ADVERTISEMENT

ಕಲಬುರಗಿ | 18 ಹೊಸ ತಾಲ್ಲೂಕುಗಳಿಗೆ ಮಿನಿ ವಿಧಾನಸೌಧ: ಡಾ.ಅಜಯ್ ಸಿಂಗ್

ತಲಾ ₹ 15 ಕೋಟಿ ವೆಚ್ಚದಲ್ಲಿ ನಿರ್ಮಾಣ: ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್

​ಪ್ರಜಾವಾಣಿ ವಾರ್ತೆ
Published 2 ಜುಲೈ 2024, 15:37 IST
Last Updated 2 ಜುಲೈ 2024, 15:37 IST
ಕಲಬುರಗಿಯ ಕೆಕೆಆರ್‌ಡಿಬಿ ಕಚೇರಿಯಲ್ಲಿ ಮಂಗಳವಾರ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್ ಮಾತನಾಡಿದರು. ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ್ ಬಾಬು, ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ. ಆಕಾಶ್ ಶಂಕರ್, ಮಂಡಳಿಯ ಉಪ ಕಾರ್ಯದರ್ಶಿ ಎಂ.ಕೆ.ಪ್ರಮೀಳಾ ಉಪಸ್ಥಿತರಿದ್ದರು
ಕಲಬುರಗಿಯ ಕೆಕೆಆರ್‌ಡಿಬಿ ಕಚೇರಿಯಲ್ಲಿ ಮಂಗಳವಾರ ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್ ಮಾತನಾಡಿದರು. ಮಂಡಳಿ ಕಾರ್ಯದರ್ಶಿ ಎಂ.ಸುಂದರೇಶ್ ಬಾಬು, ಶಿಕ್ಷಣ ಇಲಾಖೆ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ. ಆಕಾಶ್ ಶಂಕರ್, ಮಂಡಳಿಯ ಉಪ ಕಾರ್ಯದರ್ಶಿ ಎಂ.ಕೆ.ಪ್ರಮೀಳಾ ಉಪಸ್ಥಿತರಿದ್ದರು   

ಕಲಬುರಗಿ: ‘ಕಲ್ಯಾಣ ಕರ್ನಾಟಕ ಭಾಗದ 18 ಹೊಸ ತಾಲ್ಲೂಕುಗಳಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಕಂದಾಯ ಇಲಾಖೆಯ ಸಹಯೋಗದಲ್ಲಿ ತಲಾ ₹ 15 ಕೋಟಿ (ಒಟ್ಟು ₹270 ಕೋಟಿ) ವೆಚ್ಚದಲ್ಲಿ 18 ಮಿನಿ ವಿಧಾನಸೌಧಗಳನ್ನು ನಿರ್ಮಿಸಲಾಗುವುದು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿಳಿಸಿದರು.

ಕೆಕೆಆರ್‌ಡಿಬಿ ಕಚೇರಿಯಲ್ಲಿ ಸೋಮವಾರ ನಡೆದ ಪ್ರಸಕ್ತ ವರ್ಷದ ಸರ್ವ ಸದಸ್ಯರ ಮೊದಲ ಸಭೆಯ ನಿರ್ಣಯಗಳ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದ ಅವರು, ‘ನೂತನ ತಾಲ್ಲೂಕುಗಳಲ್ಲಿನ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಮನಗಂಡು ಒಂದೇ ಸೂರಿನಡಿ ತಾಲ್ಲೂಕು ಕಚೇರಿಗಳನ್ನು ತರಲು ಆರ್ಥಿಕ ನೆರವು ನೀಡಲಾಗುತ್ತಿದೆ’ ಎಂದರು.

‘ಪ್ರಸಕ್ತ ಸಾಲಿನಲ್ಲಿ ₹5,000 ಕೋಟಿ ಅನುದಾನಕ್ಕೆ ಕ್ರಿಯಾ ಯೋಜನೆ ರೂಪಿಸಲು ಮಂಡಳಿ ಸಭೆಯಲ್ಲಿ ಸರ್ವಾನುಮತದಿಂದ ಅನುಮೋದನೆ ಸಿಕ್ಕಿದೆ. ಹೀಗಾಗಿ, ಶಾಸಕರು ಜುಲೈ 15ರ ಒಳಗೆ ಮಂಡಳಿಗೆ ಪ್ರಸ್ತಾವ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಹೇಳಿದರು.

ADVERTISEMENT

ಈ ಭಾಗದ ಜನರಿಗೆ ಅಗತ್ಯವಾಗಿ ಬೇಕಾದ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಉತ್ತಮಗೊಳಿಸಲು ಮುಂದಿನ 10 ವರ್ಷಗಳಲ್ಲಿ ಏನೆಲ್ಲ ಯೋಜನೆ ಹಾಕಿಕೊಳ್ಳಬೇಕು ಎಂಬುದರ ಕುರಿತು ಸಂಸ್ಥೆಯಿಂದ ನೀಲನಕ್ಷೆ‌ ಸಿದ್ಧಪಡಿಸಲಾಗುವುದು ಎಂದು ತಿಳಿಸಿದರು.

‘ಶಿಕ್ಷಣ ಕ್ಷೇತ್ರಕ್ಕೆ ಶೇ 25ರಷ್ಟು ಅನುದಾನ ಮೀಸಲಿಡಲಾಗುತ್ತಿದೆ. ಕಳೆದ ವರ್ಷ 2,000 ಶಾಲೆಗಳಲ್ಲಿ ಪೀಠೋಪಕರಣ, ದುರಸ್ತಿಯಂತಹ ಕೆಲಸಗಳಿಗೆ ತಲಾ ₹ 50 ಕೋಟಿ ಒದಗಿಸಲಾಗಿತ್ತು. ಈ ವರ್ಷವೂ 2,000 ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸಲಾಗುವುದು. ಗ್ರಾಮೀಣ ಭಾಗದಲ್ಲಿ ಮಾದರಿಯಾಗುವಂತಹ 187 ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ನಿರ್ಮಾಣ ಮಾಡಲಾಗುವುದು’ ಎಂದರು.

‘ಸರ್ಕಾರಿ ಶಾಲೆ, ವಸತಿ ನಿಲಯದಂತಹ ಕಟ್ಟಡಕ್ಕೆ ಅನುದಾನವಿದ್ದು, ನಿವೇಶನಕ್ಕೆ ಹಣ ಇಲ್ಲದಿದ್ದಲ್ಲಿ ಗರಿಷ್ಠ 5 ಎಕರೆವರೆಗೆ ಕಂದಾಯ ಇಲಾಖೆಯು ನಿಗದಿಪಡಿಸಿದ ದರದಲ್ಲಿ ಜಮೀನು ಖರೀದಿಗೆ ಅನುದಾನ ನೀಡಲಾಗುವುದು. ಕಲಬುರಗಿ ಮತ್ತು ಕೊಪ್ಪಳದಲ್ಲಿ ಜಿಟಿಟಿಸಿ ಮತ್ತು ವಿಟಿಯು ಸಹಭಾಗಿತ್ವದ ಕೌಶಲ ಕೇಂದ್ರ ನಿರ್ಮಿಸಲಾಗುತ್ತಿದ್ದು, ಈ ವರ್ಷ ₹ 120 ಕೋಟಿ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಕಲ್ಯಾಣ ಪಥ ಯೋಜನೆಯಡಿ ರಾಜ್ಯ ಸರ್ಕಾರ ₹ 665 ಕೋಟಿ ಹಾಗೂ ಮಂಡಳಿ ₹ 335 ಕೋಟಿ ಅನುದಾನವನ್ನು ಗ್ರಾಮೀಣ ಭಾಗದ ರಸ್ತೆಗಳಿಗೆ ವಿನಿಯೋಗಿಸಲಿದೆ. ಕಿದ್ವಾಯಿ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೂ ಅನುದಾನ ಒದಗಿಸಲಾಗುವುದು. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಪ್ರತಿ ತಿಂಗಳು ಕ್ಯಾನ್ಸರ್ ಅರಿವು ಕಾರ್ಯಕ್ರಮ ಆಯೋಜಿಸಲಾಗುವುದು’ ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಡಳಿಯ ಉಪಕಾರ್ಯದರ್ಶಿ ಎಂ.ಕೆ.ಪ್ರಮೀಳಾ ಸೇರಿ ಇತರರು ಉಪಸ್ಥಿತರಿದ್ದರು.

ಕೃಷಿ ಮತ್ತು ಜಲ ಸಂರಕ್ಷಣೆಗೂ ಅನುದಾನ ನೀಡಲು ತೀರ್ಮಾನಿಸಲಾಗಿದೆ. ಆರಂಭಿಕವಾಗಿ ಈ ವರ್ಷದಿಂದ ಪ್ರತಿ ಜಿಲ್ಲೆಗೆ ₹5 ಕೋಟಿಯಿಂದ ₹10 ಕೋಟಿ ಖರ್ಚು ಮಾಡಲಾಗುವುದು
-ಎಂ.ಸುಂದರೇಶ್ ಬಾಬು ಕೆಕೆಆರ್‌ಡಿಬಿ ಕಾರ್ಯದರ್ಶಿ
ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯನ್ನು ಕಲ್ಯಾಣ ಕರ್ನಾಟಕ ಭಾಗದ ಶಾಲೆಗಳಲ್ಲಿ ಅಳವಡಿಸಿಕೊಳ್ಳುವ ಚಿಂತನೆ ಇದ್ದು ಸರ್ಕಾರದ ಅನುಮೋದನೆ ಸಿಗಬೇಕಿದೆ
-ಡಾ. ಆಕಾಶ್ ಶಂಕರ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ
‘ಶಿಕ್ಷಣ ಸುಧಾರಣೆಗೆ ತಜ್ಞರ ಸಮಿತಿ’
‘ಶಿಕ್ಷಣದ ಪ್ರಗತಿ ಮತ್ತು ಹಿಂದುಳಿದಿರುವಿಕೆ ಹೋಗಲಾಡಿಸಲು ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆಯೂ ತಜ್ಞರ ಸಮಿತಿ ರಚಿಸಲಾಗುವುದು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್‌ ಸಿಂಗ್ ಹೇಳಿದರು. ‘ಫಲಿತಾಂಶ ಸುಧಾರಣೆಗೆ 2 ತಿಂಗಳಲ್ಲಿ ಶಿಕ್ಷಣ‌ ತಜ್ಞರ ಸಮಿತಿ ರಚನೆಯಾಗಲಿದೆ. ಕಲಿಕಾ ಆಸರೆ ಪುಸ್ತಕಗಳನ್ನು ಆಗಸ್ಟ್ 15ರ ಒಳಗೆ ಎಸ್‌ಎಸ್‌ಎಲ್‌ಸಿ ಹಾಗೂ ಸೆಪ್ಟೆಂಬರ್ 17ರ ಒಳಗೆ 8ನೇ ಮತ್ತು 9ನೇ ತರಗತಿ ಮಕ್ಕಳಿಗೆ ವಿತರಣೆ ಮಾಡಲಾಗುವುದು’ ಎಂದರು.‌

ಅನುದಾನ ದುರ್ಬಳಕೆಯ ತನಿಖೆ: ಸಿಗದ ಸ್ಪಷ್ಟನೆ

ಕೆಕೆಆರ್‌ಡಿಬಿ ಅನುದಾನ ಬಳಕೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ತನಿಖೆಯ ಬಗ್ಗೆ ಸ್ಪಷ್ಟವಾದ ಪ್ರತಿಕ್ರಿಯೆ ಅಧ್ಯಕ್ಷರಿಂದ ವ್ಯಕ್ತವಾಗಲಿಲ್ಲ. ಈ ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ಅನುದಾನ ದುರ್ಬಳಕೆಯಾಗಿದೆ ಎಂದು ಕಾಂಗ್ರೆಸ್ಸಿಗರೇ ಆರೋಪ ಮಾಡಿದ್ದರು. ಅಧಿಕಾರಕ್ಕೆ ಬಂದ ಬಳಿಕ ತನಿಖೆ ನಡೆಸುವುದಾಗಿ ಕಾಂಗ್ರೆಸ್‌ ನಾಯಕರು ಭರವಸೆಯೂ ನೀಡಿದ್ದರು. ಅಧಿಕಾರಕ್ಕೆ ಬಂದು ಒಂದು ವರ್ಷವಾದರೂ ಅವ್ಯವಹಾರ ಸಂಬಂಧಿತ ತನಿಖೆಯ ಬಗ್ಗೆ ಸ್ಪಷ್ಟವಾದ ಉತ್ತರ ನೀಡಲಿಲ್ಲ. ತನಿಖೆ ಎಲ್ಲಿಗೆ ಬಂತು? ವರದಿ ಸಲ್ಲಿಕೆ ಯಾವಾಗ? ತನಿಖೆಗೆ ಇನ್ನೂ ಎಷ್ಟು ದಿನ ಬೇಕಾಗುತ್ತದೆ..? ಎಂಬೆಲ್ಲ ಮಾಧ್ಯಮ ಪ್ರತಿನಿಧಿಗಳ ಸರಣಿ ಪ್ರಶ್ನೆಗಳಿಗೆ ಖಚಿತವಾದ ಸ್ಪಷ್ಟನೆ ಸಿಗಲಿಲ್ಲ. ‘ತನಿಖಾ ಅಧಿಕಾರಿ ನಿವೃತ್ತರಾಗಿದ್ದಾರೆ. ತಪ್ಪಿತಸ್ಥರನ್ನು ಬಿಡುವ ಪ್ರಶ್ನೆಯೇ ಇಲ್ಲ’ ಎಂದಷ್ಟೇ ಡಾ.ಅಜಯ್‌ಸಿಂಗ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.