ADVERTISEMENT

ಕಲಬುರಗಿ: ಸುಡುಬಿಸಿಲಿನಲ್ಲಿ ಹಾಲುಮತ ‘ಶಕ್ತಿ’ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 5 ಮೇ 2024, 16:14 IST
Last Updated 5 ಮೇ 2024, 16:14 IST
ಕಲಬುರಗಿಯಲ್ಲಿ ಭಾನುವಾರ ನಡೆದ ಸ್ವಾಭಿಮಾನಿ ಕುರುಬ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖಂಡರು
ಕಲಬುರಗಿಯಲ್ಲಿ ಭಾನುವಾರ ನಡೆದ ಸ್ವಾಭಿಮಾನಿ ಕುರುಬ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಮುಖಂಡರು   

ಕಲಬುರಗಿ: ‘ಕಮಲಾಪುರದ ಲಾಡ ಮುಗಳಿ ಘಟನೆ ಸೇರಿದಂತೆ ಜಿಲ್ಲೆಯಲ್ಲಿ ನಮ್ಮ ಸಮುದಾಯದ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ’ ಎಂದು ಆರೋಪಿಸಿ ಜಿಲ್ಲೆಯ ವಿವಿಧೆಡೆಯ ಹಾಲುಮತ ಸಮಾಜದ ನೂರಾರು ಜನರು ಭಾನುವಾರ ಶಕ್ತಿ ಪ್ರದರ್ಶನ ನಡೆಸಿದರು.

ನಗರದ ವೀರಶೈವ ಕಲ್ಯಾಣ ಮಂಟಪದ ಎದುರಿನ ಜಾಗದಲ್ಲಿ ಸುಡು ಬಿಸಿಲಿನಲ್ಲಿಯೇ ‘ಸ್ವಾಭಿಮಾನಿ ಕುರುಬರ ಸಮಾವೇಶ’ ಜರುಗಿತು. ವೇದಿಕೆಯಿಂದ ಭಾಷಣ ಮಾಡಿದ ಹಲವು ಮುಖಂಡರು ‘ಪಕ್ಷಾತೀತ ಸಮಾವೇಶ’ ಎನ್ನುತ್ತಲೇ ಕಾಂಗ್ರೆಸ್‌, ಖರ್ಗೆ ಪರಿವಾರ ವಿರುದ್ಧ ಗುಡುಗಿದರು. ‘ನಿಖಿಲ್‌ ಕುಟುಂಬಕ್ಕೆ ₹1 ಕೋಟಿ ನೆರವು ನೀಡಬೇಕು. ಜೊತೆಗೆ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ಕೊಡಬೇಕು. ಅಟ್ರಾಸಿಟಿಗೆ ಒಳಗಾದ ಹುಡುಗರನ್ನು ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ಬಳಿಕ ವೀರಶೈವ ಕಲ್ಯಾಣ ಮಂಟಪದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಜಗತ್‌ ವೃತ್ತದ ತನಕ ಸಾಗಿದರು. ಅಲ್ಲಿ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿದರು. ನಂತರ ಮುಖ್ಯಮಂತ್ರಿ ಅವರಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

ADVERTISEMENT

ಇದಕ್ಕೂ ಮುನ್ನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಕುರುಬ ಸಮಾಜದ ಮುಖಂಡರು, ‘ಹಿಂದುಳಿದ ವರ್ಗದವರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸದಂತೆ ಕಾಯ್ದೆಗೊಳಿಸುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಮುಖಂಡ ಸೈಬಣ್ಣ ಪೂಜಾರಿ, ‘ನಾನು ಜಿಲ್ಲಾ ಪ್ರದೇಶ ಕುರುಬರ ಸಂಘದ ಕಾರ್ಯಾಧ್ಯಕ್ಷ. ಗುರುನಾಥ ಪೂಜಾರಿ ಅಧ್ಯಕ್ಷರು. ನಮಗೇ ಗೊತ್ತಿಲ್ಲದಂತೆ ಕೆಲವರು ಕಾಂಗ್ರೆಸ್‌ಗೆ ಕುರುಬ ಸಮುದಾಯದ ಬೆಂಬಲವಿದೆ ಎಂದು ಘೋಷಿಸಿದ್ದಾರೆ. ಈ ಕುರಿತು ಸಂಘದಲ್ಲಿ ನಿರ್ಣಯವನ್ನೇ ಕೈಗೊಂಡಿಲ್ಲ. ಒಂದು ಪಕ್ಷಕ್ಕೆ ಇಡೀ ಸಮಾಜದ ಬೆಂಬಲವಿದೆ ಎಂದು ಘೋಷಿಸಲು ಅಧಿಕಾರ ಕೊಟ್ಟವರ್‍ಯಾರು?’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ನಿಂಗಣ್ಣ ಪೂಜಾರಿ ಮಾತನಾಡಿ, ‘ಜಿಲ್ಲೆಯಲ್ಲಿ ಅಟ್ರಾಸಿಟಿ ಪ್ರಕರಣ ದಾಖಲಿಸಿ, ಬಳಿಕ ದುಡ್ಡು ಕೇಳುವ ದಂಧೆ ನಡೆಯುತ್ತಿದೆ. ಹಾಲುಮತ ಸಮಾಜ ಎಸ್ಟಿ ಪಟ್ಟಿಗೆ ಸೇರದ ಕಾರಣ ನಮ್ಮ ಮೇಲೆ ಅಟ್ರಾಸಿಟಿ ದಾಖಲಿಸಲಾಗುತ್ತಿದೆ. ಜೊತೆಗೆ 60 ವರ್ಷ ನಮ್ಮನ್ನಾಳಿದ ಮಹಾನ್‌ ನಾಯಕರು ನಮ್ಮನ್ನು ಎಸ್ಟಿ ಪಟ್ಟಿಗೆ ಸೇರಿಸಲಿಲ್ಲ. ಈ ಸಲ ಚುನಾವಣೆಯಲ್ಲಿ ಅದಕ್ಕೆ ತಕ್ಕ ಉತ್ತರ ಕೊಡಬೇಕು. ನಾವು ರಾಯಣ್ಣನ ವಂಶಸ್ಥರು. ಬ್ರಿಟಿಷರಿಗೇ ಹೆದರಿಲ್ಲ, ಪುಂಡ ರಾಜಕಾರಣಿಗಳಿಗೆ ಹೆದರುತ್ತೇವೆಯೇ’ ಎಂದು ಗುಡುಗಿದರು.

ಮುಖಂಡ ದಿಲೀಪ್‌ ಪಾಟೀಲ ಮಾತನಾಡಿ, ‘ಕಾಂಗ್ರೆಸ್‌ ಬೆಂಬಲಿತ ಕೆಲವರು ಹವಾನಿಯಂತ್ರಿತ ಕೊಠಡಿಗಳಲ್ಲಿ ಕುಳಿತು ಇಡೀ ಸಮಾಜದ ಬೆಂಬಲವಿದೆ ಎಂದು ಹೇಳುತ್ತಿದ್ದಾರೆ. ಇಡೀ ಸಮಾಜ ಯಾರಪ್ಪನ ಆಸ್ತಿಯಲ್ಲ. ಯಾರು ನಮ್ಮ ಸಮಾಜದ ಬಗ್ಗೆ ಕಾಳಜಿ ವಹಿಸುತ್ತಾರೋ, ಯಾರು ನೆರವಿಗೆ ಬರುತ್ತಾರೋ ಅಂಥವರ ಬೆನ್ನಿಗೆ ಸಮಾಜ ಇರುತ್ತದೆ. ಸಮಾಜದ ಮತದಾರರು ಅದನ್ನು ಅರಿತುಕೊಂಡು ಮುಂಬರುವ ಚುನಾವಣೆಯಲ್ಲಿ ಮತಹಾಕಬೇಕು’ ಎಂದು ಮನವಿ ಮಾಡಿದರು.

ಸಮಾವೇಶ ಸ್ಥಳದಿಂದ ಜಗತ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು. ಕೆಲ ಹೊತ್ತು ವೃತ್ತದಲ್ಲಿ ಜಮಾಯಿಸಿ ಘೋಷಣೆ ಕೂಗಿದರು. ಎಸಿಪಿ ಭೂತೇಗೌಡ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಸತೀಶ ಪೂಜಾರಿ, ಸಮಾಧಾನ ಪೂಜಾರಿ, ರಮೇಶ ಸೇರಿದಂತೆ ಹಲವು ಮುಖಂಡರು ಮಾತನಾಡಿದರು. ಈರಣ್ಣ ಕೊಲ್ಲೂರು, ಶರಣು ಬೇಲೂರು, ಬೀರಣ್ಣ ಪೂಜಾರಿ, ಗುರುರಾಜ ಪಟ್ಟಣ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.

ಸಿ.ಎಂ.ಸಿದ್ದರಾಮಯ್ಯ ಮೇಲೆ ನಮಗೆ ಸಿಟ್ಟಿಲ್ಲ. ಅವರಿಗೆ ಇಲ್ಲಿ ಏನು ದಬ್ಬಾಳಿಕೆ ನಡೆಯುತ್ತಿದೆ ಎಂಬುದು ಗೊತ್ತಿಲ್ಲ. ಸಮಾಜದ ಬೆನ್ನಿಗೆ ನಿಲ್ಲುವವರಿಗೆ ಆಶೀರ್ವದಿಸಬೇಕು
- ಚಂದು ಪಾಟೀಲ ಬಿಜೆಪಿ ನಗರ ಘಟಕದ ಅಧ್ಯಕ್ಷ
‘ಲಾಡ ಮುಗಳಿ ಯುವಕನ ಸಾವಿಗೆ ನ್ಯಾಯ ಸಿಗಬೇಕಿದೆ. ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ಮಾಡುವೆ. ಜೊತೆಗೆ ಹಾಲುಮತವನ್ನು ಎಸ್ಟಿ ಪಟ್ಟಿಗೆ ಸೇರಿಸಲು ಪ್ರಯತ್ನಿಸುತ್ತಿದ್ದು ಅದು ಸಾಕಾರವಾಗುವ ನಿರೀಕ್ಷೆಯಿದೆ
- ಉಮೇಶ ಜಾಧವ ಸಂಸದ

‘ಲಾಡ ಮುಗಳಿ ಪ್ರಕರಣ: ಬಿಜೆಪಿ ರಾಜಕೀಯ’

ಕಲಬುರಗಿ: ‘ಲಾಡ ಮುಗಳಿ ಪ್ರಕರಣದಲ್ಲಿ ಬಿಜೆಪಿಯವರು ಶುದ್ಧ ರಾಜಕೀಯ ಮಾಡುತ್ತಿದ್ದಾರೆ. ಘಟನೆಯ ಹಿಂದಿನ ದಿನವೇ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಂಸದರು ಈ ಘಟನೆಯನ್ನು ವಿವಾದ ಮಾಡಲು ಓಡೋಡಿ ಹೋದರು’ ಎಂದು ಕುರುಬ ಸಮಾಜದ ಮುಖಂಡ ಮಹಾಂತೇಶ ಟೀಕಿಸಿದರು.

ನಗರ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಸಮುದಾಯದ ಮುಖಂಡರೊಂದಿಗೆ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಘಟನೆ ನಡೆದ ಬೆನ್ನಲ್ಲೆ ನಿಖಿಲ್ ಅವರ ಕುಟುಂಬಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ನೇತೃತ್ವದಲ್ಲಿ ಸಾಂತ್ವನ ಹೇಳಿ ಪಕ್ಷದಿಂದ ₹10 ಲಕ್ಷ ನೆರವು ಕೊಡಲಾಗಿದೆ. ಜೊತೆಗೆ ಅಟ್ರಾಸಿಟಿ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬಿಜೆಪಿ ಕೃಪಾಪೋಷಿತ ಪ್ರತಿಭಟನೆ ನಡೆಸಲಾಯಿತು. ಅದನ್ನು ಖಂಡಿಸುತ್ತೇವೆ’ ಎಂದರು.

‘ರಾಜ್ಯದಲ್ಲಿ ನಮ್ಮ ಸಮಾಜ ಈ ಬಾರಿ ಕಾಂಗ್ರೆಸ್‌ ಪಕ್ಷಕ್ಕೆ ಬೆಂಬಲ ನೀಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹೇಶ ಧರಿ ಮಾತನಾಡಿ ‘ಬಿಜೆಪಿ ಇಡೀ ರಾಜ್ಯದಲ್ಲಿ ಕುರುಬರಿಗೆ ಒಂದೂ ಟಿಕೆಟ್‌ ಕೊಟ್ಟಿಲ್ಲ. ಅಭಿವೃದ್ಧಿಯನ್ನೂ ಮಾಡಿಲ್ಲ. ಆದರೆ ಈಗ ಲಾಡ ಮುಗಳಿ ಪ್ರಕರಣದಲ್ಲಿ ರಾಜಕೀಯ ಮಾಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಬಸವರಾಜ ಹೊಸಳ್ಳಿ ಶರಣು ಕಣಗೊಂಡ ಸೇರಿ ಹಲವರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.