ADVERTISEMENT

ಕಂಡಕ್ಟರ್, ಚಾಲಕನೊಂದಿಗೆ ಯುವಕನ ಹೊಡೆದಾಟ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2024, 7:11 IST
Last Updated 14 ನವೆಂಬರ್ 2024, 7:11 IST
ಚಿತ್ತಾಪುರ ತಾಲ್ಲೂಕಿನ ಕುಂಬಾರಹಳ್ಳಿ ರಸ್ತೆಯಲ್ಲಿ ಬಸ್ ನಿರ್ವಾಹಕ– ಯುವಕನೊಬ್ಬ ಹೊಡೆದಾಡಿಕೊಂಡಿದ್ದಾರೆ ಎನ್ನಲಾದ ದೃಶ್ಯ
ಚಿತ್ತಾಪುರ ತಾಲ್ಲೂಕಿನ ಕುಂಬಾರಹಳ್ಳಿ ರಸ್ತೆಯಲ್ಲಿ ಬಸ್ ನಿರ್ವಾಹಕ– ಯುವಕನೊಬ್ಬ ಹೊಡೆದಾಡಿಕೊಂಡಿದ್ದಾರೆ ಎನ್ನಲಾದ ದೃಶ್ಯ   

ಕಲಬುರಗಿ: ಕಲಬುರಗಿ–ಯಾದಗಿರಿ ಮಾರ್ಗದ ನಾಲವಾರ ಸಮೀಪದ ಕುಂಬಾರಹಳ್ಳಿ ರಸ್ತೆಯಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ನಿರ್ವಾಹಕ (ಕಂಡಕ್ಟರ್), ಚಾಲಕ ಹಾಗೂ ಯುವಕನೊಬ್ಬ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಜಗಳದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

‘ಡ್ರೈವರ್, ಕಂಡಕ್ಟರ್ ಏನೆಂದು ತಿಳಿದುಕೊಂಡಿದ್ದಾರೆ? ಜೀವ ತೆಗೆತಾರಾ? ವಿಡಿಯೊ ಮಾಡ್ರೊ ವಿಡಿಯೊ ಮಾಡಿ’ ಎಂದೆಲ್ಲ ಮಾತಾಡಿ, ಅವಾಚ್ಯವಾಗಿ ಬೈದಿರುವುದೂ ವಿಡಿಯೊದಲ್ಲಿ ಸೆರೆಯಾಗಿದೆ. ಪರಸ್ಪರ ಅಂಗಿ ಹಿಡಿದು, ಮುಖಕ್ಕೆ, ಎದೆ, ಹೊಟ್ಟೆಗೆ ಹೊಡೆಯುವ, ಒದೆಯುವ ದೃಶ್ಯಗಳೂ ಇವೆ.

ಜಗಳ ವಿಕೋಪಕ್ಕೆ ಹೋಗುವುದನ್ನು ಮನಗಂಡ ಸ್ಥಳೀಯರು ಗಲಾಟೆಯನ್ನು ಬಿಡಿಸಿ ಮೂವರನ್ನು ಕಳುಹಿಸಿದ್ದಾರೆ. ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.

ADVERTISEMENT

ನಡೆದಿದ್ದು ಏನು?: ‘ನವೆಂಬರ್ 12ರ ಸಂಜೆ ಕಲಬುರಗಿಯಿಂದ ಯಾದಗಿರಿಗೆ ತೆರಳುತ್ತಿದ್ದ ಬಸ್‌ನಲ್ಲಿ ಕೆಲ ವಿದ್ಯಾರ್ಥಿಗಳು ವಾಡಿಯಲ್ಲಿ ಹತ್ತಿದ್ದರು. ಬಸ್ ಚಲಿಸುತ್ತಿದ್ದಾಗ ಕಾಗದ ಚೂರುಗಳನ್ನು ಹರಿದ ವಿದ್ಯಾರ್ಥಿಗಳು ಅವುಗಳನ್ನು ಕಿಟಕಿಯಿಂದ ಹಾರಿಸುತ್ತಿದ್ದರು. ಕಾಗದ ಚೂರುಗಳು ಕಿಟಕಿಗಳಿಂದ ಮತ್ತೆ ಬಸ್‌ನಲ್ಲಿ ಬಿದ್ದವು. ಇದಕ್ಕೆ ಕೆಲವು ಪ್ರಯಾಣಿಕರು ಆಕ್ಷೇಪಿಸಿ, ಕಂಡಕ್ಟರ್ ದೂರು ನೀಡಿದ್ದರು. ಅನುಚಿತವಾಗಿ ವರ್ತಿಸದೆ ಸುಮ್ಮನೆ ಕೂರುವಂತೆ ವಿದ್ಯಾರ್ಥಿಗಳಿಗೆ ಕಂಡಕ್ಟರ್ ತಾಕೀತು ಮಾಡಿದ್ದರು’ ಎಂದು ಬಸ್ ಚಾಲಕ ಹನುಮಂತ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೀಟಲೆಯನ್ನು ಮುಂದುವರಿಸಿದ ವಿದ್ಯಾರ್ಥಿಗಳು, ಹಿಂಬದಿಯಲ್ಲಿ ಸೀಟಿನಿಂದ ಸೀಟಿಗೆ ಜಿಗಿಯುತ್ತಿದ್ದರು. ನಿತ್ಯ ಒಂದಲ್ಲಾ ಒಂದು ಚೇಷ್ಟೆ ಮಾಡಿ, ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ ಎಂದು ಕಂಡಕ್ಟರ್ ಏರು ಧ್ವನಿಯಲ್ಲಿ ಗದರಿಸಿದರು. ಇದರಿಂದ ವಾಗ್ವಾದಕ್ಕೆ ಇಳಿದ ವಿದ್ಯಾರ್ಥಿಗಳು, ತಮ್ಮ ಪರಿಚಯಸ್ಥರಿಗೆ ಫೋನ್ ಕರೆ ಮಾಡಿದ್ದರು. ಕುಂಬಾರಹಳ್ಳಿಗೆ ಬಸ್ ಬರುತ್ತಿದ್ದಂತೆ ವ್ಯಕ್ತಿಯೊಬ್ಬ ಬಂದು ನಮ್ಮೊಂದಿಗೆ ಗಲಾಟೆ ಶುರು ಮಾಡಿದ. ನಿಜ ಸಂಗತಿ ತಿಳಿಯದೆ, ಕೆಟ್ಟ ಪದಗಳಿಂದ ನಿಂದಿಸಿ ಹಲ್ಲೆಯೂ ಮಾಡಿದ್ದಾನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.