ಕಲಬುರಗಿ: ಹೆರಿಗೆ ನೋವಿನಿಂದ ಬಳಲುತ್ತಿದ್ದ ಚಿಂಚೋಳಿ ತಾಲ್ಲೂಕಿನ ಸುಲೇಪೇಟದ ಶಿಲ್ಪಾ ಎಂಬುವವರನ್ನು ಜಿಲ್ಲಾಸ್ಪತ್ರೆಗೆ ಕರೆತರುವಾಗ ಮೂರು ಬಾರಿ ಆಂಬುಲೆನ್ಸ್ ಬದಲಿಸಲಾಗಿತ್ತು. ಈ ವೇಳೆ ದಾರಿ ಮಧ್ಯದಲ್ಲೇ ಹೆರಿಗೆಯಾಗಿ ಮಗು ಸಾವನ್ನಪ್ಪಿತ್ತು. ಮೂರು ಬಾರಿ ಆಂಬುಲೆನ್ಸ್ ಬದಲಿಸಿದ್ದರಿಂದ ತಮ್ಮ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪೋಷಕರು ಕಣ್ಣೀರಿಟ್ಟಿದ್ದರು.
ಹೋದ ವರ್ಷ ಯಡ್ರಾಮಿ ಹೊರವಲಯದಲ್ಲಿ ಟಾಟಾ ಸುಮೊ ಪಲ್ಟಿಯಾದಾಗ ಗಾಯಾಳುಗಳನ್ನು ಒಂದೇ ಆಂಬುಲೆನ್ಸ್‌ನಲ್ಲಿ ಕುರಿಗಳ ತರಹ ಹಾಕಿಕೊಂಡು ಯಡ್ರಾಮಿ ಸರ್ಕಾರಿ ಆಸ್ಪತ್ರೆಗೆ ತಂದಿದ್ದರು. ಕೆಲವರು ಖಾಸಗಿ ವಾಹನಗಳ ಮೂಲಕ ಆಸ್ಪತ್ರೆಗೆ ಬಂದು ತಲುಪಿದರು. ಅದರಲ್ಲಿ ಗಂಭೀರ ಗಾಯಾಳುಗಳು ಖಾಸಗಿ ವಾಹನಕ್ಕೆ ದುಬಾರಿ ಹಣ ಕೊಟ್ಟು ಹೋದರು. ಈಗಲೂ ಇದೇ ಪರಿಸ್ಥಿತಿ ಇದೆ.
ಆಂಬುಲೆನ್ಸ್‌ಗಳ ಕೊರತೆ, ಸಕಾಲಕ್ಕೆ ಸಿಗದ ಸೇವೆ, ಅಧ್ವಾನ ರಸ್ತೆಗಳು, ಆಂಬುಲೆನ್ಸ್‌ನಲ್ಲಿ ಸೂಕ್ತ ವೈದ್ಯಕೀಯ ಸೌಲಭ್ಯದ ಕೊರತೆ, ಸಿಬ್ಬಂದಿ ಇಲ್ಲದಿರುವಿಕೆ ಮತ್ತಿತರ ಕಾರಣಗಳಿಂದಾಗಿ ಹಲವು ಕುಟುಂಬಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡು ಪರಿತಪಿಸುವುದು ಜಿಲ್ಲೆಯಲ್ಲಿ ಸಾಮಾನ್ಯ ಎಂಬಂತಾಗಿದೆ.
ಜಿಲ್ಲೆಯಲ್ಲಿರುವ ಒಟ್ಟು 16 ಸಮುದಾಯ ಆರೋಗ್ಯ ಕೇಂದ್ರಗಳು, 84 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಗತ್ಯಕ್ಕೆ ತಕ್ಕಷ್ಟು ಆಂಬುಲೆನ್ಸ್ ಸೇವೆ ಇಲ್ಲ.
ಸುಗಮ ಸಂಚಾರಕ್ಕೆ ಅನುಕೂಲವಿಲ್ಲದ ರಸ್ತೆಗಳು, ರೋಗಿಯನ್ನು ಕರೆದೊಯ್ಯುವಾಗ ಪ್ರತಿ 25 ಕಿಲೋ ಮೀಟರ್‌ಗೊಮ್ಮೆ ಆಂಬುಲೆನ್ಸ್ ಬದಲಿಸಬೇಕೆನ್ನುವ ನಿಯಮ, ಸಾಕಷ್ಟು ವರ್ಷ ನಿರ್ವಹಣೆ ಇಲ್ಲದ ಆಂಬುಲೆನ್ಸ್‌ಗಳು ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗಿವೆ. ಕನಿಷ್ಠ 15 ವರ್ಷಗಳಿಗೊಮ್ಮೆ ಆಂಬುಲೆನ್ಸ್ ಬದಲಿಸಬೇಕು ಎಂಬ ನಿಯಮ ಕೆಲವು ಕಡೆ ಪಾಲನೆಯಾಗಿಲ್ಲ.
ಹೀಗಾಗಿ ತುರ್ತು ಚಿಕಿತ್ಸೆ ಸಂದರ್ಭದಲ್ಲಿ ಒದಗಿಸುವ ಆಂಬುಲೆನ್ಸ್ ಸೇವೆಯ ‘ವೇಗ’ ಮಾತ್ರ ಆಮೆಗತಿಯಲ್ಲಿ ಇದೆ.
‘ಆಂಬುಲೆನ್ಸ್‌ಗಳಲ್ಲಿ ವೈದ್ಯಕೀಯ ಸೌಲಭ್ಯದ ಕೊರತೆ ಇರುತ್ತದೆ. ಸರಿಯಾದ ಸ್ಟ್ರೇಚರ್‌ಗಳು ಇರುವುದಿಲ್ಲ. ರೋಗಿಗಳ ಸಂಖ್ಯೆ ಜಾಸ್ತಿ ಇರುತ್ತದೆ. ಬಹಳಷ್ಟು ಹಳೆಯದಾದ ಆಂಬುಲೆನ್ಸ್‌ಗಳಿಂದಲೂ ಸಮಸ್ಯೆಯಾಗುತ್ತಿದೆ’ ಎಂದು ಗಾಣಗಾಪುರದ ಶಂಕರ ಹೂಗಾರ, ಮಳಖೇಡದ ಮಲ್ಲಣ್ಣ ದಂಡಬಾ ಮತ್ತು ಶಹಾಬಾದ್‌ನ ನೀಲಕಂಠ ಎಂ. ಹುಲಿ ದೂರುತ್ತಾರೆ.
‘ನಮಗೆ ಅನುದಾನದ ಕೊರತೆ ಇಲ್ಲ. ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ‘108’ ಆರೋಗ್ಯ ಸೇವೆ ಇದೆ. ವೈದ್ಯಕೀಯ ಸೌಲಭ್ಯ ನಮಗೆ ಸಂಬಂಧಿಸಿದ ವಿಷಯವಲ್ಲ. ಒಂದು ಗಾಡಿಗೆ ಇಬ್ಬರು ಸಿಬ್ಬಂದಿ ಕಾಯಂ ಆಗಿ ಇರುತ್ತಾರೆ’ ಎಂದು ‘108’ ಆರೋಗ್ಯ ಸೇವೆಯ ಜಿಲ್ಲಾ ಸಂಯೋಜಕ ಮಲ್ಲಿಕಾರ್ಜುನ ತಿಳಿಸಿದರು.
ಶಹಾಬಾದ್‌ಗೆ ಬೇಕು ಇನ್ನೊಂದು ಆಂಬುಲೆನ್ಸ್
ಸಮುದಾಯ ಆರೋಗ್ಯ ಕೇಂದ್ರವು ಒಂದು ನಗು ಮಗು ಮತ್ತು ಒಂದು 108 ಆಂಬುಲೆನ್ಸ್ ಹೊಂದಿದೆ. ಇನ್ನೊಂದು 108 ಆಂಬುಲೆನ್ಸ್ ಕೋವಿಡ್ ಸಂದರ್ಭದಲ್ಲಿ ಡಿಎಚ್ಒ ಕಚೇರಿಗೆ ಬಳಸಲಾಗಿತ್ತು. ಆ ಆಂಬುಲೆನ್ಸ್ ಇಲ್ಲಿಯವರೆಗೂ ಮತ್ತೆ ವಾಪಸು ಶಹಾಬಾದ್ ಆರೋಗ್ಯ ಕೇಂದ್ರಕ್ಕೆ ರವಾನೆ ಆಗಿಲ್ಲ. ತಾಲ್ಲೂಕಿನಲ್ಲಿ ಕೇವಲ ಎರಡು ಆಂಬುಲೆನ್ಸ್ ಮಾತ್ರ ಸೇವೆ ಸಲ್ಲಿಸುತ್ತಿವೆ. ವಾಹನದಲ್ಲಿ ತುರ್ತು ಚಿಕಿತ್ಸೆಗಾಗಿ ಇರಬೇಕಾದ ಎಲ್ಲಾ ಸೌಲಭ್ಯಗಳು ಇವೆ. ಇನ್ನೊಂದು ಆಂಬುಲೆನ್ಸ್ ಅಗತ್ಯ ಇದೆ. ತುರ್ತುಸೇವೆ ಸಲ್ಲಿಸುವ ಆಂಬುಲೆನ್ಸ್‌ಗಳ ನಿರ್ವಹಣೆ ಮತ್ತು ಇತರೆ ರಿಪೇರಿ ಕೆಲಸಗಳಿಗಾಗಿ ತಿಂಗಳುಗಟ್ಟಲೇ ಕಾಯಬೇಕಾಗಿರುವುದೇ ದೊಡ್ಡ ಸಮಸ್ಯೆಯಾಗಿದೆ.
‘ಐದಾರು ತಿಂಗಳಿಂದ ಸಂಬಳ ನೀಡಿಲ್ಲ. ಹೀಗಾಗಿ ತುಂಬಾ ಶೋಚನೀಯ ಸ್ಥಿತಿ ಇದೆ’ ಎಂದು ಆಂಬುಲೆನ್ಸ್ ಚಾಲಕ ಶಾಂತಪ್ಪ ಮರಗೋಳ ಕಷ್ಟ ತೋಡಿಕೊಂಡರು.
ಯಡ್ರಾಮಿ; ಸಕಾಲಕ್ಕೆ ಸಿಗದ ಸೇವೆ
ಯಡ್ರಾಮಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಒಂದೇ ಒಂದು ಆಂಬುಲೆನ್ಸ್ ಇದೆ. ತುರ್ತು ಪರಿಸ್ಥಿತಿ, ಅಪಘಾತ ನಡೆದರೆ ಆಂಬುಲೆನ್ಸ್ ಬರುವ ಹೊತ್ತಿಗೆ ವ್ಯಕ್ತಿ ಮೃತಪಟ್ಟಿರುತ್ತಾನೆ. ಈ ಕುರಿತು ಅನೇಕ ಬಾರಿ ಶಾಸಕರ ಗಮನಕ್ಕೆ ಮತ್ತು ಆರೋಗ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ನಿವಾಸಿಗಳು ದೂರುತ್ತಾರೆ.
‘ಅಫಜಲಪುರಕ್ಕೆ ಹೆಚ್ಚಿನ ಆಂಬುಲೆನ್ಸ್ ಅಗತ್ಯ’
ಅಫಜಲಪುರ ತಾಲ್ಲೂಕಿನಲ್ಲಿ ಆಸ್ಪತ್ರೆ ಮತ್ತು ಜನಸಂಖ್ಯೆಗೆ ಹೋಲಿಸಿದಾಗ ಆಂಬುಲೆನ್ಸ್ ಕೊರತೆ ಕಂಡು ಬರುತ್ತದೆ. ಅದರಲ್ಲಿ ಮಣ್ಣೂರಿನಲ್ಲಿ ಅಂಬುಲೆನ್ಸ್ ಇದೆ, ಚಾಲಕರಿಲ್ಲ, ಹೀಗಾಗಿ ಆ ಭಾಗದಲ್ಲಿ ತೊಂದರೆಯಾಗುತ್ತಿದೆ.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ವಿನೋದ್ ರಾಠೋಡ್ ಮಾಹಿತಿ ನೀಡಿ, ‘ಹಿಂದೆ ಆಸ್ಪತ್ರೆಯಲ್ಲಿ ಆಂಬುಲೆನ್ಸ್ ವಾಹನಗಳ ಸಮಸ್ಯೆ ಇತ್ತು. ಈಗ ಸರ್ಕಾರ ಸಾಕಷ್ಟು ಅನುಕೂಲ ಮಾಡಿಕೊಟ್ಟಿದೆ’ ಎಂದು ತಿಳಿಸಿದರು.
ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ ‘ದೇಸಾಯಿ ಕಲ್ಲೂರು, ರೇವೂರು (ಬಿ) ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಆಂಬುಲೆನ್ಸ್ ವ್ಯವಸ್ಥೆ ಇಲ್ಲ. ಸ್ವಲ್ಪ ತೊಂದರೆಯಾಗುತ್ತಿದೆ’ ಎಂದರು.
ಚಿಂಚೋಳಿ: ಚಾಲಕರ ಕೊರತೆ
ಚಿಂಚೋಳಿ: ಚಿಮ್ಮನಚೋಡ, ರುದ್ನೂರು, ನಿಡಗುಂದಾ, ಐನಾಪುರ, ಸಾಲೇಬೀರನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳು ತುರ್ತು ಸೇವೆಗಾಗಿ ಪಕ್ಕದ ಪಿಎಚ್‌ಸಿ ಅಥವಾ 108 ಅಂಬುಲೆನ್ಸ್ ಅವಲಂಬಿಸುವಂತಾಗಿದೆ.
ಆಂಬುಲೆನ್ಸ್ ಚಾಲಕರು ಹಗಲು ರಾತ್ರಿ ಒಬ್ಬರೇ ವಾಹನ ಚಲಾಯಿಸುವುದು ಅನಿವಾರ್ಯ. ಬಹುತೇಕ ಕಡೆ ಹೊರ ಗುತ್ತಿಗೆ ಚಾಲಕರೇ ಇದ್ದಾರೆ. ಹಗಲು ಹೊತ್ತಿನಲ್ಲಿ ತುರ್ತು ಸೇವೆ ಹಿನ್ನೆಲೆಯಲ್ಲಿ ಕಲಬುರಗಿ, ಬೀದರ್ ರೋಗಿಯನ್ನು ಕರೆದೊಯ್ದ ಚಾಲಕರೇ ರಾತ್ರಿಯೂ ಸೇವೆ ಸಲ್ಲಿಸಬೇಕಾಗಿ ಬಂದಿದೆ.
ಸಮಸ್ಯೆಗಳ ಕುರಿತು ಪ್ರತಿಕ್ರಿಯೆಗಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಕರೆ ಮಾಡಿದರೂ ಸ್ವೀಕರಿಸಲಿಲ್ಲ.
ಅಂಕಿ ಅಂಶ
26 108 ‘ಆರೋಗ್ಯ ಕವಚ’ದಡಿ ಜಿಲ್ಲೆಯಲ್ಲಿ ನಿಯೋಜನೆ ಮಾಡಿರುವ ಒಟ್ಟು ಆಂಬುಲೆನ್ಸ್
45 ಜಿಲ್ಲೆಯಲ್ಲಿ ವಿವಿಧ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯೋಜನೆಯಾಗಿರುವ ಆಂಬುಲೆನ್ಸ್ (108 ಹೊರತುಪಡಿಸಿ)
5 ಪ್ರತಿ ತಾಲ್ಲೂಕಿನಲ್ಲಿ ಇರುವ ಸರ್ಕಾರಿ ಆಂಬುಲೆನ್ಸ್ (108 ಹೊರತುಪಡಿಸಿ)
ತತ್‌ಕ್ಷಣದ ಚಿಕಿತ್ಸೆಗೆ ಆಂಬುಲೆನ್ಸ್ ಕೈಗೆ ಸಿಗುವಂತಾಗಬೇಕು. ಸಂಚಾರಕ್ಕೆ ಯೋಗ್ಯವಾದ ರಸ್ತೆಗಳನ್ನು ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕುಎಸ್.ಬಿ. ಮಹೇಶ್ ಜಿಲ್ಲಾ ಕಾರ್ಯದರ್ಶಿ ಎಐಕೆಕೆಎಂಎಸ್
ಜಿಲ್ಲೆಗೆ 15 ಆಂಬುಲೆನ್ಸ್ ಅವಶ್ಯಕತೆ ಇದೆ ಎಂದು ಕೆಕೆಆರ್‌ಡಿಬಿಗೆ ಬೇಡಿಕೆ ಇಟ್ಟಿದ್ದೇವೆ. ಆಂಬುಲೆನ್ಸ್ ದೊರಕಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆಜಗನ್ನಾಥ ಡಿಎಚ್ಒ ಕಚೇರಿಯ ಸರ್ವಿಸ್ ಎಂಜಿನಿಯರ್
ಮಾದನ ಹಿಪ್ಪರಗಿ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೆ ಇದ್ದಾಗ ಅವರ ಶಿಫಾರಸು ಇಲ್ಲದೆ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆ ದೊರೆಯುದಿಲ್ಲಪರಮೇಶ್ವರ ಭೂಸನೂರು ಮಾದನ ಹಿಪ್ಪರಗಿ
ಜಿಲ್ಲಾ ಕೇಂದ್ರದಿಂದ ಅಫಜಲಪುರದ ಹೊಸೂರು ಗ್ರಾಮ 100 ಕಿಲೋ ಮೀಟರ್ ದೂರವಾಗುತ್ತಿರುವುದರಿಂದ ಆ ಭಾಗದಲ್ಲಿ ಹೆಚ್ಚಿನ ಆಂಬುಲೆನ್ಸ್‌ಗಳ ವ್ಯವಸ್ಥೆ ಮಾಡಬೇಕುಶ್ರೀಕಾಂತ್ ಚಿಂಚೋಳಿ ಅಫಜಲಪುರ ತಾಲ್ಲೂಕು ಮಾದಿಗ ಸಮಾಜದ ಅಧ್ಯಕ್ಷ
ಸರ್ಕಾರದ ಅಂಬುಲೆನ್ಸ್ ಸೇವೆಗೆ ಅತಿ ತುರ್ತು ಹೊರತುಪಡಿಸಿ ರೋಗಿಯ ಕಡೆಯವರೇ ಡೀಸೆಲ್ ಹಾಕಿಕೊಂಡು ಹೋಗಬೇಕು. ರೋಗಿಗಳು ಇದಕ್ಕೆ ಒಪ್ಪದೇ ಜಗಳ ಮಾಡುತ್ತಾರೆಡಾ. ಮಹಮದ್ ಗಫಾರ್ ಟಿಎಚ್‌ಒ ಚಿಂಚೋಳಿ
ತಾಂಡಾ ಗಡಿಭಾಗಗಳಿಗೆ ಸೇವೆ ಮರೀಚಿಕೆ
ಆಳಂದ ತಾಲ್ಲೂಕಿನ ಆಳಂದ ಖಜೂರಿ ಮಾದನ ಹಿಪ್ಪರಗಿ ನರೋಣಾ ನಿಂಬರ್ಗಾ ಸಮುದಾಯ ಆರೋಗ್ಯ ಕೇಂದ್ರ ಒಳಗೊಂಡಂತೆ 17 ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ಆದರೆ ನಾಲ್ಕು ಮಾತ್ರ ಆಂಬುಲೆನ್ಸ್ ಹಾಗೂ ಮೂರು ಸಣ್ಣ ಒಮಿನಿ ವಾಹನಗಳನ್ನು ಆಂಬುಲೆನ್ಸ್ ಸೇವೆಗೆ ಬಳಸಿಕೊಳ್ಳಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನರು ತುರ್ತು ಸಂದರ್ಭದಲ್ಲಿ 108 ಸಂಪರ್ಕಿಸಿದರೂ ಹಲವು ಕಾರಣದಿಂದ ಉತ್ತಮ ಸೇವೆ ಒದಗಿಸಲು ಹೆಚ್ಚಿನ ತೊಂದರೆಗಳು ಕಾಡುತ್ತಲಿವೆ. ಹೆರಿಗೆ ಹಾವು ಕಡಿತ ವಿಷಸೇವನೆ ಮತ್ತಿತರ ಅಪಘಾತಗಳ ತುರ್ತು ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಿಗೆ ಮತ್ತು ವಿಶೇಷವಾಗಿ ಗಡಿಭಾಗದ ಗ್ರಾಮ ಹಾಗೂ ತಾಂಡಾ ನಿವಾಸಿಗಳಿಗೆ ಆಂಬುಲೆನ್ಸ್ ಸೇವೆ ಮರೀಚಿಕೆ ಆಗುತ್ತಿದೆ. ರಾತ್ರಿ ಅಂಬುಲೆನ್ಸ್ ಸೇವೆ ಸಮಯೋಚಿತವಾಗಿ ದೊರೆಯದಿದ್ದರೆ ಆಶಾ ಕಾರ್ಯಕರ್ತೆಯರೂ ಹಲವು ಬಾರಿ ಗ್ರಾಮೀಣ ಭಾಗದ ಜನರ ಆಕ್ರೋಶ ಎದುರಿಸುವ ಪ್ರಕರಣಗಳು ಹೆಚ್ಚುತ್ತಿವೆ. ಪ್ರತಿಯೊಂದು ಆರೋಗ್ಯ ಕೇಂದ್ರಕ್ಕೂ ಆಂಬುಲೆನ್ಸ್ ಸೇವೆ ಒದಗಿಸಬೇಕು ಎಂದು ಖಜೂರಿಯ ಸಾಮಾಜಿಕ ಕಾರ್ಯಕರ್ತ ಗಂಗಾಧರ ಕುಂಬಾರ ಒತ್ತಾಯಿಸುತ್ತಾರೆ.
‘ಜೇವರ್ಗಿಯಲ್ಲಿ ಕೊರತೆ ಇಲ್ಲ’
ಜೇವರ್ಗಿ ತಾಲ್ಲೂಕಿನಲ್ಲಿ 12 ಪ್ರಾಥಮಿಕ ಆರೋಗ್ಯ ಕೇಂದ್ರ 2 ಸಮುದಾಯ ಆರೋಗ್ಯ ಕೇಂದ್ರಗಳಿವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ 2 ಆಂಬುಲೆನ್ಸ್‌ಗಳಿವೆ. ತಾಲ್ಲೂಕಿನಲ್ಲಿ 108 ಆಂಬುಲೆನ್ಸ್ 3 ಇವೆ. ಒಟ್ಟು 5 ಆಂಬುಲೆನ್ಸ್‌ಗಳಿವೆ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಸಿದ್ದು ಪಾಟೀಲ ತಿಳಿಸಿದ್ದಾರೆ. ಆಂಬುಲೆನ್ಸ್ ಅಗತ್ಯ ವೈದ್ಯಕೀಯ ಸೌಲಭ್ಯ ಹಾಗೂ ಸಿಬ್ಬಂದಿ ಕೊರತೆ ಇರುವುದಿಲ್ಲ ಎಂದರು.
ತುರ್ತು ಸಂದರ್ಭ: ಸಮಸ್ಯೆ ಸಾಮಾನ್ಯ
ಚಿತ್ತಾಪುರ ತಾಲ್ಲೂಕಿಗೆ ಸಂಬಂಧಿಸಿದಂತೆ ಚಿತ್ತಾಪುರ ಆಸ್ಪತ್ರೆ ವಾಡಿ ಆಸ್ಪತ್ರೆ ಹಾಗೂ ನಾಲವಾರ ಆಸ್ಪತ್ರೆಯಲ್ಲಿ 108 ತುರ್ತು ಸೇವೆಯ ಆಂಬುಲೆನ್ಸ್ ಸೌಲಭ್ಯವಿದೆ. ಕೆಲವೊಮ್ಮೆ ಏಕಕಾಲದಲ್ಲಿ ಅಪಘಾತ ಜನರಿಗೆ ತೀವ್ರ ಅನಾರೋಗ್ಯ ಸಮಸ್ಯೆ ಗರ್ಭಿಣಿಯರ ಹೆರಿಗೆ ಸಮಸ್ಯೆ ರೈತರ ದೇಹಕ್ಕೆ ಕ್ರಿಮಿನಾಶಕ ಹರಡಿದಾಗ ಆಂಬುಲೆನ್ಸ್ ಸಕಾಲಕ್ಕೆ ಸಿಗಲಾರದೆ ಜನರು ಖಾಸಗಿ ವಾಹನಗಳ ಮೊರೆ ಹೋಗುವುದು ಸಾಮಾನ್ಯವಾಗಿದೆ. ಚಿತ್ತಾಪುರ ಪಟ್ಟಣದಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ನಗು-ಮಗು ಆಂಬುಲೆನ್ಸ್ ಒಂದು ತಿಂಗಳಿನಿಂದ ಕೆಟ್ಟು ನಿಂತು ದುರಸ್ತಿ ಕಾಣದೆ ಆಸ್ಪತ್ರೆಯ ಆವರಣದಲ್ಲಿಯೇ ನಿಂತಿದೆ. ಚಿತ್ತಾಪುರದಲ್ಲಿನ ಆಂಬುಲೆನ್ಸ್ ಬೇರೊಂದು ಕಡೆಗೆ ಹೋದ ಸಮಯದಲ್ಲಿ ತಾಲ್ಲೂಕಿನ ಭೀಮನಹಳ್ಳಿ ರಾಜೋಳಾ ಅಲ್ಲೂರ(ಬಿ) ಅಲ್ಲುರ(ಕೆ) ದಂಡಗುಂಡ ಸೇರಿದಂತೆ ದೂರದ ಗ್ರಾಮಗಳಿಂದ ತುರ್ತು ಸೇವೆಗೆ ಆಂಬುಲೆನ್ಸ್ ಸೇವೆಗೆ ಕರೆ ಮಾಡಿದಾಗ ವಾಡಿ ಆಸ್ಪತ್ರೆ ಅಥವಾ ನಾಲವಾರ ಶಹಾಬಾದ್ ಆಸ್ಪತ್ರೆಗಳಿಂದ ಆಂಬುಲೆನ್ಸ್ ತರಿಸುವ ಪರಿಸ್ಥಿತಿ ಎದುರಾಗುತ್ತದೆ.
(ಪೂರಕ ಮಾಹಿತಿ: ವೆಂಕಟೇಶ ಹರವಾಳ, ಶಿವಾನಂದ ಹಸರಗುಂಡಗಿ, ಜಗನ್ನಾಥ ಶೇರಿಕಾರ, ಮಲ್ಲಿಕಾರ್ಜುನ ಎಂ.ಎಚ್, ಸಂಜಯ ಪಾಟೀಲ, ಮಂಜುನಾಥ ದೊಡಮನಿ, ನಿಂಗಣ್ಣ ಜಂಬಗಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.