ಸೇಡಂ: ತಾಲ್ಲೂಕಿನ ಕೋಡ್ಲಾ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ 33 ವಿದ್ಯಾರ್ಥಿನಿಯರು ಭಾನುವಾರ ರಾತ್ರಿ ಹೊಟ್ಟೆ ನೋವು, ವಾಂತಿಯಿಂದಾಗಿ ಅಸ್ವಸ್ಥರಾಗಿದ್ದು, ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಭಾನುವಾರ ರಾತ್ರಿ ಊಟ ಮಾಡಿದ ನಂತರ ವಿದ್ಯಾರ್ಥಿನಿಯರಲ್ಲಿ ಹೊಟ್ಟೆನೋವು, ತಲೆನೋವು ಕಾಣಿಸಿಕೊಂಡಿದೆ. ಕೆಲ ವಿದ್ಯಾರ್ಥಿನಿಯರಿಗೆ ವಾಂತಿಯಾಗಿದೆ. ಬಳಿಕ ವಾಹನದಲ್ಲಿ ಸೇಡಂ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ವಿದ್ಯಾರ್ಥಿಗಳನ್ನು ಕರೆತರಲಾಯಿತು.
‘ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವಿದ್ಯಾರ್ಥಿನಿಯರು ಚೇತರಿಸಿಕೊಳ್ಳುತ್ತಿದ್ದಾರೆ. ಗಂಭೀರವಾಗಿರುವಂತಹದ್ದೇನೂ ಇಲ್ಲ. ಬಹುತೇಕ ವಿದ್ಯಾರ್ಥಿನಿಯರಲ್ಲಿ ವಾಂತಿ, ತಲೆನೋವು ಮತ್ತು ಹೊಟ್ಟೆನೋವು ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಯ ವೈದ್ಯ ಡಾ.ನಾಗನಾಥ ‘ಪ್ರಜಾವಾಣಿ’ಗೆ ತಿಳಿಸಿದರು.
ಆಸ್ಪತ್ರೆಗೆ ಜೆಡಿ ಭೇಟಿ: ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕಿ ಪಿ.ಶುಭ ಸೋಮವಾರ ಬೆಳಿಗ್ಗೆ ಸೇಡಂನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯ ಪ್ರಮಿಳಾ ಹಾಗೂ ಪಾಲಕರು ಇದ್ದರು.
ಕಲುಷಿತ ಆಹಾರ ಸೇವನೆ ಶಂಕೆ: ವಸತಿ ನಿಲಯದಲ್ಲಿ 176 ವಿದ್ಯಾರ್ಥಿನಿಯರಿದ್ದಾರೆ. ಅದರಲ್ಲಿ 23 ವಿದ್ಯಾರ್ಥಿನಿಯರಿಗೆ ಮಾತ್ರ ಆರೋಗ್ಯದಲ್ಲಿ ಏರುಪೇರಾಗಿದೆ. ವಿದ್ಯಾರ್ಥಿನಿಯರು ಸೇವಿಸಿದ ನೀರು ಮತ್ತು ಆಹಾರ ಕಲುಷಿತಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಕೆಲವು ದಿನಗಳಿಂದ ಶ್ರೀ ಸಿಮೆಂಟ್ ಕಂಪನಿಯು ರಾಸಾಯನಿಕ ಪದಾರ್ಥ ಹೊರ ಬಿಡುತ್ತಿದ್ದು, ಇದರಿಂದ ಸಾರ್ವಜನಿಕರಲ್ಲಿ ತಲೆನೋವು, ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ. ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ನಿಖರ ಕಾರಣವನ್ನು ಪತ್ತೆ ಮಾಡಬೇಕು ಎಂದು ಪಾಲಕರು ಆಗ್ರಹಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿ ವಿದ್ಯಾರ್ಥಿನಿಯರ ಆರೋಗ್ಯ ವಿಚಾರಿಸಲಾಗಿದೆ. ವಿದ್ಯಾರ್ಥಿನಿಯರು ಅಸ್ವಸ್ಥರಾಗಲು ನಿಖರ ಕಾರಣ ತಿಳಿದು ಬಂದಿಲ್ಲ. ಸೋಮವಾರ ಸಂಜೆಯ ವೇಳೆಗೆ ಕಾರಣ ತಿಳಿಯಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕಿ ಪಿ.ಶುಭ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.