ಕಲಬುರಗಿ: ಕೆಇಎ ಪರೀಕ್ಷಾ ನೇಮಕಾತಿ ಅಕ್ರಮದ ಪ್ರಮುಖ ಆರೋಪಿ, ಆರ್.ಡಿ.ಪಾಟೀಲನನ್ನು ಕಲಬುರಗಿ ನಗರ ಪೊಲೀಸರು ಶುಕ್ರವಾರ ಮಧ್ಯಾಹ್ನ ನೆರೆಯ ಮಹಾರಾಷ್ಟ್ರದ ಅಕ್ಕಲಕೋಟ ಬಳಿ ಬಂಧಿಸಿದ್ದಾರೆ.
ಕಳೆದ 12 ದಿನಗಳಿಂದ ತಲೆಮರೆಸಿಕೊಂಡಿದ್ದ ಪಾಟೀಲ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಕಲಬುರಗಿಗೆ ಬರುತ್ತಿದ್ದ ವೇಳೆ ಪೊಲೀಸರು ಬಂಧಿಸಿದರು. ಆರೋಪಿಯು ಸಂಬಂಧಿಕರ ಮನೆಯಿಂದ ಕಲಬುರಗಿಯ ನ್ಯಾಯಾಲಯಕ್ಕೆ ಶರಣಾಗಲು ಬರುತ್ತಿದ್ದ ಎನ್ನಲಾಗುತ್ತಿದೆ. ಹೀಗಾಗಿ, ಪೊಲೀಸರು ಗಡಿಯಲ್ಲಿಯೇ ತೀವ್ರ ನಿಗಾ ಇಟ್ಟಿದ್ದರು. ಶರಣಾಗಲು ಬರುತ್ತಿದ್ದ ವೇಳೆ ಆತನನ್ನು ಬಂಧಿಸಿ, ರಾತ್ರಿ 8.15ರ ಸುಮಾರಿಗೆ ನಗರಕ್ಕೆ ಕರೆತಂದರು.
ಪರೀಕ್ಷಾ ಅಕ್ರಮ ನಡೆದ ದಿನದಿಂದಲೇ ಪಾಟೀಲ ಪರಾರಿಯಾಗಿದ್ದ. ನಾಲ್ಕು ದಿನಗಳ ಹಿಂದೆ ಕಲಬುರಗಿಯ ಅಪಾರ್ಟ್ ಮೆಂಟ್‌ನಲ್ಲಿ ತಂಗಿದ್ದ ವೇಳೆ ಅಫಜಲಪುರ ಪೊಲೀಸರು ಬಂಧಿಸಲು ತೆರಳುತ್ತಿದ್ದ ಮಾಹಿತಿ ಪಡೆದು ಅಲ್ಲಿಂದ ಪರಾರಿಯಾಗಿದ್ದ. ಹೀಗಾಗಿ, ಕಲಬುರಗಿ ನಗರ ಪೊಲೀಸ್ ಕಮಿಷನರ್ ಚೇತನ್ ಆರ್. ಅವರು ಡಿಸಿಪಿ ಕನಿಕಾ ಸಿಕ್ರಿವಾಲ್ ನೇತೃತ್ವದಲ್ಲಿ ಐದು ತನಿಖಾ ತಂಡಗಳನ್ನು ರಚಿಸಿದ್ದರು.
ಮತ್ತೊಂದೆಡೆ ಎಸ್‌ಪಿ ಅಡ್ಡೂರು ಶ್ರೀನಿವಾಸಲು ಅವರು ಡಿವೈಎಸ್‌ಪಿ ನೇತೃತ್ವದಲ್ಲಿ ಹಲವು ತಂಡಗಳನ್ನು ರಚಿಸಿದ್ದರು. ಅಂತಿಮವಾಗಿ ಕಲಬುರಗಿ ಎಸಿಪಿ ಭೂತೇಗೌಡ, ಅಶೋಕ ನಗರ ಠಾಣೆ ಪಿಎಸ್ಐ ಶಿವಪ್ಪ ಕಮಾಂಡೊ ಅವರ ತಂಡ ಪಾಟೀಲನನ್ನು ಬಂಧಿಸಿತು.
ಅಕ್ರಮದ ಸುಳಿವು ಕೊಡದ ಪಾಟೀಲ: ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿಯೂ ಕಳೆದ ವರ್ಷ ತಲೆ ಮರೆಸಿಕೊಂಡಿದ್ದ ಆರ್.ಡಿ. ಪಾಟೀಲ ಪೊಲೀಸರನ್ನು ಸಾಕಷ್ಟು ಸತಾಯಿಸಿದ ಬಳಿಕ ಸೆರೆ ಸಿಕ್ಕಿದ್ದ.
ಸುಮಾರು 11 ತಿಂಗಳು ಜೈಲಿನಲ್ಲಿದ್ದ. ಏತನ್ಮಧ್ಯೆ ಆ ಅವಧಿಯಲ್ಲಿ ಜಾಮೀನು ಪಡೆದಿದ್ದ ಆತ ಜಾಮೀನು ನಿಯಮ ಉಲ್ಲಂಘನೆ ಮಾಡಿ ಪರಾರಿಯಾಗಿದ್ದ. ಮತ್ತೆ ಪೊಲೀಸರು ಆತನನ್ನು ಬಂಧಿಸಿದ್ದರು. ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ವಿಚಾರಣೆ ಸಂದರ್ಭದಲ್ಲಿ ಯಾವುದೇ ಮಾಹಿತಿಯನ್ನು ಬಾಯಿ ಬಿಡುತ್ತಿರಲಿಲ್ಲ.
ಬೇರೆಯವರಿಂದ ಈತನ ಪಾತ್ರದ ಬಗ್ಗೆ ಅರಿತುಕೊಂಡಿದ್ದ ತನಿಖಾಧಿಕಾರಿಗಳು ಈತನ ಕೃತ್ಯಗಳನ್ನು ದಾಖಲೆ ಸಮೇತ ತೋರಿಸಿದಾಗಲಷ್ಟೇ ಸುಮ್ಮನಾಗುತ್ತಿದ್ದ.
ಈಗಲೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನೇಮಕಾತಿ ಅಕ್ರಮದಲ್ಲಿ ಆರ್.ಡಿ. ಪಾಟೀಲನನ್ನು ಹೆಸರು ಕೇಳಿ ಬಂದಿತ್ತು. ಈ ಪ್ರಕರಣ ಹೊರ ಬಿದ್ದ ಬಳಿಕ ತಲೆ ಮರೆಸಿಕೊಂಡಿದ್ದ.
ಕಲಬುರಗಿಯಿಂದ ಪರಾರಿಯಾಗಿದ್ದ ಆರ್.ಡಿ. ಪಾಟೀಲ, ತನ್ನ ಜಾಡು ಸಿಗಬಾರದು ಎಂಬ ಉದ್ದೇಶದಿಂದ ಪದೇ ಪದೇ ಸಿಮ್‌ಗಳನ್ನು ಬದಲಾಯಿಸಿದ್ದ.
ಜಿಲ್ಲೆಯಲ್ಲಿರುವ ತನ್ನ ಆಪ್ತರೊಂದಿಗೆ ಮಾತಾಡಬೇಕಾದ ಸಂದರ್ಭದಲ್ಲಿ ಆಪ್ತರ ಬದಲು ಅವರ ಪತ್ನಿಯರ ಮೊಬೈಲ್‌ನಿಂದ ಕರೆ ಮಾಡುವಂತೆ ಸೂಚಿಸುತ್ತಿದ್ದ. ಆ ಫೋನ್ ಸಂಭಾಷಣೆ ಮುಗಿದ ಬಳಿಕ ತನ್ನ ಸಿಮ್ ಕಾರ್ಡ್ ಬದಲಿಸುತ್ತಿದ್ದ. ಮೊಬೈಲ್‌ಗೆ ಸಿಮ್ ಹಾಕಿದರೆ ತಾನಿರುವ ಸ್ಥಳದ ಸುಳಿವು ಸಿಗಬಹುದು ಎಂಬ ಆತಂಕದಿಂದ ಇಂಟರ್ನೆಟ್ ಬಳಸಲು ಸಿಮ್ ಬದಲು ಡಾಂಗಲ್ ಬಳಸುತ್ತಿದ್ದ. ಮಹಾರಾಷ್ಟ್ರದ ಸೋಲಾಪುರದಲ್ಲಿ ಈತನ ಸಹೋದರನಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಈತನ ನೆಂಟರಿದ್ದರು. ಹೀಗಾಗಿ ಅಡಗಿಕೊಳ್ಳಲು ನೆರೆಯ ರಾಜ್ಯವನ್ನು ಆಯ್ಕೆ ಮಾಡಿಕೊಂಡಿದ್ದ.
ಈ ಹಿಂದೆ ಚುನಾವಣೆ ಲಾಭಕ್ಕಾಗಿ ಅಫಜಲಪುರದಲ್ಲಿ ಸಾಮೂಹಿಕ ವಿವಾಹವನ್ನೂ ಆಯೋಜಿಸಿದ್ದ. ಆ ಸಂದರ್ಭದಲ್ಲಿಯೇ ಪಿಎಸ್‌ಐ ನೇಮಕಾತಿ ಅಕ್ರಮ ಹೊರಬಿದ್ದಿದ್ದರಿಂದ ಸಾಮೂಹಿಕ ವಿವಾಹ ನಡೆಯುವ ಮುನ್ನವೇ ಬಂಧಿತನಾಗಿದ್ದ.ಪಿಎಸ್‌ಐ ನೇಮಕಾತಿ ಅಕ್ರಮ ಹಾಗೂ ಜೆಇ, ಎಇ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆಸಿದ್ದಕ್ಕಾಗಿ ಕಲಬುರಗಿ, ತುಮಕೂರು ಹಾಗೂ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಪಾಟೀಲ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು. ಹೈಕೋರ್ಟ್ ಮೆಟ್ಟಿಲೇರಿ ಜಾಮೀನು ಪಡೆದುಕೊಂಡಿದ್ದ.
ದಶಕದ ಹಿಂದೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಗೌರ (ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದ ಆರ್.ಡಿ. ಪಾಟೀಲ ನಂತರ ಪರೀಕ್ಷಾ ಅಕ್ರಮದ ಮೂಲಕ ಹಲವರು ಸರ್ಕಾರಿ ಉದ್ಯೋಗ ಪಡೆಯುವಂತೆ ನೋಡಿಕೊಂಡಿದ್ದ. ಹೀಗಾಗಿ, ಆತನ ಸ್ವಗ್ರಾಮ ಸೊನ್ನ ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಈತ ಅಭಿಮಾನಿಗಳ ಪಡೆಯನ್ನು ಹೊಂದಿದ್ದ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ನೆಲೆ ಹೊಂದಿರುವ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ ಜೆಡಿಎಸ್ ಅಭ್ಯರ್ಥಿಗಿಂತ ಅಧಿಕ ಮತಗಳನ್ನು ಪಡೆದಿದ್ದ.
ಪಿಎಸ್‌ಐ ನೇಮಕಾತಿ ಅಕ್ರಮ ಹಾಗೂ ಜೆಇ, ಎಇ ಪರೀಕ್ಷೆಗಳಲ್ಲಿನ ಅಕ್ರಮದ ಆರೋಪದ ಕಾರಣ ಕಲಬುರಗಿ, ತುಮಕೂರು ಹಾಗೂ ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿ ದ್ದವು. ಜಾಮೀನಿನ ಮೇಲೆ ಹೊರಗಿದ್ದ ಸಂದರ್ಭದಲ್ಲಿಯೇ ಕೆಇಎ ಪರೀಕ್ಷೆ ಬರೆಯಲಿರುವ ಅಭ್ಯರ್ಥಿಗಳನ್ನು ಸಂಪರ್ಕಿಸಿ ಬ್ಲೂಟೂತ್ ಮೂಲಕ ಉತ್ತರ ಹೇಳುವುದಾಗಿ ತಿಳಿಸಿ ಹಣ ಪಡೆದಿದ್ದ.
ಆರ್.ಡಿ. ಪಾಟೀಲ ಅಣ್ಣ ಮಹಾಂತಗೌಡ ಕೆಲ ಕಾಲ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಬಂಧಿತರಾಗಿದ್ದರು.
‘ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಕಲಬುರಗಿ, ಯಾದಗಿರಿ ಜಿಲ್ಲೆಗಳಲ್ಲಿ ಎಫ್ಐಆರ್ ದಾಖಲಾಗಿದ್ದು, ವಿಜಯಪುರ, ಬೆಂಗಳೂರಿನಲ್ಲಿಯೂ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ, ಪ್ರಕರಣವನ್ನು ಸಿಐಡಿಗೆ ವಹಿಸುವ ಚಿಂತನೆ ನಡೆದಿದೆ’ ಎಂದು ಗ್ರಾಮೀಣಾಭಿ
ವೃದ್ಧಿ ಮತ್ತು ಪಂಚಾಯಿತಿರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಆರ್.ಡಿ. ಪಾಟೀಲ ಬಂಧನದ ಬಳಿಕ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಈ ಕುರಿತು ಸಚಿವ ಸಂಪುಟ ಸಭೆ ನಡೆದ ವೇಳೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದೆ. ಈ ಬಗ್ಗೆ ಗೃಹ ಇಲಾಖೆ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದರು.
‘ಇಂತಹ ಅಕ್ರಮಗಳಲ್ಲಿ ಭಾಗಿಯಾದ ಸರ್ಕಾರಿ ಅಧಿಕಾರಿಗಳನ್ನು ಸೇವೆಯಿಂದಲೇ ವಜಾಗೊಳಿಸುವ ಪ್ರಸ್ತಾವವುಳ್ಳ ಕಠಿಣ ಕಾಯ್ದೆಯನ್ನು ಜಾರಿಗೆ ತರುವ ಉದ್ದೇಶವಿದ್ದು, ಕಾನೂನು ಇಲಾಖೆಯು ಮಸೂದೆ ರೂಪಿಸಲು ಅನುಮೋದನೆ ನೀಡಿದೆ’ ಎಂದು ತಿಳಿಸಿದರು.
ಮಹಾರಾಷ್ಟ್ರದಲ್ಲಿ ಅಡಗಿಕೊಂಡಿದ್ದ ಆರೋಪಿ ಆರ್.ಡಿ. ಪಾಟೀಲನನ್ನು ಎಸಿಪಿ ಭೂತೇಗೌಡ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ. ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.-ಚೇತನ್ ಆರ್, ಕಲಬುರಗಿ ಪೊಲೀಸ್ ಕಮಿಷನರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.