ADVERTISEMENT

Kuwait fire |ವಿಜಯಕುಮಾರ ಮೃತದೇಹ ಸ್ವಗ್ರಾಮಕ್ಕೆ ಇಂದು: ಕಣ್ಣೀರ ಕಡಲಲ್ಲಿ ಕುಟುಂಬ

ಕುವೈತ್‌ ಅಗ್ನಿ ಅವಘಡದಲ್ಲಿ ಮೃತಪಟ್ಟ ವಿಜಯಕುಮಾರ ಮೃತದೇಹ ಸ್ವಗ್ರಾಮಕ್ಕೆ ಇಂದು

​ಪ್ರಜಾವಾಣಿ ವಾರ್ತೆ
Published 15 ಜೂನ್ 2024, 7:11 IST
Last Updated 15 ಜೂನ್ 2024, 7:11 IST
ಕುವೈತ್‌ನಲ್ಲಿ ವಿಜಯಕುಮಾರ
ಕುವೈತ್‌ನಲ್ಲಿ ವಿಜಯಕುಮಾರ   

ಆಳಂದ: ‘ಇನ್ನು ಒಂದು ವರ್ಷ ಮಾತ್ರ ಬಾಕಿ ಇತ್ತು. 2025ರ ಜೂನ್‌ 12ಕ್ಕೆ ವಾಪಸ್‌ ಆಗುವುದಾಗಿ ಮಕ್ಕಳಿಗೆ ಪೋನ್‌ನಲ್ಲಿ ಮೊನ್ನೆ ತಾನೇ ಹೇಳಿದ್ದರು. ಆದರೆ ಮನೆಗೆ ಬರುವ ಮಾತು ಹುಸಿಯಾಯಿತು’ ಎಂದು ಕುವೈತ್‌ನಲ್ಲಿ ಅಗ್ನಿ ದುರಂತದಲ್ಲಿ ಮೃತಪಟ್ಟ ವಿಜಯಕುಮಾರ ಪ್ರಸನ್ನ ಅವರ ಪತ್ನಿ ಶಶಿಕಲಾ ರೋದಿಸುತ್ತಾ ಪ್ರಜ್ಞೆ ತಪ್ಪಿದರು.

ಆಳಂದ ತಾಲ್ಲೂಕಿನ ಸರಸಂಬಾ ಗ್ರಾಮದ ವಿಜಯಕುಮಾರ ಖೈಬಣ್ಣಾ ಪ್ರಸನ್ನ (43) ಜೂನ್‌ 12ರಂದು ಕುವೈತ್‌ನ ಬಹುಮಹಡಿ ಕಟ್ಟಡವೊಂದರಲ್ಲಿ ನಡೆದ ಅಗ್ನಿ ದುರಂತದಲ್ಲಿ ಮೃತಪಟ್ಟಿದ್ದಾರೆ. ಕುವೈತ್‌ನಲ್ಲಿ ವಾಹನ ಚಾಲಕನಾಗಿ ವಿಜಯಕುಮಾರ ಕೆಲಸ ಮಾಡಲು ಮೂರು ವರ್ಷದ ಹಿಂದೆ ಹೋಗಿದ್ದರು. ಇಲ್ಲಿ ತಂದೆ-ತಾಯಿ, ಪತ್ನಿ ಹಾಗೂ ಮೂವರು ಮಕ್ಕಳು ಹಾಗೂ ಸಹೋದರರು ಇದ್ದಾರೆ.

ಜಿಲ್ಲಾಧಿಕಾರಿಗಳ ಮೂಲಕ ತಾಲ್ಲೂಕು ಆಡಳಿತಕ್ಕೆ ಬೆಂಕಿ ಅನಾಹುತದಲ್ಲಿ ವಿಜಯಕುಮಾರ ಸಾವನ್ನಪ್ಪಿರುವ ಮಾಹಿತಿ ಶುಕ್ರವಾರ ತಲುಪಿತು. ಮನೆಯಲ್ಲಿ ಹಿರಿಯ ಅಣ್ಣನಿಗೆ ಮಾತ್ರ ಸುದ್ದಿ ತಿಳಿಸಲಾಯಿತು. ಸುದ್ದಿಯು ಪ್ರಸಾರವಾದರೂ ಕುಟುಂಬಸ್ಥರಿಗೆ ಮಾಹಿತಿ ನೀಡುವ ಧೈರ್ಯ ಹಿರಿಯರಿಗೆ ಆಗಲಿಲ್ಲ. ಸುದ್ದಿ ತಿಳಿದು ಬಂಧುಮಿತ್ರರು, ಮಾದನ ಹಿಪ್ಪರಗಿ ಪಿಎಸ್‌ಐ, ಕಂದಾಯ ನಿರೀಕ್ಷಕರು ಮನೆಗೆ ಬಂದಾಗ ಸುದ್ದಿ ಮುಚ್ಚಿಡಲು ಸಾಧ್ಯವಾಗಲಿಲ್ಲ. ಸುದ್ದಿ ತಿಳಿಯುತ್ತಲೆ ಮಗನನ್ನು ಕಳೆದುಕೊಂಡ ತಂದೆ– ತಾಯಿ, ಪತ್ನಿ, ಮೂವರು ಮಕ್ಕಳು ಸೇರಿದಂತೆ ಬಂಧುಬಳಗದ ಆಕ್ರಂದನ ಮುಗಿಲು ಮುಟ್ಟಿತ್ತು.

ADVERTISEMENT

ಕುಟುಂಬಕ್ಕೆ ಆಸರೆ: ವಿಜಯಕುಮಾರ ಪ್ರಸನ್ನ ವಾಹನ ಚಾಲಕರಾಗಿ ಕುವೈತ್‌ಗೆ 2015ರಲ್ಲಿ ಮೊದಲ ಬಾರಿಗೆ ತೆರಳಿದ್ದರು. ಕೋವಿಡ್‌ ಸಮಯದಲ್ಲಿ ಸ್ವಗ್ರಾಮಕ್ಕೆ ವಾಪಸ್‌ ಆಗಿದ್ದರು. ಮತ್ತೆ 2022ರಲ್ಲಿ ಕುವೈತ್‌ಗೆ ಹೋಗಿದ್ದರು. ಅಲ್ಲಿ ₹ 35 ಸಾವಿರ ಸಂಬಳದಲ್ಲಿ ವಾಹನ ಚಾಲಕರಾಗಿ ದುಡಿಯುತ್ತಿದ್ದರು. 2025ರ ಜೂನ್‌ 11ಕ್ಕೆ ಅವರ ಗುತ್ತಿಗೆ ಅವಧಿ ಮುಗಿಯುತ್ತಿತ್ತು. ಆದರೆ ಕಾಕತಾಳೀಯವೆಂಬತೆ ಜೂನ್‌ 12ರಂದು ಕುವೈತ್‌ನಲ್ಲಿನ ಕಟ್ಟಡದಲ್ಲಿ ಬೆಂಕಿ ಅನಾಹುತ ನಡೆಯುವ ಸಂದರ್ಭದಲ್ಲಿ ಅವರು ನಿದ್ರೆಗೆ ಜಾರಿದ್ದರು. ಅದೇ ಕಟ್ಟಡದಲ್ಲಿ ನೆಲೆಸಿದ್ದ ತಾಲ್ಲೂಕಿನ ಜಿಡಗಾ ಗ್ರಾಮದ ಇಬ್ಬರು ಬೆಂಕಿಯ ಸುದ್ದಿ ತಿಳಿದು ಮಹಡಿಯಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬಡಕುಟುಂಬಕ್ಕೆ ಸರಸಂಬಾ ಗ್ರಾಮದಲ್ಲಿ ಕೇವಲ 2 ಎಕರೆ ಜಮೀನು ಇದೆ. ತಂದೆ, ತಾಯಿ ಹಾಗೂ ಪತ್ನಿ ಮತ್ತು ಪುತ್ರಿ ಮತ್ತು ಇಬ್ಬರು ಪುತ್ರರು ಇದ್ದಾರೆ. ತಂದೆಗೆ ಈಗ ವಯಸ್ಸಾಗಿದೆ. ಹೀಗಾಗಿ ಕುಟುಂಬದ ಏಕೈಕ ಆಸರೆ ವಿಜಯಕುಮಾರ ದುಡಿಮೆ. ಮೂವರು ಮಕ್ಕಳು ಸ್ವಗ್ರಾಮದ ಖಾಸಗಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಸಂಪೂರ್ಣ ಕುಟುಂಬವು ವಿಜಯಕುಮಾರ ದುಡಿಮೆಯನ್ನೇ ಅವಲಂಬಿಸಿತ್ತು. ಮಗನ ಸಾವು ನೆನೆದು ತಂದೆ– ತಾಯಿ ತಮ್ಮ ದುಃಖ ತಡೆದು ಎಳೆಯ ಮೊಮ್ಮಕ್ಕಳನ್ನು ತಬ್ಬಿಕೊಂಡು ಕಣ್ಣೀರು ಸುರಿಸುವ ದೃಶ್ಯ ಮನ ಕಲುಕುತ್ತಿದೆ.

ವಿಜಯಕುಮಾರ ಕುಟುಂಬ ಚಿತ್ರ

ನಸುಕಿನ ಜಾವ ಶವ ಆಗಮನ: ಕುವೈತ್‌ನಲ್ಲಿ ಮೃತಪಟ್ಟ ಭಾರತೀಯರ ಮೃತದೇಹಗಳು ವಿಶೇಷ ವಿಮಾನದ ಮೂಲಕ ಕೇರಳದ ಕೊಚ್ಚಿ ತಲುಪಿವೆ. ಅಲ್ಲಿಂದ ವಿಮಾನದ ಮೂಲಕ ಹೈದರಾಬಾದ್‌ಗೆ ತರಲಾಗುತ್ತಿದ್ದು, ಅಂಬುಲೆನ್ಸ್‌ನಲ್ಲಿ ಸರಸಂಬಾ ಗ್ರಾಮಕ್ಕೆ ತಂದು ಶನಿವಾರ ಬೆಳಗ್ಗೆ ಸ್ವಗ್ರಾಮದಲ್ಲಿ ಅಂತ್ಯಸಂಸ್ಕಾರ ಕೈಗೊಳ್ಳಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.