ADVERTISEMENT

ಜೇವರ್ಗಿ | ಅಪಹರಣ ಶಂಕೆ ಪ್ರಕರಣ: ಬಾಲಕಿ ಪತ್ತೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2024, 6:38 IST
Last Updated 7 ಜುಲೈ 2024, 6:38 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕಲಬುರಗಿ: ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣೆಯ ವ್ಯಾಪ್ತಿಯ ಗ್ರಾಮದಿಂದ ನಾಪತ್ತೆಯಾಗಿದ್ದ 17 ವರ್ಷದ ಬಾಲಕಿ ಪತ್ತೆಯಾಗಿದ್ದಾಳೆ.

ಯಡ್ರಾಮಿ ತಾಲ್ಲೂಕಿನ ಗ್ರಾಮವೊಂದರ ಅಪ್ರಾಪ್ತೆ, ಜೇವರ್ಗಿ ಪಟ್ಟಣದ ಕಾಲೇಜೊಂದರಲ್ಲಿ ಪಿಯು ಪ್ರಥಮ ವರ್ಷ ಓದುತ್ತಿದ್ದು ನಾಪತ್ತೆ ಆಗಿದ್ದಳು. ಆಕೆಯ ಅಪಹರಣ ನಡೆದಿರಬಹುದು ಎಂಬ ಶಂಕೆ ವ್ಯಕ್ತಪಡಿಸಿದ ಬಾಲಕಿಯ ಪೋಷಕರು ಇಬ್ಬರ ವಿರುದ್ಧ ದೂರು ದಾಖಲಿಸಿದ್ದರು.

ADVERTISEMENT

ಪಾಲಕರ ದೂರಿನ ಅನ್ವಯ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 137 (2), 352 ಜತೆಗೆ 3 (5) ಅಡಿ ಪ್ರಕರಣ ದಾಖಲಿಸಲಾಗಿತ್ತು. ತನಿಖೆ ನಡೆಸಿದ ನೆಲೋಗಿ ಪೊಲೀಸರು ಬಾಲಕಿಯನ್ನು ಜುಲೈ 5ರಂದು ಪತ್ತೆ ಹಚ್ಚಿದರು.

‘ಬಾಲಕಿಯನ್ನು ಕೌನ್ಸೆಲಿಂಗ್‌ಗೆ ಒಳಪಡಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಬಾಲಕಿಯು ತಾನಾಗಿಯೇ ಮನೆ ಬಿಟ್ಟು ಬಂದಿರುವುದಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ, ಬಾಲಕಿಯನ್ನು ಅವಳ ಪೋಷಕರೊಂದಿಗೆ ಕಳುಹಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗುಟ್ಕಾ ಜಪ್ತಿ: ಆಳಂದ ತಾಲ್ಲೂಕಿನ ವಾಗ್ದರಿ ಗ್ರಾಮದ ರಸ್ತೆಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 62 ಸಾವಿರ ಮೌಲ್ಯದ ಗುಟ್ಕಾ ಪ್ಯಾಕೇಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಆಟೊವನ್ನು ಮಾದನಹಿಪ್ಪರಗಾ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತೆರಿಗೆ ವಂಚಿಸಿ, ಜೀವಕ್ಕೆ ಎರವಾಗುವ ಗುಟ್ಕಾ ಪ್ಯಾಕೇಟ್‌ಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿ ಚಾಲಕ ಜಾಕೀರ್ ನವಾಜ್, ರಾಮಲಿಂಗ ಶಿವಶರಣಪ್ಪ ಹಾಗೂ ಅಲ್ಲಾವುದ್ದೀನ್ ವಿರುದ್ಧ ದೂರು ದಾಖಲಾಗಿದೆ.

ಚಿಕಿತ್ಸೆಗೆ ಸ್ಪಂದಿಸದೆ ಗಾಯಾಳು ಮಹಿಳೆ ಸಾವು: ಕಾಳಗಿ ತಾಲ್ಲೂಕಿನ ಪಸ್ತಾಪುರ ಗ್ರಾಮದ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟುಬಿದ್ದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯು ಚಿಕಿತ್ಸೆಗೆ ಸ್ಪಂದಿಸದೆ ಮೃತಟ್ಟಿದ್ದಾರೆ.

ಅನುರಾಧಾ ಶಿವಪುತ್ರಪ್ಪ (40) ಮೃತರು. ನಿರ್ಲಕ್ಷ್ಯದಿಂದ ಬೈಕ್ ಓಡಿಸಿದ ಆರೋಪದಡಿ ಚಂದ್ರಕಾಂತ ಹಣಮಂತರಾಯ ವಿರುದ್ಧ ಸುಲೇಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಂದ್ರಕಾಂತ ಅವರು ಅನುರಾಧಾ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ದಸ್ತಾಪುರ ನಾಲಾ ಸಮೀಪದ ರಸ್ತೆಯಲ್ಲಿ ಬಿದ್ದ ಕಟ್ಟಿಗೆಯ ಮೇಲೆ ವೇಗವಾಗಿ ಬೈಕ್ ಚಲಾಯಿಸಿದ್ದರಿಂದ ಹಿಂಬದಿಯಲ್ಲಿ ಕುಳಿತಿದ್ದ ಅನುರಾಧಾ ಕೆಳಗೆ ಬಿದ್ದರು. ತಲೆಗೆ ತೀವ್ರ ಪೆಟ್ಟಾಗಿತ್ತು. ಪ್ರಜ್ಞೆ ತಪ್ಪಿದ ಅವರನ್ನು ಟ್ರಾಮಾ ಕೇರ್ ಸೆಂಟರ್‌ಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. 

ಸೆಕ್ಷನ್ 144 ಜಾರಿ: ತಾಲ್ಲೂಕಿನ ಗರೂರು ಗ್ರಾಮದಲ್ಲಿನ ವಕ್ಫ್‌ ಬೋರ್ಡ್‌ಗೆ ಸೇರಿದ ಜಾಗದ ವಿವಾದ ಸಂಬಂಧ ಮೊಹರಂ ವೇಳೆಯಲ್ಲಿ ಅಹಿತಕರ ಘಟನೆಗಳ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್ 144 ಜಾರಿ ಮಾಡಲಾಗಿದೆ. 

ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಗರೂರು ಗ್ರಾಮದಲ್ಲಿ ಧಾರ್ಮಿಕ ಕೇಂದ್ರಕ್ಕೆ ಸಂಬಂಧಿಸಿದ ಭೂ ವ್ಯಾಜ್ಯ ನಡೆಯುತ್ತಿದೆ. ವಿವಾದಿತ ಸ್ಥಳದಲ್ಲಿ ಮೊಹರಂ ಆಚರಣೆ ಮಾಡದಂತೆ ಸೂಚಿಸಲಾಗಿದೆ. ಹೀಗಾಗಿ, ಸೆಕ್ಷನ್ 144 ಜಾರಿ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.