ಚಿಂಚೋಳಿ: ಊರಿಗೆ ಹೋಗಿದ್ದ ಪತ್ನಿಯನ್ನು ಕರೆದುಕೊಂಡು ಮನೆಗೆ ಹೋಗಲು ಬಸ್ ನಿಲ್ದಾಣದ ಬಳಿ ಕಾಯುತ್ತಿದ್ದ ವ್ಯಕ್ತಿ ರಸ್ತೆ ದಾಟುವಾಗ ವಾಹನವೊಂದು ಡಿಕ್ಕಿ ಹೊಡೆದು ಸಾವನ್ನಪ್ಪಿದ ಘಟನೆ ಬಾಪೂರ ಮಹಿಬೂಬನಗರ ರಾಷ್ಟ್ರೀಯ ಹೆದ್ದಾರಿ 167ರಲ್ಲಿ ಬರುವ ಕೊಳ್ಳೂರು ಬಳಿ ಬುಧವಾರ ರಾತ್ರಿ ಸಂಭವಿಸಿದೆ.
ದೇವೇಂದ್ರಪ್ಪ ಸಿದ್ದಪ್ಪ ಅಪ್ಪಣ್ಣೋರ್ (65) ಮೃತರು. ಅವರ ಪತ್ನಿ ಬೀದರ್ ಜಿಲ್ಲೆಯ ಮನ್ನಾಎಖ್ಖೆಳ್ಳಿಗೆ ಹೋಗಿದ್ದರು. ಅವರನ್ನು ಮನೆ ಕರೆದುಕೊಂಡು ಹೋಗಲು ಪಟಪಳ್ಳಿ ಕ್ರಾಸ್ ಬಳಿ ಕಾಯುತ್ತಿದ್ದರು. ಆಗ ರಸ್ತೆ ದಾಟುವಾಗ ದೇವೇಂದ್ರಪ್ಪ ಅವರಿಗೆ ವಾಹನ ಡಿಕ್ಕಿ ಹೊಡೆದು ಪರಾರಿಯಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಅವರು ಮೃತಪಟ್ಟಿದ್ದಾರೆ.
ಮೃತರ ಪುತ್ರ ಶಂಭುಲಿಂಗ ಅಪ್ಪಣ್ಣೋರ್ ನೀಡಿದ ದೂರಿನ ಅನ್ವಯ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳವಾರ ರಾತ್ರಿ 10ಗಂಟೆ ಸುಮಾರಿಗೆ ಪೊಲಕಪಳ್ಳಿ ಬಳಿ ಅಪರಿಚಿತ ವಾಹನ ಬೈಕ್ ಸವಾರನಿಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. 24 ಗಂಟೆ ಒಳಗಾಗಿಯೇ ಕೊಳ್ಳೂರು ಬಳಿ ಪಟಪಳ್ಳಿ ಕ್ರಾಸ್ನಲ್ಲಿ ಮತ್ತೊಂದು ಘಟನೆ ನಡೆದಿದೆ. ಇದರಿಂದ 24 ಗಂಟೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಘಟನೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.