ADVERTISEMENT

ಕೆಕೆಆರ್‌ಟಿಸಿ: ನೂತನ ಚಾಲಕ–ನಿರ್ವಾಹಕರಿಗೆ ಸ್ಥಳ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2024, 15:46 IST
Last Updated 26 ಫೆಬ್ರುವರಿ 2024, 15:46 IST
ಕಲಬುರಗಿ ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಚೇರಿಯಲ್ಲಿ ಸೋಮವಾರ ಕೌನ್ಸೆಲಿಂಗ್‌ ಮೂಲಕ ಸ್ಥಳ ಆಯ್ಕೆಮಾಡಿಕೊಂಡ ಚಾಲಕ ಹಾಗೂ ನಿರ್ವಾಹಕರಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ನೇಮಕಾತಿ ಆದೇಶ ಪತ್ರ ವಿತರಿಸಿದರು
ಕಲಬುರಗಿ ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಚೇರಿಯಲ್ಲಿ ಸೋಮವಾರ ಕೌನ್ಸೆಲಿಂಗ್‌ ಮೂಲಕ ಸ್ಥಳ ಆಯ್ಕೆಮಾಡಿಕೊಂಡ ಚಾಲಕ ಹಾಗೂ ನಿರ್ವಾಹಕರಿಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ನೇಮಕಾತಿ ಆದೇಶ ಪತ್ರ ವಿತರಿಸಿದರು   

ಕಲಬುರಗಿ: ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಕಚೇರಿಯಲ್ಲಿ 925 ಚಾಲಕ ಹಾಗೂ 694 ಚಾಲಕ ಕಂ ನಿರ್ವಾಹಕ ಸೇರಿ ಒಟ್ಟು 1,619 ಹುದ್ದೆಗಳಿಗೆ ಆಯ್ಕೆಯಾದವರಿಗೆ ಸೋಮವಾರ ಸ್ಥಳ ನಿಯೋಜನೆಯ ಕೌನ್ಸೆಲಿಂಗ್‌ ನಡೆಯಿತು.

ಕೌನ್ಸೆಲಿಂಗ್‌ಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಗಣಕೀಕೃತ ಚಾಲನಾ ಪರೀಕ್ಷೆ ಮೂಲಕ ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ಕೂಡ ಅತ್ಯಂತ ಪಾರದರ್ಶಕವಾಗಿದೆ. ನಿಗಮದ ಘಟಕಗಳಲ್ಲಿ ಖಾಲಿ ಇರುವ ಸ್ಥಳಗಳ ಮಾಹಿತಿಯನ್ನು ದೊಡ್ಡ ಪರದೆಯಲ್ಲಿ ಅಭ್ಯರ್ಥಿಗಳಿಗೆ ಕ್ಷಣವಾರು  ನೀಡುತ್ತ ಅಭ್ಯರ್ಥಿಗಳೇ ಖುದ್ದಾಗಿ ಸ್ಥಳ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮಾತನಾಡಿ, ನೇಮಕಾತಿ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದ್ದು, ಇಡೀ ದೇಶದಲ್ಲಿಯೇ ಮಾದರಿಯಾಗಿದೆ. ನಮ್ಮ ಈ ನೇಮಕಾತಿ ಪ್ರಕ್ರಿಯೆಯನ್ನು ನೋಡಲು ರಾಜ್ಯ ಮತ್ತು ಹೊರ ರಾಜ್ಯಗಳಿಂದ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹಿರಿಯ ಅಧಿಕಾರಿಗಳೂ ಈ ವ್ಯವಸ್ಥೆಗೆ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು.

ADVERTISEMENT

ಮಾರ್ಚ್‌ 2 ರಂದು ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಆಯ್ಕೆಯಾದವರಿಗೆ ಆದೇಶ ಪತ್ರಗಳನ್ನು ನೀಡಲಿದ್ದಾರೆ ಎಂದು ತಿಳಿಸಿದರು.

ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ ವಿ.ಎಸ್., ಮುಖ್ಯ ತಾಂತ್ರಿಕ ಶಿಲ್ಪಿ ಸಂತೋಷ ಗೊಗೇರಿ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಆನಂದ ಬಂದ್ರಕಳ್ಳಿ, ಉಪ-ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಮಲ್ಲಿಕಾರ್ಜುನ ದೇಗಲಮಡಿ, ಮುಖ್ಯ ಲೆಕ್ಕಧಿಕಾರಿ ಆರ್ಥಿಕ ಸಲಹೆಗಾರ ಬಸವರಾಜ, ಮುಖ್ಯ ಕಾನೂನು ಅಧಿಕಾರಿ ಭಾವಿಕಟ್ಟಿ, ಉಪಮುಖ್ಯ ಲೆಕ್ಕಧಿಕಾರಿ ಶ್ರೀದೇವಿ ಸೇರಿ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.