ಕಲಬುರಗಿ: ಕಲಬುರಗಿ–ಬೀದರ್–ಯಾದಗಿರಿ ಹಾಲು ಒಕ್ಕೂಟ ವ್ಯಾಪ್ತಿಯಲ್ಲಿ ಕಳೆದೊಂದು ವರ್ಷದಲ್ಲಿ ನಾಲ್ಕು ಸಾವಿರದಷ್ಟು ಹಾಲು ಪೂರೈಕೆದಾರರು ಹೆಚ್ಚಾಗಿದ್ದು, ಬಿರುಬೇಸಿಗೆಯಲ್ಲೂ ಕ್ಷೀರೋತ್ಪಾದನೆ ವೃದ್ಧಿಸಿದೆ.
2023ರ ಜನವರಿಯಿಂದ ಮೇ ಅಂತ್ಯದ ತನಕ ನಿತ್ಯ ಸರಾಸರಿ 44,644 ಕೆ.ಜಿ. ಹಾಲು ಒಕ್ಕೂಟಕ್ಕೆ ಬಂದಿತ್ತು. 2024ರ ಜನವರಿಯಿಂದ ಮೇ 29ರ ತನಕ ನಿತ್ಯ ಸರಾಸರಿ 67,683 ಕೆ.ಜಿ. ಹಾಲು ಒಕ್ಕೂಟಕ್ಕೆ ಪೂರೈಕೆಯಾಗಿದ್ದು, ಒಟ್ಟು ಶೇ52ರಷ್ಟು ವೃದ್ಧಿಸಿದೆ.
2023ರ ಜನವರಿಯಲ್ಲಿ ನಿತ್ಯ ಸರಾಸರಿ 50 ಸಾವಿರ ಕೆ.ಜಿಗಳಿಂದ 2024ರ ಜನವರಿಯಲ್ಲಿ ನಿತ್ಯ 78 ಸಾವಿರ ಕೆ.ಜಿ.ಗೆ ಹೆಚ್ಚಿತ್ತು. ಫೆಬ್ರುವರಿಯಿಂದ ಬಿಸಿಲು ಹೆಚ್ಚಿದ ಬೆನ್ನಲ್ಲೇ ಹಾಲಿನ ಉತ್ಪಾದನೆಯೂ ಕುಸಿಯುತ್ತ ಬಂದಿದ್ದು, ಮೇ ತಿಂಗಳಲ್ಲಿ ನಿತ್ಯ ಸರಾಸರಿ 59 ಸಾವಿರ ಕೆ.ಜಿ.ಗೆ ತಗ್ಗಿದೆ. 2023ರ ಮೇ ತಿಂಗಳಲ್ಲಿ ನಿತ್ಯ ಸರಾಸರಿ 44 ಸಾವಿರ ಕೆ.ಜಿ. ಹಾಲು ಒಕ್ಕೂಟಕ್ಕೆ ಪೂರೈಕೆಯಾಗಿತ್ತು.
‘2023ರ ಏಪ್ರಿಲ್‌ನಲ್ಲಿ ನಿತ್ಯ ಸರಾಸರಿ 41,927 ಕೆ.ಜಿ. ಹಾಲು ಸಂಗ್ರಹವಾಗುತ್ತಿತ್ತು. 2024ರ ಏಪ್ರಿಲ್‌ನಲ್ಲಿ ಸರಾಸರಿ ನಿತ್ಯ ಸರಾಸರಿ 61,929 ಕೆ.ಜಿ. ಹಾಲು ಸಂಗ್ರಹವಾಗಿದೆ. ಹಾಲು ಸಂಗ್ರಹದಲ್ಲಿ ಶೇ 48ಕ್ಕೂ ಅಧಿಕ ಪ್ರಮಾಣ ವೃದ್ಧಿಯಾಗಿದೆ’ ಎಂದು ಒಕ್ಕೂಟದ ಅಧಿಕಾರಿಗಳು ನೀಡಿರುವ ಅಂಕಿ–ಅಂಶಗಳು ಹೇಳುತ್ತವೆ.
ಮಜ್ಜಿಗೆ ಮಾರಾಟದಲ್ಲಿ ದಾಖಲೆ: ಮತ್ತೊಂದೆಡೆ, ಮಜ್ಜಿಗೆ ಮಾರಾಟದಲ್ಲೂ ಈ ಹಾಲು ಒಕ್ಕೂಟ ದಾಖಲೆ ಬರೆದಿದೆ. ಈ ವರ್ಷ ಬೇಸಿಗೆ ಅವಧಿಯಲ್ಲಿ ತಾಪಮಾನ ತೀವ್ರ ಹೆಚ್ಚಿದ್ದರಿಂದ ಮಜ್ಜಿಗೆಗೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಏಪ್ರಿಲ್ ತಿಂಗಳೊಂದರಲ್ಲಿಯೇ ಒಟ್ಟು 2.57 ಲಕ್ಷ ಲೀಟರ್ ಮಜ್ಜಿಗೆ ಮಾರಾಟ ಮಾಡಿದೆ.
ಫೆಬ್ರುವರಿ ತಿಂಗಳಲ್ಲಿ ನಿತ್ಯ ಸರಾಸರಿ 1,244 ಲೀಟರ್ ಮಜ್ಜಿಗೆ ಮಾರಾಟವಾಗಿತ್ತು. ಬಿಸಿಲು ತೀವ್ರಗೊಂಡಂತೆ ಮಾರ್ಚ್ ತಿಂಗಳಲ್ಲಿ ಮಜ್ಜಿಗೆ ಮಾರಾಟ ನಿತ್ಯ ಸರಾಸರಿ 4,616 ಲೀಟರ್‌ಗೆ ಹೆಚ್ಚಿತ್ತು. ಏಪ್ರಿಲ್ ತಿಂಗಳಲ್ಲಿ ಅದು ಇನ್ನಷ್ಟು ಹೆಚ್ಚಿ, ನಿತ್ಯ ಸರಾಸರಿ 8,488 ಲೀಟರ್‌ಗೆ ತಲುಪಿತ್ತು. ಮೇ ತಿಂಗಳಲ್ಲಿ ಆಗಾಗ ಮಳೆ ಸುರಿದು ವಾತಾವರಣ ತಂಪಾದ ಕಾರಣ, ಮಜ್ಜಿಗೆಗೆ ಬೇಡಿಕೆ ಕುಸಿದಿದ್ದು, ನಿತ್ಯ ಸರಾಸರಿ 6,500 ಲೀಟರ್‌ಗಳಿಗೆ ತಗ್ಗಿದೆ.
ತುಪ್ಪ ಉತ್ಪಾದನೆ ಗಣನೀಯ ವೃದ್ಧಿ: ಕಲಬುರಗಿ, ಬೀದರ್, ಯಾದಗಿರಿ ಹಾಲು ಒಕ್ಕೂಟವು ತುಪ್ಪ ಉತ್ಪಾದನೆಯಲ್ಲೂ ಹೊಸ ಮಲ್ಲಿಗಲ್ಲು ನಿರ್ಮಿಸಿದೆ. ಒಕ್ಕೂಟವು 2022–23ನೇ ಆರ್ಥಿಕ ವರ್ಷದಲ್ಲಿ ಪ್ರತಿದಿನ ಸರಾಸರಿ 254 ಕೆ.ಜಿ ತುಪ್ಪ ಉತ್ಪಾದಿಸಿದರೆ, 2023–24ನೇ ಆರ್ಥಿಕ ವರ್ಷದಲ್ಲಿ ನಿತ್ಯ ಸರಾಸರಿ 739 ಕೆ.ಜಿ.ತುಪ್ಪ ಉತ್ಪಾದನೆಯಾಗುತ್ತಿದ್ದು, ಶೇ 290ರಷ್ಟು ವೃದ್ಧಿಯಾಗಿದೆ. ಏಪ್ರಿಲ್‌ನಲ್ಲಿ 16,954 ಕೆ.ಜಿ., ಮೇ 26ರ ತನಕ 15 ಸಾವಿರ ಕೆ.ಜಿ.ಗಳಷ್ಟು ತುಪ್ಪ ಉತ್ಪಾದಿಸಲಾಗಿದೆ.
‘ಎಮ್ಮೆ ಹಾಲು ಪ್ರತ್ಯೇಕ ಶೇಖರಣೆ, ಅದಕ್ಕೆ ಒಕ್ಕೂಟದಿಂದ ಹೆಚ್ಚುವರಿ ಬೆಂಬಲ ಬೆಲೆ ನೀಡುತ್ತಿರುವ ಫಲವಾಗಿ ಉತ್ಕೃಷ್ಟ ಗುಣಮಟ್ಟದ ಎಮ್ಮೆ ಹಾಲು ಯಥೇಚ್ಛವಾಗಿ ಒಕ್ಕೂಟಕ್ಕೆ ಪೂರೈಕೆಯಾಗುತ್ತಿದೆ. ಅದರಿಂದ ಸಹಜವಾಗಿಯೇ ತುಪ್ಪ ಉತ್ಪಾದನೆಯು ದಾಖಲೆಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸದ್ಯ ನಿತ್ಯ 20 ಸಾವಿರ ಲೀಟರ್‌ಗಳಷ್ಟು ಎಮ್ಮೆ ಹಾಲು ಸಂಗ್ರಹವಾಗುತ್ತಿದ್ದು, ಅಕ್ಟೋಬರ್ ವೇಳೆಗೆ 50 ಸಾವಿರ ಲೀಟರ್‌ಗಳಷ್ಟು ಎಮ್ಮೆಹಾಲು ಸಂಗ್ರಹಿಸುವ ನಿರೀಕ್ಷೆಯಿದೆ’ ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಪಾಟೀಲ ವಿಶ್ವಾಸ ವ್ಯಕ್ತಪಡಿಸುತ್ತಾರೆ.
‘ಫಲ ನೀಡುತ್ತಿದೆ ಒಕ್ಕೂಟದ ಶ್ರಮ’
‘ಗುಣಮಟ್ಟದ ಆಧಾರದಲ್ಲಿ ದರ ಕೊಡುತ್ತಿರುವುದು ಪ್ರತಿ ಲೀಟರ್ ಎಮ್ಮೆ ಹಾಲಿಗೆ ರಾಜ್ಯದಲ್ಲೇ ಅತಿಹೆಚ್ಚು ದರ (ಲೀಟರ್‌ಗೆ ₹49) ನೀಡುತ್ತಿರುವುದು ಹೈನುಗಾರರಿಗೆ ಮೇವಿನ ಬೀಜ ಮೇವಿನ ಬೇರು ರಿಯಾಯಿತಿ ದರದಲ್ಲಿ ಪಶು ಆಹಾರ ವಿತರಣೆ ಹೈನುಗಾರಿಕೆ ಬಗ್ಗೆ ಸಾಧ್ಯವಾದಷ್ಟು ರೈತರಿಗೆ ತರಬೇತಿ ಹಾಲು ಪೂರೈಕೆದಾರರಿಗೆ ಪ್ರತಿ 10 ದಿನಗಳಿಗೊಮ್ಮೆ ಹಾಲಿನ ಹಣ ಪಾವತಿಯಂತಹ ಕ್ರಮ ಹಾಗೂ ಶ್ರಮದ ಫಲವಾಗಿ ಒಕ್ಕೂಟಕ್ಕೆ ಹರಿದು ಬರುತ್ತಿರುವ ಹಾಲಿನ ಪ್ರಮಾಣ ಹೆಚ್ಚಾಗಿದೆ’ ಎನ್ನುತ್ತಾರೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ಪಾಟೀಲ.
ಇನ್ನೂ ನೀಗಿಲ್ಲ ಕೊರತೆ...
ಕ್ಷೀರೋತ್ಪಾದನೆ ಗಮನಾರ್ಹ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ಬೇಡಿಕೆ ಪೂರೈಸುವಷ್ಟು ಸ್ವಾವಲಂಬಿತನ ಸಾಧ್ಯವಾಗಿಲ್ಲ. ಬೇರೆ ಒಕ್ಕೂಟದಿಂದ ಹಾಲು ಪಡೆಯುವುದು ನಿಂತಿಲ್ಲ. ‘ಒಕ್ಕೂಟ ವ್ಯಾಪ್ತಿಯ ಜಿಲ್ಲೆಗಳಲ್ಲಿ ಗ್ರಾಹಕರ ಬೇಡಿಕೆ ಪೂರೈಸಲು ನಿತ್ಯ 90 ಸಾವಿರ ಹಾಲು ಲೀಟರ್ ಬೇಕಿದೆ. ಸದ್ಯ ಕೊರತೆಯಾಗುತ್ತಿರುವ ಸುಮಾರು 30 ಸಾವಿರ ಲೀಟರ್‌ಗಳಷ್ಟು ಹಾಲನ್ನು ವಿಜಯಪುರ ಹಾಲು ಒಕ್ಕೂಟದಿಂದ ತರಿಸಿಕೊಳ್ಳಲಾಗುತ್ತಿದೆ’ ಎಂದು ಒಕ್ಕೂಟದ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.