ADVERTISEMENT

ಕಲಬುರಗಿ | 'ಕಿತ್ತೂರು ರಾಣಿ ಚನ್ನಮ್ಮನ ಶೌರ್ಯ ಸ್ಮರಣೀಯ'

ಕಿತ್ತೂರು ರಾಣಿ ಚನ್ನಮ್ಮ ಜಯಂತಿ; ಎಡಿಸಿ ರಾಯಪ್ಪ ಹುಣಸಗಿ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2024, 5:14 IST
Last Updated 24 ಅಕ್ಟೋಬರ್ 2024, 5:14 IST
ಕಲಬುರಗಿಯಲ್ಲಿ ಬುಧವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಚನ್ನಮ್ಮನ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು
ಕಲಬುರಗಿಯಲ್ಲಿ ಬುಧವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಚನ್ನಮ್ಮನ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು   

ಕಲಬುರಗಿ: ‘ಸಣ್ಣದಾದ ಕಿತ್ತೂರು ಸಂಸ್ಥಾನದಲ್ಲಿ ರಾಜ್ಯಭಾರ ಮಾಡುತ್ತಿದ್ದ ರಾಣಿ ಚನ್ನಮ್ಮ ಅವರು 1857ರ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮುನ್ನವೇ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದಳು. ಚನ್ನಮ್ಮನ ಶೌರ್ಯ, ಹೋರಾಟದ ಹಾದಿ ಸ್ಮರಣೀಯ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.

ನಗರದ ಡಾ. ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯಿತಿ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ವೀರಮಾತೆ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಚನ್ನಮ್ಮ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.

‘ಭಾರತದಿಂದ ಬ್ರಿಟಿಷರನ್ನು ಓಡಿಸಿ, ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಕಿತ್ತೂರು ರಾಣಿ ಚನ್ನಮ್ಮ ಅವರು ತಮ್ಮದೇಯಾದ ರೀತಿಯಲ್ಲಿ ಹೋರಾಟ ಮಾಡಿದ್ದರು. ಚನ್ನಮ್ಮನ ಬೆನ್ನ ಹಿಂದೆಯೇ ಸಂಗೊಳ್ಳಿ ರಾಯಣ್ಣ, ಇಡೀ ಕಿತ್ತೂರಿನ ಜನತೆ ನಿಂತಿದ್ದರು. ಸ್ವಾತಂತ್ರ್ಯ ಹೋರಾಟದ ಇತಿಹಾಸಿದಲ್ಲಿ ಕಿತ್ತೂರು ಸಂಸ್ಥಾನ ಹಾಗೂ ಚನ್ನಮ್ಮ ತೋರಿದ್ದ ಪರಾಕ್ರಮವನ್ನು ಯಾರೂ ಮರೆಯುವಂತಿಲ್ಲ’ ಎಂದರು.

ADVERTISEMENT

‘ಮಹಾನ್ ಪುರುಷರ, ಸಾಧಕರ, ಸ್ವಾತಂತ್ರ್ಯ ಹೋರಾಟಗಾರರ ಜೀವನ ಸಂದೇಶ ಹಾಗೂ ತ್ಯಾಗಗಳನ್ನು ತಿಳಿಸುವ ಉದ್ದೇಶದಿಂದ ಜಯಂತಿಗಳನ್ನು ಆಚರಿಸಲಾಗುತ್ತಿದೆ. ಯುವಕರು ಮಾದಕ ದ್ರವ್ಯ ವಸ್ತುಗಳ ವ್ಯಸನಿಗಳಾಗದೆ ಮಹನೀಯರ ಬದುಕಿನ ಸಂದೇಶ ಅರ್ಥೈಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ನಿವೃತ್ತ ಪ್ರಾಧ್ಯಾಪಕಿ ಮೀನಾಕ್ಷಿ ಬಾಳಿ ಉಪನ್ಯಾಸ ನೀಡಿ, ‘ಅಂದಿನ ಸಂಸ್ಥಾನಗಳ ಬಹುತೇಕ ರಾಜರು ಬ್ರಿಟಿಷರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಕಿತ್ತೂರು ರಾಣಿ ಚನ್ನಮ್ಮ ಒಪ್ಪಂದ ಮಾಡಿಕೊಳ್ಳದೆ ಸ್ವತಂತ್ರವಾಗಿ ಇರಲು ಬಯಸಿದ್ದರು. ಬ್ರಿಟಿಷರನ್ನು ದೇಶದಿಂದ ಓಡಿಸಲು ಚನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣ ವೀರಾವೇಶದಿಂದ ಹೋರಾಡಿದ್ದರು’ ಎಂದರು.

ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ದೊಡ್ಡಪ್ಪಗೌಡ ನರಿಬೋಳ ಮಾತನಾಡಿ, ‘ಬ್ರಿಟಿಷರ ವಿರುದ್ಧ ಹೋರಾಡಿದ್ದ ರಾಣಿ ಚನ್ನಮ್ಮ ಅವರನ್ನು ಮರೆತರೆ ನಾಡಿಗೆ ದ್ರೋಹ ಬಗೆದಂತೆ. ನಮ್ಮೆಲ್ಲರ ಹೃದಯದಲ್ಲಿ ಚನ್ನಮ್ಮನ ಹೆಸರು ಶಾಶ್ವತವಾಗಿ ಇರುತ್ತದೆ’ ಎಂದು ಹೇಳಿದರು.

ಸಮಿತಿಯ ಜಿಲ್ಲಾ ಅಧ್ಯಕ್ಷೆ ಜ್ಯೋತಿ ಎಂ.ಮರಗೋಳ ಮಾತನಾಡಿ, ‘ಜಿಲ್ಲಾಡಳಿತವು ಕಿತ್ತೂರು ರಾಣಿ ಚನ್ನಮ್ಮ ಅವರ ಪುತ್ಥಳಿ ನಿರ್ಮಾಣಕ್ಕೆ ಸೂಕ್ತವಾದ ಸ್ಥಳ ಗುರುತಿಸಬೇಕು’ ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರು, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಕಾರ್ಯದರ್ಶಿ ಸಂತೋಷ ಪಾಟೀಲ ಸರಡಗಿ, ಮುಖಂಡರಾದ ರಾಜಶೇಖರ ಸೀರಿ, ಅಲ್ಲಮ ದೇಶಮುಖ, ಶಾಂತಾ ಪಾಟೀಲ, ಶ್ರೀಶೈಲ ಘೋಳಿ, ಮಾಲಾ ಕಣ್ಣಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಕಲಬುರಗಿಯಲ್ಲಿ ಬುಧವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರದ ಮೆರವಣಿಗೆಯಲ್ಲಿ ವಿವಿಧ ವೇಶದಲ್ಲಿ ಕುದುರೆ ಮೇಲೆ ಕುಳಿತು ಗಮನ ಸೆಳೆದ ಮಕ್ಕಳು
ಕಲಬುರಗಿಯಲ್ಲಿ ಬುಧವಾರ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ವಿಶ್ವರಂಗ ತಂಡ ವೀರರಾಣಿ ಕಿತ್ತೂರ ಚನ್ನಮ್ಮ ನಾಟಕ ಪ್ರದರ್ಶನ ನೀಡಿತು
ಕಲಬುರಗಿಯಲ್ಲಿ ಬುಧವಾರ ನಡೆದ ಕಿತ್ತೂರು ರಾಣಿ ಚನ್ನಮ್ಮ ಅವರ ಭಾವಚಿತ್ರದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳಾ ಮುಖಂಡರು

ಅದ್ಧೂರಿ ಮೆರವಣಿಗೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಜಯಂತ್ಯುತ್ಸವ ಸಮಿತಿ ವತಿಯಿಂದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ರಂಗಮಂದಿರದವರೆಗೆ ರಾಣಿ ಚನ್ನಮ್ಮ ಭಾವಚಿತ್ರದ ಅದ್ಧೂರಿ ಮೆರವಣೆಗೆ ನಡೆಯಿತು. ಕುದುರೆ ಮೇಲೆ ಚನ್ನಮ್ಮ ರಾಯಣ್ಣ ಬ್ರಿಟಿಷರ ವೇಶಧಾರಿಯ ಮಕ್ಕಳು ಗಮನ ಸೆಳೆದರು. ಡೊಳ್ಳು ಸೇರಿ ನಾನಾ ಕಲಾ ತಂಡಗಳು ಪಾಲ್ಗೊಂಡಿದ್ದವು. ಜ್ಯೋತಿ ಮರಗೋಳ ಪ್ರೇಮಲತಾ ಅಲ್ಲಮಪ್ರಭು ಪಾಟೀಲ ಶಾಂತಾಬಾಯಿ ಎಂ.ವೈ. ಪಾಟೀಲ ವಿಲಾಸವತಿ ಖೂಬಾ ಲಕ್ಷ್ಮಿ ದತ್ತಾತ್ರೇಯ ಪಾಟೀಲ ಜಯಶ್ರೀ ವಿರಣ್ಣ ದಂಡೆ ಸುಮಾ ಶರಣು‌ ಪಪ್ಪಾ ಜ್ಯೋತಿ ಇಂದಾಪೂರ ಶ್ರೀದೇವಿ ಸಾಸನಗೇರ ವಿಜಯಲಕ್ಷ್ಮಿ ಪಾಟೀಲ ಲತಾ ಬಿಲಗುಂದಿ ಶೀಲಾ ಮುತ್ತಿನ್ ಅನ್ನಪೂರ್ಣ ಸಂಗಶೆಟ್ಟಿ ಸೇರಿ ಹಲವರು ಪಾಲ್ಗೊಂಡಿದ್ದರು.

‘ಹೋರಾಟದ ಕಿಚ್ಚು ಆರಂಭಿಸಿದ್ದು ಚನ್ನಮ್ಮ’ ‘ಭಾರತದಲ್ಲಿ ಬ್ರಿಟಿಷರ ವಿರುದ್ಧ ಹೋರಾಟದ ಕಿಚ್ಚು ಆರಂಭಿಸಿದ್ದೇ ಕಿತ್ತೂರು ರಾಣಿ ಚನ್ನಮ್ಮ’ ಎಂದು ನಿವೃತ್ತ ಪ್ರಾಚಾರ್ಯರಾದ ನೀಲಾಂಬಿಕಾ ಶೇರಿಕಾರ ಹೇಳಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ಕಿತ್ತೂರ ರಾಣಿ ಚನ್ನಮ್ಮ ಜಯಂತ್ಯುತ್ಸವ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಕಿತ್ತೂರು ಸಣ್ಣ ಸಂಸ್ಥಾನವಾಗಿದ್ದರೂ ದೊಡ್ಡದಾದ ಬ್ರಿಟಿಷ್ ಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿತ್ತು. ಸಮಸ್ಯೆ ಎಂತಹ ದೊಡ್ಡದಾಗಿದ್ದರೂ ಎದೆಗುಂದಬಾರದು ಎಂಬ ಸಂದೇಶವನ್ನು ಚನ್ನಮ್ಮನ ಹೋರಾಟದ ಬದುಕು ತಿಳಿಸುತ್ತದೆ’ ಎಂದರು. ‘ಚನ್ನಮ್ಮ ನಿತ್ಯ ಲಿಂಗಪೂಜೆ ಮಾಡಿ ಅಂಗೈಯಲ್ಲಿನ ಲಿಂಗದಲ್ಲಿ ಪರಮಾತ್ಮನನ್ನು ಕಾಣುತ್ತಿದ್ದಳು. ಜೀವನದುದ್ದಕ್ಕೂ ವಿಭೂತಿ ಧರಿಸಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾಳೆ’ ಎಂದು ಹೇಳಿದರು. ವಿಶ್ವರಂಗ ತಂಡವು ವೀರರಾಣಿ ಕಿತ್ತೂರ ಚನ್ನಮ್ಮ ನಾಟಕ ಪ್ರದರ್ಶನ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.