ADVERTISEMENT

ಕಲಬುರಗಿ | ಕೃಷಿ ಜಾತ್ರೆ; ಗಮನ ಸೆಳೆಯುತ್ತಿದೆ ಕುದುರೆ ಪ್ರದರ್ಶನ

ಮಲ್ಲಪ್ಪ ಪಾರೇಗಾಂವ
Published 29 ಜುಲೈ 2024, 6:06 IST
Last Updated 29 ಜುಲೈ 2024, 6:06 IST
ಪ್ರದರ್ಶನಕ್ಕಿಟ್ಟಿರುವ ಸಿಂಧಿ ತಳಿ ಕುದುರೆ
ಪ್ರದರ್ಶನಕ್ಕಿಟ್ಟಿರುವ ಸಿಂಧಿ ತಳಿ ಕುದುರೆ   

ಕಲಬುರಗಿ: ರಾಜಸ್ಥಾನದ ‘ಮಾರವಾಡಿ‘, ಗುಜರಾತಿನ ‘ಕಾಠೇವಾಡಿ’ ಹಾಗೂ ಸಿಂಧ್‌ ಪ್ರಾಂತ್ಯದ ‘ಸಿಂಧಿ’  ಹೆಸರಿನ ಭಾರತೀಯ ತಳಿಯ ಕುದುರೆಗಳ ಪ್ರದರ್ಶನವು, ನಗರದ ಎಪಿಎಂಸಿಯಲ್ಲಿ ನಡೆಯುತ್ತಿರುವ ಸಾವಯವ ಕೃಷಿ ಜಾತ್ರೆಯಲ್ಲಿ ಗಮನ ಸೆಳೆಯುತ್ತಿದೆ.

ಕುದುರೆಗಳ ವೀಕ್ಷಣೆಗೆ ಬರುವ ರೈತರು, ಜಿಲ್ಲೆಯಲ್ಲಿ ಕುದುರೆಗಳ ಸಾಕಾಣಿಕೆಯೂ ಇರುವುದನ್ನು ಕಂಡು, ‘ನಮ್ಮೂರಲ್ಲೂ ಕುದುರೆಗಳನ್ನು ಸಾಕುತ್ತಾರಾ...’ ಎಂದು ಉದ್ಘಾರ ತೆಗೆದರು. ಜಿಲ್ಲೆಯಲ್ಲಿ ಬಹುತೇಕ ಕುದುರೆಗಳ ಮಾಲೀಕರು ರಾಜಕಾರಣಿಗಳು, ಜಪ್ರತಿನಿಧಿಗಳು, ಉದ್ಯಮಿಗಳಾಗಿದ್ದಾರೆ.

‘ಭಾರತದಲ್ಲಿ ವಿವಿಧ ತಳಿಗಳ ಕುದುರೆ ಸಾಕಾಣಿಕೆಯಿದೆ. ಅದರಲ್ಲಿ ಕಾಠೇವಾಡಿ, ಮಾರವಾಡಿ, ಸ್ಪಿಟಿ, ಸಿಂಧಿ, ಮಣಿಪುರಿ ಪೋನಿ, ಪಶ್ಚಿಮ ಬಂಗಾಳದ ಭೂತೀಯಾ, ಜನಸ್ಕಾರಿ ಮುಖ್ಯವಾದವು. ಕರ್ನಾಟಕದಲ್ಲೂ ಭೀಮಾನದಿ ತೀರದಲ್ಲಿ ‘ಭೀಮ್‌’ ತಳಿಯ ಕುದುರೆಗಳು ಪ್ರಸಿದ್ಧಿಯಾಗಿವೆ. ಈ ತಳಿಯ ಕುದುರೆಗಳನ್ನು ಶಿವಾಜಿಯು ತನ್ನ ಸೈನ್ಯದಲ್ಲಿ ಹೆಚ್ಚಾಗಿ ಬಳಸುತ್ತಿದ್ದ. ಸದ್ಯ ಕುರಿಗಾಹಿಗಳು ಸಾಕಾಣಿಕೆ ಮಾಡುತ್ತಾರೆ. ಜಿಲ್ಲೆಯಲ್ಲಿ ಕೇವಲ 40 ಕುದುರೆಗಳಿವೆ. ಅದರಲ್ಲಿ 20 ಕುದುರೆಗಳಿಗೆ ಅಂತರರಾಷ್ಟ್ರೀಯ ಸ್ಪರ್ಧೆಗಳ ಕುರಿತಾದ ತರಬೇತಿ ನೀಡಲಾಗುತ್ತಿದ್ದು, ಉಳಿದ 20 ಕುದುರೆಗಳನ್ನು ರೈತರು ತಮ್ಮ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಕಾಣಿಕೆ ಮಾಡುತ್ತಿದ್ದಾರೆ’ ಎಂದು ಕರ್ನಾಟಕ ಇಂಡಿಜೀನಸ್‌ ಹಾರ್ಸ್‌ ಅಸೋಸಿಯೇಷನ್‌ (ಕೆಐಎಚ್‌ಎ) ಅಧ್ಯಕ್ಷ ನಿಖಿಲ್‌ ಕುಲಕರ್ಣಿ ಮಾಹಿತಿ ನೀಡಿದರು. 

ADVERTISEMENT

ಲಾಭದಾಯಕ ಬಹುಪಯೋಗಿ, ಕುದುರೆಗಳು: ಕುದುರೆ ಸಾಕಾಣಿಕೆ ಲಾಭದಾಯಕವೂ ಆಗಿದ್ದು, ರೈತ ಸ್ನೇಹಿಯೂ ಆಗಿದೆ. ರೈತರು, ಕೋಳಿ, ಕುರಿ ಸಾಕಾಣಿಕೆಯಂತೆಯೇ ಕುದುರೆ ಸಾಕಾಣಿಕೆಯನ್ನೂ ಮಾಡಬಹುದು. ನಿರ್ವಹಣಾ ವೆಚ್ಚವೂ ಕಡಿಮೆಯಾಗಿದ್ದು, ಹೆಚ್ಚಿನ ಲಾಭ ಪಡೆಯಬಹುದಾಗಿದೆ.

‘ಒಂದು ವರ್ಷದ ಕುದುರೆ ಮರಿಯನ್ನು ತಂದು, ಎರಡು ವರ್ಷದ ಬಳಿಕ ಮಾರಾಟ ಮಾಡಬಹುದಾಗಿದೆ. ಕುದುರೆಗಳಿಗಾಗಿ ವಿಶೇಷ ಆಹಾರ ಸಿದ್ಧಪಡಿಸಬೇಕಿಲ್ಲ. ಬೇರೆ ಜಾನುವಾರುಗಳಂತೆಯೇ ಹಸಿರು ಹುಲ್ಲು, ಹೊಟ್ಟು, ತೌಡು ಹಾಗೂ ಶೇಂಗಾ, ಹತ್ತಿ ಹಿಂಡಿಗಳನ್ನು ಆಹಾರವಾಗಿ ನೀಡಬಹುದಾಗಿದೆ. ಹೀಗಾಗಿ ರೈತರಿಗೆ ಸಾಕಾಣಿಕೆ ಹೊರೆ ಎನಿಸುವುದಿಲ್ಲ. ಬಳಿಕ ₹ 4, ₹ 5 ಲಕ್ಷಗಳವರೆಗೂ ಕುದುರೆಗಳನ್ನು ಮಾರಾಟ ಮಾಡಬಹುದಾಗಿದೆ’ ಎಂದು ನಿಖಿಲ್‌ ಮಾಹಿತಿ ನೀಡಿದರು.

ಕುದುರೆಗಳು ಬಹುಪಯೋಗಿ ಆಗಿದ್ದು, ರೈತರ ಬಹುತೇಕ ಕೆಲಸ ಕಾರ್ಯಗಳಿಗೆ ಸಹಾಯಕವಾಗಿವೆ. 6ರಿಂದ 7 ಕ್ವಿಂಟಲ್‌ವರೆಗೆ ಭಾರವನ್ನು ಎಳೆಯುತ್ತವೆ. ಮಳೆಗಾಲದಲ್ಲಿ ಕೆಸರು ಗದ್ದೆಯಂತಹ ರಸ್ತೆಗಳಲ್ಲಿ, ಬೆಟ್ಟಗುಡ್ಡದಂತಹ ಪ್ರದೇಶಗಳಲ್ಲಿರುವ ಹೊಲಗಳಿಗೆ ಕುದುರೆಗಳ ಮೇಲೆ ತೆರಳಬಹುದಾಗಿದೆ. ಆಧುನಿಕ ವಾಹನಗಳಂತೆ ಕೆಸರಲ್ಲಿ ಸಿಕ್ಕಿಹಾಕಿಕೊಳ್ಳುವ ಭೀತಿ ಇರುವುದಿಲ್ಲ.

‘ನಿಷ್ಠೆಗೆ ಹೆಸರಾದ ಮಾರವಾಡಿ ತಳಿ’: ಮೊಘಲ್‌ ಸಾಮ್ರಾಜ್ಯಕ್ಕೆ ಸಿಂಹ ಸ್ವಪ್ನವಾಗಿದ್ದ ಮಹಾರಾಣಾ ಪ್ರತಾಪ್‌ ಸಿಂಹ್‌ನ ನಿಷ್ಠಾವಂತ ಕುದುರೆ ಎಂದೇ ಖ್ಯಾತಿಯಾಗಿದ್ದ ‘ಚೇತಕ್‌’ ಕುದುರೆಯ ತಳಿ ಮಾರವಾಡಿ. ನಿಷ್ಠೆಗೆ ಹೆಸರಾಗಿರುವ ಕುದುರೆ ತಳಿಯು ಸದೃಢ ದೇಹ, ಶ್ರೇಷ್ಠ ದೈಹಿಕ ಸಹಿಷ್ಣುತಾ ಸಾಮರ್ಥ್ಯ ಹಾಗೂ ಚುರುಕುತನಕ್ಕೆ ಹೆಸರಾಗಿದ್ದು, ಸಾಕಾಣಿಕೆಗೆ ಯೋಗ್ಯವಾಗಿದೆ.

ಕುದುರೆಗಳಿಗೆ ತರಬೇತಿ: ಭಾರತೀಯ ತಳಿಯ ಕುದುರೆಗಳಿಗೆ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ತರಬೇತಿ ನೀಡಿ, ದೈಹಿಕ ಸಹಿಷ್ಣುತೆ ಸಾಮರ್ಥ್ಯದ ಪರೀಕ್ಷೆ ನಡೆಸಲಾಗುತ್ತದೆ. ತಿಪಟೂರಿನ ಏಷ್ಯಾದ ಅತ್ಯಂತ ಕಠಿಣಮಯ ಎನಿಸಿರುವ ಟ್ರ್ಯಾಕ್‌ನಲ್ಲಿ 40 ಕಿ.ಮೀ. ಹಾಗೂ 20 ಕಿ.ಮೀ. ರನ್ನಿಂಗ್‌ ಸ್ಪರ್ಧೆ ನಡೆಸಲಾಗುತ್ತದೆ. ಜತೆಗೆ ಟೆಂಟ್‌ ಪೆಗ್ಗಿಂಗ್‌, ಕೋ ಜಂಪಿಂಗ್‌, ಡ್ರೆಸಾಜ್‌ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಅಗತ್ಯವಿರುವಂತಹ ತಂತ್ರಗಳ ತರಬೇತಿಯನ್ನೂ ನೀಡಲಾಗುತ್ತಿದೆ. ಸದ್ಯ ಒಲಿಂಪಿಕ್ಸ್‌, ಏಷ್ಯನ್‌ ಗೇಮ್ಸ್‌ನಂತಹ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಆಯೋಜಿಸುವ ಇಕ್ವೆಸ್ಟ್ರೀಯನ್‌ ಕ್ರೀಡೆಯಲ್ಲಿ ಕುದುರೆಗಳನ್ನು ಬಳಸಲಾಗುತ್ತದೆ.

ಪ್ರದರ್ಶನಕ್ಕಿಟ್ಟಿರುವ ವಿವಿಧ ತಳಿ ಕುದುರೆಗಳು
ಭಾರತೀಯ ತಳಿಯ ಕುದುರೆಗಳು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಅಗತ್ಯವಿರುವ ಎಲ್ಲ ತರಬೇತಿಗಳನ್ನು ನೀಡಲಾಗುತ್ತಿದೆ. ಜತೆಗೆ ದೇಶದಲ್ಲಿ ವಿವಿಧ ಕದುರೆ ತಳಿಗಳ ಅಭಿವೃದ್ಧಿಗೂ ಒತ್ತು ನೀಡಲಾಗುತ್ತಿದ್ದು ಮುಂದಿನ ದಿನಗಳಲ್ಲಿ ರೈತರಿಗೂ ಕುದುರೆಗಳನ್ನು ಸಾಕುವಂತೆ ಪ್ರೋತ್ಸಾಹಿಸಲಾಗುವುದು
ನಿಖಿಲ್‌ ಕುಲಕರ್ಣಿ ಕೆಎಚ್‌ಐಡಿ ಅಧ್ಯಕ್ಷ
ನಮ್ಮ ಜಿಲ್ಲೆಯಲ್ಲಿ ಕುದುರೆಗಳನ್ನು ಸಾಕುತ್ತಾರೆ ಎಂಬ ವಿಷಯ ತಿಳಿದಿರಲಿಲ್ಲ. ಆದರೆ ಕೃಷಿ ಮೇಳದಲ್ಲಿರುವ ಕುದುರೆಗಳನ್ನು ನಮ್ಮ ಜಿಲ್ಲೆಯಲ್ಲಿಯೇ ಸಾಕಾಣಿಕೆ ಮಾಡುತ್ತಿರುವುದು ತಿಳಿದು ಸಂತಸವಾಗಿದೆ. ಸಾಕಾಣಿಕೆ ಮಾಹಿತಿಯನ್ನೂ ಪಡೆದಿದ್ದು ಕುತೂಹಲ ಹೆಚ್ಚಿದೆ
ವಿಲಾಸ ಕಾಂಬಳೆ ಗಂಜ್‌ ಪ್ರದೇಶದ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.