ಕಲಬುರಗಿ: ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಾರಿಗೊಳಿಸಿದ ಮಹಿಳೆಯರಿಗೆ ರಾಜ್ಯದಾದ್ಯಂತ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವ ‘ಶಕ್ತಿ’ ಯೋಜನೆಯು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಕ್ಕೆ ಆರ್ಥಿಕ ಬಲ ತುಂಬಿದೆ. ಇದರಿಂದ ಉತ್ತೇಜಿತವಾಗಿರುವ ನಿಗಮವು ಪ್ರಯಾಣಿಕರ ದಟ್ಟಣೆ ನೀಗಿಸಲು ಹೊಸದಾಗಿ 250 ಬಸ್‌ಗಳ ಖರೀದಿಗೆ ಮುಂದಾಗಿದೆ.
ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಹಾಗೂ ವಿಜಯಪುರ ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ನಿಗಮದ ಬಳಿ ಪ್ರಸ್ತುತ 4,800 ಬಸ್‌ಗಳಿವೆ. ಕಳೆದ ವರ್ಷ ನಿಗಮವು 854 ಬಸ್‌ಗಳನ್ನು ಹೊಸದಾಗಿ ಖರೀದಿಸಿತ್ತು. ಅದರಲ್ಲಿ 30 ನಾನ್ ಎಸಿ ಸ್ಲೀಪರ್ (ಅಮೋಘವರ್ಷ) ಹಾಗೂ ತಲಾ ₹ 1.70 ಕೋಟಿ ಬೆಲೆಬಾಳುವ ಆರು ವೋಲ್ವೊ ಮಲ್ಟಿ ಆ್ಯಕ್ಸೆಲ್ (ಕಲ್ಯಾಣರಥ)ಗಳನ್ನು ಖರೀದಿಸಿದೆ. ನಿಗಮವೇ ವೋಲ್ವೊದಂತಹ ದುಬಾರಿ ಬಸ್‌ಗಳನ್ನು ಖರೀದಿಸಿರುವುದರಿಂದ ಪೈಪೋಟಿಗೆ ಬಿದ್ದ ರಾಜ್ಯದ ಪ್ರಮುಖ ಖಾಸಗಿ ಸಾರಿಗೆ ಸಂಸ್ಥೆಯು ಹೊಸದಾಗಿ 100 ವೋಲ್ವೊ ಸ್ಲೀಪರ್ ಬಸ್‌ಗಳನ್ನು ಖರೀದಿಸಿದೆ.
ನಿಗಮವು ಹೊಸದಾಗಿ ಸೇರ್ಪಡೆಯಾದ ಬಸ್‌ಗಳನ್ನು ದೂರದ ನಗರಗಳಿಗೆ ಓಡಿಸುತ್ತಿದ್ದು, ವರಮಾನವೂ ಹೆಚ್ಚಾಗುತ್ತಿದೆ. ನಾನ್ ಎಸಿ ಸ್ಲೀಪರ್ ಹಾಗೂ ಕಲ್ಯಾಣರಥ ಬಸ್‌ಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಐಷಾರಾಮಿ ಬಸ್‌ಗಳನ್ನು ಖರೀದಿಸಲಾಗುವುದು ಎನ್ನುತ್ತಾರೆ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ.
‘ನಮ್ಮ ಸಾರಿಗೆ ನಿಗಮದ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಲೇ ಇದೆ. ಅಲ್ಲದೇ, ಇನ್ನಷ್ಟು ನಗರ, ಪಟ್ಟಣಗಳಿಗೆ ಬಸ್ ಬಿಡಲು ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಗಮನಿಸಿ ಹೊಸದಾಗಿ 250 ಬಸ್‌ಗಳನ್ನು ಖರೀದಿಸಲು ಪ್ರಸ್ತಾವ ಸಲ್ಲಿಸಲಾಗುತ್ತಿದೆ. ಅಲ್ಲದೇ, ಕೆಕೆಆರ್‌ಡಿಬಿಯ ₹ 45 ಕೋಟಿ ಅನುದಾನದಲ್ಲಿ ಇನ್ನಷ್ಟು ಬಸ್‌ಗಳನ್ನು ಖರೀದಿಸುವ ಪ್ರಕ್ರಿಯೆ ಚುನಾವಣೆ ನೀತಿ ಸಂಹಿತೆಯಿಂದಾಗಿ ನನೆಗುದಿಗೆ ಬಿದ್ದಿದ್ದು, ನೀತಿ ಸಂಹಿತೆ ಮುಕ್ತಾಯವಾದ ಬಳಿಕ ಖರೀದಿ ಪ್ರಕ್ರಿಯೆ ಚುರುಕುಗೊಳ್ಳಲಿದೆ’ ಎಂದು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
2.31 ಲಕ್ಷ ಕಿ.ಮೀ. ಹೆಚ್ಚುವರಿ ಸಂಚಾರ: ಕಳೆದ ವರ್ಷದ ಜೂನ್ 11ರಂದು ಶಕ್ತಿ ಯೋಜನೆ ಆರಂಭವಾದ ಬಳಿಕ ಪ್ರತಿ ದಿನ ಬಸ್‌ಗಳು ಹೆಚ್ಚುವರಿಯಾಗಿ 2.31 ಲಕ್ಷ ಕಿ.ಮೀ. ಓಡಾಟ ನಡೆಸುತ್ತಿವೆ. ಶಕ್ತಿ ಯೋಜನೆಗೆ ಮೊದಲು ನಿತ್ಯ 14.46 ಲಕ್ಷ ಕಿ.ಮೀ. ಓಡಾಟ ನಡೆಸುತ್ತಿದ್ದರೆ ಶಕ್ತಿ ಯೋಜನೆ ಬಳಿಕ 16.77 ಕಿ.ಮೀ.ಗೆ ಹೆಚ್ಚಳವಾಗಿದೆ. ಹೊಸದಾಗಿ 556 ಶೆಡ್ಯೂಲ್‌ಗಳನ್ನು ಆರಂಭಿಸಲಾಗಿದೆ. ಟ್ರಿಪ್‌ಗಳ ಸಂಖ್ಯೆಯೂ 4757ರಷ್ಟು ಹೆಚ್ಚಾಗಿದೆ.
ಕೆಕೆಆರ್‌ಟಿಸಿಯು ಶಕ್ತಿ ಯೋಜನೆಯ ಮೊತ್ತ ನಿಯಮಿತವಾಗಿ ಬರುತ್ತಿರುವುದರಿಂದ ನಷ್ಟದ ಸುಳಿಯಿಂದ ಹೊರಬರುತ್ತಿದ್ದು ಹೊಸದಾಗಿ 371 (ಜೆ) ಅಡಿ 1347 ನಿರ್ವಾಹಕರನ್ನು ನೇಮಕ ಮಾಡಲು ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆಎಂ. ರಾಚಪ್ಪ ಕೆಕೆಆರ್‌ಟಿಸಿ ಎಂ.ಡಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.