಚ್ಚಿನ ಓದಿಗಾಗಿ 1972ರ ಸೆಪ್ಟೆಂಬರ್‌ನಲ್ಲಿ ಕೆನಡಾದ ಮ್ಯಾಂಟ್ರಿಯಲ್‌ನಲ್ಲಿರುವ ಮೆಕ್‌ಬಿಲ್ ವಿಶ್ವವಿದ್ಯಾಲಯದಲ್ಲಿ ಸೂಫಿ ತತ್ವವನ್ನು ಅಧ್ಯಯನ ಮಾಡಲು ತೆರಳಿದರು. ಸೂಫಿ ತತ್ವಗಳನ್ನು ಅಧ್ಯಯನ ಮಾಡಲು ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡ ಖುಸ್ರೊ ಹುಸೇನಿ ಅವರು ಮುಖ್ಯವಾಗಿ ಗೇಸುದರಾಜ ಖಾಜಾ ಬಂದಾ ನವಾಜ್ ಅವರ ಬರಹಗಳನ್ನು ವಿಶ್ಲೇಷಿಸುವ, ಅನುವಾದಿಸುವ ಕೆಲಸವನ್ನು ಪಶ್ಚಿಮದ ದೇಶಗಳ ಸೂಫಿ ತತ್ವದ ಆಳ ಅಗಲ ಬಲ್ಲ ತಜ್ಞರೊಂದಿಗೆ ಸೇರಿ ನಿರ್ವಹಿಸಿದರು.
ಗೇಸುದರಾಜರ ಸೂಫಿ ತತ್ವದಲ್ಲಿ ಪ್ರೀತಿ ಮತ್ತು ಒಂದಾಗುವಿಕೆ ಕುರಿತು ಪಿಎಚ್.ಡಿ ಪ್ರಬಂಧ ರಚಿಸಲು ತೊಡಗಿದ್ದರು. ‘ಅಧ್ಯಾತ್ಮದ ಒಳಗೊಳ್ಳುವಿಕೆ’ ಎಂಬ ಪ್ರಬಂಧವನ್ನು ರಚಿಸಿದರು. ತಂದೆಯವರ ಕಾರ್ಯದಲ್ಲಿ ಪಾಲ್ಗೊಳ್ಳಬೇಕೆಂಬ ಕರೆಗೆ ಓಗೊಟ್ಟು ತಮ್ಮ ಓದನ್ನು ಅಲ್ಲಿಗೇ ನಿಲ್ಲಿಸಿ ಕಲಬುರಗಿಗೆ ವಾಪಸಾದರು. ದರ್ಗಾದ ನಯೀಬ್ ಮುತವಲ್ಲಿಯಾಗಿ ಹಾಗೂ ಖಾಜಾ ಶಿಕ್ಷಣ ಸೊಸೈಟಿಗೆ ಉಪಾಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು.
ವಿದೇಶದಲ್ಲಿ ಸೂಫಿ ತತ್ವದ ಪ್ರಸಾರ
ಭಾರತಕ್ಕೆ ಮರಳಿದ ಬಳಿಕವೂ ಕೆಬಿಎನ್ ದರ್ಗಾ ಪೀಠಾಧಿಪತಿ ಸೈಯದ್ ಶಹಾ ಖುಸ್ರೊ ಹುಸೇನಿ ಅವರು ವಿದೇಶಕ್ಕೆ ತೆರಳಿ ಸೂಫಿ ತತ್ವಗಳ ಬಗ್ಗೆ ಪ್ರಸಾರ ಮಾಡುವ ಕಾರ್ಯವನ್ನು ಬಹಳ ಅಕ್ಕರೆಯಿಂದ ಮಾಡಿದರು. 1984ರಲ್ಲಿ ಜರ್ಮನ್ ಸೊಸೈಟಿಯ ಆಹ್ವಾನದ ಮೇರೆಗೆ ಪಶ್ಚಿಮ ಜರ್ಮನಿಗೆ ತೆರಳಿ ಅಲ್ಲಿ ಉಪನ್ಯಾಸ ನೀಡಿದರು. 2004ರಲ್ಲಿ ಸೂಫಿ ತತ್ವದ ಕುರಿತ ಬರಹಗಳಿಗಾಗಿ ಬೆಲ್‌ಫೋರ್ಡ್ ವಿಶ್ವವಿದ್ಯಾಲಯವು ಸನ್ಮಾನಿಸಿ ಗೌರವಿಸಿತ್ತು. 2008ರಲ್ಲಿ ಶಿಕ್ಷಣ ಕ್ಷೇತ್ರದ ಕೊಡುಗೆಗಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಡಿ.ಲಿಟ್ ಪದವಿ ನೀಡಿ ಗೌರವಿಸಿತು. ಶತಮಾನಗಳ ಹಿಂದೆ ರಚನೆಯಾದ ಪವಿತ್ರ ಕುರಾನ್‌ನ ಪುಸ್ತಕವು ಕತ್ತಲಲ್ಲಿಯೂ ಓದಬಹುದಾದ ವ್ಯವಸ್ಥೆಯನ್ನು ಹೊಂದಿದ್ದು ಪುಸ್ತಕದಲ್ಲಿ ಅಳವಡಿಸಿದ್ದ ಹರಳುಗಳು ಬೆಳಕಿನಂತೆ ಕೆಲಸ ಮಾಡುತ್ತಿದ್ದವು. ಆ ಕೃತಿಯನ್ನು ದರ್ಗಾಕ್ಕೆ ಭೇಟಿ ನೀಡುವ ಆಸಕ್ತರಿಗೆ ಖುಸ್ರೊ ಹುಸೇನಿ ಅವರು ತೋರಿಸುತ್ತಿದ್ದರು.
ಸರ್ವರೊಂದಿಗೂ ನಂಟು ಬೆಸೆದ ಖುಸ್ರೊ ಹುಸೇನಿ
ಎಲ್ಲ ಜಾತಿ ಧರ್ಮ ಸಮುದಾಯದವರಿಗೆ ಖಾಜಾ ಬಂದಾನವಾಜ್ ದರ್ಗಾ ಹಾಗೂ ಶಿಕ್ಷಣ ಸಂಸ್ಥೆಗಳನ್ನು ಮುಕ್ತಗೊಳಿಸಿದ್ದ ಕೀರ್ತಿ ಸೈಯದ್ ಶಹಾ ಖುಸ್ರೊ ಹುಸೇನಿ ಅವರಿಗೆ ಸಲ್ಲಬೇಕು. ಜಿಲ್ಲೆಯ ರಾಜಕೀಯ ಧುರೀಣರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾಜಿ ಮುಖ್ಯಮಂತ್ರಿ ದಿವಂಗತ ಎನ್. ಧರ್ಮಸಿಂಗ್ ಮಾಜಿ ಸಚಿವ ದಿವಂಗತ ಖಮರುಲ್ ಇಸ್ಲಾಂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಸೇರಿದಂತೆ ಹಲವು ನೇತಾರರೊಂದಿಗೆ ಖುಸ್ರೊ ಹುಸೇನಿ ಅವರು ನಿಕಟ ಸಂಪರ್ಕ ಹೊಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.