ಕುಂಚಾವರಂ(ಚಿಂಚೋಳಿ): ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಪ್ರಯುಕ್ತ ಶನಿವಾರ ಗ್ರಾಮ ವಾಸ್ತವ್ಯಕ್ಕಾಗಿ ಗಡಿ ಗ್ರಾಮ ಕುಂಚಾವರಂಗೆ ಬಂದ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಅವರು ಜನರ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದರು.
ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿಗಳು ಮಾತನಾಡಿದ ಅವರು, ಜಿಲ್ಲೆಯಲ್ಲಿ 1000ಕ್ಕೂ ಮೇಲ್ಪಟ್ಟು ಗ್ರಾಮಗಳು ಇದ್ದರೂ ಸಹ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಹಾಗೂ ಶಿಶು ಮಕ್ಕಳ ಮಾರಾಟದಿಂದ ಅಪಖ್ಯಾತಿಗೆ ಒಳಗಾಗಿರುವ ಕುಂಚಾಚರಂ ಗ್ರಾಮದ ಸಮಸ್ಯೆಗಳ ಪರಿಹಾರಕ್ಕಾಗಿ ಈ ಗ್ರಾಮ ಆಯ್ಕೆ ಮಾಡಿಕೊಂಡಿದ್ದೇನೆ ಎಂದರು.
ರಾಜ್ಯದಲ್ಲಿ ಹತ್ತು ವರ್ಷದಿಂದ ಕೆಲಸನಿರ್ವಹಿಸುತ್ತಿರುವ ನನಗೆ ಇಲ್ಲಿನ ಮಕ್ಕಳ ಮಾರಾಟ ತುಂಬಾ ನೋವು ತಂದಿದೆ ಎಂದು ಅತಂಕ ವ್ಯಕ್ತಪಡಿಸಿದರು.
ಯಾವುದೇ ತಂದೆ- ತಾಯಿ ಮಕ್ಕಳನ್ನು ಮಾರಾಟ ಮಾಡಲು ಇಚ್ಛೆ ಪಡುವುದಿಲ್ಲ ಎಂಬುದನ್ನು ಎಲ್ಲರು ಮನೆಗಾಣಬೇಕಿದೆ. ಎಲ್ಲರೂ ತಮ್ಮ ಮಕ್ಕಳನ್ನು ಉತ್ತಮ ರೀತಿಯಲ್ಲಿಯೇ ರೂಪಿಸಲು ಪ್ರಯತ್ನಿಸುತ್ತಾರೆ. ಸಾಮಾಜಿಕ ಸಮಸ್ಯೆ, ಶಿಕ್ಷಣದ ಕೊರತೆ, ಆರ್ಥಿಕ ತೊಂದರೆ ಹೀಗೆ ನಾನಾ ಕಾರಣಗಳು ಮಕ್ಕಳ ಮರಾಟಕ್ಕಿರಬಹುದು.
ತಾಯಿ ಆಗಿ ಬಂದಿದ್ದೇನೆ:
ಇಡೀ ದಿನ ಗ್ರಾಮದಲ್ಲಿ ಇದ್ದು, ನಿಮ್ಮ ಸಮಸ್ಯೆಗಳನ್ನು ಅರಿತು ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ನನಗೂ ಚಿಕ್ಕ ಮಕ್ಕಳಿದ್ದು, ಓರ್ವ ತಾಯಿಯಾಗಿ ಜವಾಬ್ದಾರಿಯನ್ನರಿತು ಅವರನ್ನು ಸಹ ನನ್ನೊಂದಿಗೆ ಗ್ರಾಮ ವಾಸ್ತವ್ಯಕ್ಕೆ ಕರೆದುಕೊಂದು ಬಂದಿದ್ದೇನೆ.
ಗ್ರಾಮ ವಾಸ್ತವ್ಯ ಅಂಗವಾಗಿ ಕಳೆದ ಮೂರು ದಿನಗಳ ಕಾಲ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಗ್ರಾಮದ ಮನೆ-ಮನೆಗೆ ತೆರಳಿ ಸಾಮಾಜಿಕ ಪಿಂಚಣಿ ಹಾಗೂ ಇನ್ನಿತರ ಯೋಜನೆಗಳ ಬಗ್ಗೆ ಅರ್ಜಿದಾರರಿಂದ ಮಾಹಿತಿ ಪಡೆದಿದ್ದಾರೆ. ಅರ್ಹ ಸುಮಾರು 80 ಫಲಾನುಭವಿಗಳಿಗೆ ಸಾಯಂಕಾಲವೇ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ ಎಂದರು .
ಗ್ರಾಮದಲ್ಲಿ ಸರ್ಕಾರಿ ಸೌಲಭ್ಯ ಒದಗಿಸಲು ಯಾರಾದರೂ ದುಡ್ಡು ಕೇಳಿದರೆ ದೂರು ಕೊಡಿ ಕಠಿಣ ಕ್ರಮ ಕೈಗೊಳ್ಳುವೆ.
ಗ್ರಾಮದಲ್ಲಿ ರೌಡಿಗಳು, ಪುಡಿ-ಪೋಕರಿಗಳಿಂದ ತೊಂದರೆಯಿದ್ದಲ್ಲಿ ಗನಕ್ಕೆ ತನ್ನಿ. ಪೊಲೀಸರಿಂದ ಅಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವೆ ಎಂದೂ ಹೇಳಿದರು.
ಆಡಳಿತವೇ ಇಂದು ನಿಮ್ಮ ಮನೆ ಬಾಗಿಲಿಗೆ ಬಂದಿದ್ದು, ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದು ಮನವಿ ಮಾಡಿದರು.
ಮನವಿಗಳೇನು:
ಸಾಮಾಜಿಕ ಭದ್ರತಾ ಯೋಜನೆಯ ವೃದ್ಧಾಪ್ಯ, ಸಂಧ್ಯಾ ಸುರಕ್ಷಾ, ಅಂಗ ವಿಕಲ ವೇತನ, ಹಾಗೂ ಜಮೀನಿನ ಸಮಸ್ಯೆ , ಪಾಲು ನೀಡದೇ ಅನ್ಯಾಯ ಮಾಡಿರುವುದರ ಬಗ್ಗೆ ಜನರು ಮನವಿ ನೀಡಿದರು.
ಕಾಲಿಗೆ ಬಿದ್ದ ಮಹಿಳೆ:
'ಅಮ್ಮಾ ನಿನ್ನ ಕಾಲಿಗೆ ಬೀಳುವೆ. ನನ್ನ ಗಂಡ ನಿಧನರಾಗಿದ್ದಾರೆ. ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ಅವರನ್ನು ಕೂಲಿ ಮಾಡಿ ಸಾಕುತ್ತಿದ್ದೇನೆ. ನನ್ನ ಪತಿ ಕುಟುಂಬಕ್ಕೆ 5 ಎಕರೆ 15 ಗುಂಟೆ ಜಮೀನಿದೆ. ಆದರೆ ನನ್ನ ಪತಿಗೆ ಪಾಲು ನೀಡದೇ ಅನ್ಯಾಯ ಮಾಡಿದ್ದಾರೆ. ನನಗೆ ಬೇರೆ ಜಮೀನಿಲ್ಲ. ನನಗೆ ಪಾಲು ಕೊಡಿಸಿ' ಎಂದು ಶಾದಿಪುರದ ಅಮೃತಮ್ಮ ವೀರಪ್ಪ ನಿವೇದಿಸಿಕೊಂಡು ಡಿಸಿ ಕಾಲಿಗೆಗೆರಗಿದರು.
ತಕ್ಷಣ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ,ತಹಶೀಲ್ದಾರರಿಂದ ವಿವರಣೆ ಪಡೆದು, ತಹಶೀಲ ಕಚೇರಿಯ ನ್ಯಾಯಾಲಯದಲ್ಲಿ ದಾವೆ ಹೂಡುವ ಮೂಲಕ ಅವರಿಗೆ ಪಾಲು ಕೊಡಿಸಲು ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.