ಕಲಬುರಗಿ: ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ನಗರ ಹಾಗೂ ಗ್ರಾಮಾಂತರ ಪ್ರದೇಶದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಪ್ರವೇಶ ಪಡೆದಿರುವ ಒಟ್ಟು ವಿದ್ಯಾರ್ಥಿಗಳ ಪೈಕಿ ಸುಮಾರು ಅರ್ಧಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ನೆಲದ ಮೇಲೆಯೇ ಮಲಗಬೇಕಿದೆ!
ಇಲಾಖೆಯಲ್ಲಿ ಅನುದಾನದ ಕೊರತೆಯಿಂದಾಗಿ ಜಿಲ್ಲೆಯ ವಸತಿನಿಲಯಗಳಲ್ಲಿ ಪ್ರವೇಶ ಪಡೆದಿರುವ 14,430 ವಿದ್ಯಾರ್ಥಿಗಳ ಪೈಕಿ 5,258 ವಿದ್ಯಾರ್ಥಿಗಳಿಗೆ ಮಾತ್ರ ಬೆಡ್‌ಗಳಿದ್ದು, 4,245 ಟೂ ಟಯರ್ ಕಾಟ್‌ಗಳಿವೆ. 2970 ಟೂ ಟಯರ್ ಕಾಟ್‌ಗಳು ಅಗತ್ಯವಿದೆ. ಕಲಬುರಗಿ ನಗರದಲ್ಲಿಯೇ ಹೆಚ್ಚು ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿಗೆ ಪ್ರವೇಶ ಪಡೆಯುವುದರಿಂದ ಇಲ್ಲಿಯೇ ಹೆಚ್ಚಿನ ಬೆಡ್ ಮತ್ತು ಕಾಟ್‌ಗಳ ಕೊರತೆ ಎದುರಾಗಿದೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಮಾಜ ಕಲ್ಯಾಣ ಇಲಾಖೆ ತನ್ನ ವಸತಿನಿಲಯಗಳಿಗೆ ಅಗತ್ಯವಿರುವ ಕಾಟ್‌ಗಳನ್ನು ಒದಗಿಸುವಂತೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ)ಗೆ ಪ್ರಸ್ತಾವ ಸಲ್ಲಿಸಿದೆ.
ಒಂದು ಕಾಟ್‌ಗೆ ₹ 30 ಸಾವಿರ ಹಾಗೂ ಒಂದು ಬೆಡ್‌ಗೆ ₹ 6 ಸಾವಿರ ದರವಿದ್ದು, ಇವುಗಳ ಸಗಟು ಖರೀದಿಗೆ ಅಗತ್ಯವಿರುವ ಅನುದಾನ ಒದಗಿಸುವಂತೆ ಪ್ರಸ್ತಾವದಲ್ಲಿ ಮನವಿ ಮಾಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಜಿಲ್ಲೆಯಲ್ಲಿ 118 ಹಾಸ್ಟೆಲ್‌ಗಳಿದ್ದು, ಅದರಲ್ಲಿ ಮೆಟ್ರಿಕ್ ನಂತರದ 45 ಹಾಸ್ಟೆಲ್‌ಗಳಿವೆ. ಕಲಬುರಗಿ ನಗರದಲ್ಲಿಯೇ 23 ಹಾಸ್ಟೆಲ್‌ಗಳಿದ್ದು, ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇದೇ ಹಾಸ್ಟೆಲ್‌ಗಳಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸುತ್ತಾರೆ. ಅಲ್ಲದೇ, ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಲೇಬೇಕು ಎಂದು ಸರ್ಕಾರ ಸಮಾಜ ಕಲ್ಯಾಣ ಇಲಾಖೆಗೆ ಆದೇಶ ನೀಡಿರುವುದರಿಂದ 100 ವಿದ್ಯಾರ್ಥಿಗಳ ಸಾಮರ್ಥ್ಯದ ಹಾಸ್ಟೆಲ್‌ನಲ್ಲಿ ಮೂರು ಪಟ್ಟು ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಇಕ್ಕಟ್ಟಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಿಲುಕಿದ್ದಾರೆ. ಹೆಚ್ಚುವರಿ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಿದರೂ ಅಗತ್ಯಕ್ಕೆ ತಕ್ಕಷ್ಟು ಬೆಡ್ ಮತ್ತು ಕಾಟ್‌ಗಳು ಇಲ್ಲದೇ ಇರುವುದರಿಂದ ಸಾವಿರಾರು ವಿದ್ಯಾರ್ಥಿಗಳು ನೆಲದ ಮೇಲೆಯೇ ಮಲಗಬೇಕಿದೆ.
ಕಲಬುರಗಿ ನಗರದಲ್ಲಿ 7,006 ವಿದ್ಯಾರ್ಥಿಗಳು ಇಲಾಖೆಯ ಹಾಸ್ಟೆಲ್‌ಗಳಲ್ಲಿ ದಾಖಲಾಗಿದ್ದು, 1,507 ಟೂ ಟಯರ್ ಕಾಟ್ ಹಾಗೂ 4,196 ಬೆಡ್‌ಗಳ ಕೊರತೆ ಇದೆ. ನಂತರದ ಸ್ಥಾನ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ಷೇತ್ರ ಚಿತ್ತಾಪುರದಲ್ಲಿದ್ದು, ಅಲ್ಲಿ 1,263 ಬೆಡ್‌ಗಳ ಕೊರತೆ ಇದೆ. 306 ಕಾಟ್‌ಗಳು ಬೇಕಿವೆ.
ತಾಲ್ಲೂಕಿನ ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಿರ್ವಹಣೆಯಲ್ಲಿ ಮೆಟ್ರಿಕ್ ನಂತರದ ವಸತಿ ನಿಲಯಗಳು–2, ಮೆಟ್ರಿಕ್ ಪೂರ್ವ ವಸತಿ ನಿಲಯಗಳು–14 , ವಸತಿ ಸಹಿತ ಶಾಲೆ–1, ಹೀಗೆ ಒಟ್ಟು 17 ವಸತಿ ನಿಲಯಗಳಿವೆ. ಒಟ್ಟು 1,280 ಮಂಜೂರಾತಿ ಸಂಖ್ಯೆಯಿದ್ದು 1,737 ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿ ಪ್ರವೇಶ ದಾಖಲಾತಿ ಪಡೆದುಕೊಂಡಿದ್ದಾರೆ.
ವಸತಿ ನಿಲಯದಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಬೆಡ್ ಮತ್ತು ಕಾಟ್ ಪೂರೈಕೆಯಾಗಿಲ್ಲ. ವಿದ್ಯಾರ್ಥಿಗಳಿಗೆ ಸಮಸ್ಯೆಯಿದೆ. ಈ ಕುರಿತು ಇಲಾಖೆಯ ಮೇಲಾಧಿಕಾರಿಗೆ ಮಾಹಿತಿ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಚೇತನ್ ಗುರಿಕಾರ್ ಪ್ರತಿಕ್ರಿಯಿಸಿದರು.
ಆಳಂದ: ತಾಲ್ಲೂಕಿನಲ್ಲಿ ಒಟ್ಟು 11 ಹಾಸ್ಟೆಲ್‌ಗಳಿವೆ. ಇವುಗಳಲ್ಲಿ 9 ಮೆಟ್ರಿಕ್ ಪೂರ್ವ, 2 ಮೆಟ್ರಿಕ್ ನಂತರದ ಹಾಸ್ಟೆಲ್‌ಗಳಿವೆ. ಪ್ರಸಕ್ತ ವರ್ಷ 1000 ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಪ್ರವೇಶ ಲಭಿಸಿದೆ.
ಇದರಿಂದ ನೂರಾರು ವಿದ್ಯಾರ್ಥಿಗಳಿಗೆ ಬೆಡ್ ಮತ್ತು ಕಾಟ್ ಕೊರತೆ ಇದೆ. ಕೆಕೆಆರ್‌ಡಿಬಿಗೆ ಬೆಡ್, ಕಾಟ್ ಗಾಗಿ ಬೇಡಿಕೆಯ ವರದಿ ಸಲ್ಲಿಸಲಾಗಿದೆ. ಸದ್ಯಕ್ಕೆ ಅನಿವಾರ್ಯವಾಗಿ ವಿದ್ಯಾರ್ಥಿಗಳಿಗೆ ನೆಲದ ಮೇಲೆ ಮಲಗುವ ವ್ಯವಸ್ಥೆ ಮಾಡಲಾಗಿದೆ. ಸ್ವಂತ ಜಮಖಾನೆ, ಚಾದರ್‌ಗಳನ್ನು ತಂದು ಬಳಕೆ ಮಾಡುತ್ತಿದ್ದಾರೆ ಎಂಬ ಸಮಾಜ ಕಲ್ಯಾಣ ಇಲಾಖೆ ತಾಲ್ಲೂಕು ಅಧಿಕಾರಿ ವಿಜಯಲಕ್ಷ್ಮಿ ಹೋಳ್ಕರ್ ತಿಳಿಸಿದರು.
ಸೇಡಂ: ತಾಲ್ಲೂಕಿನ ಸಮಾಜ ಕಲ್ಯಾಣ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ–7, ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಯರ ವಸತಿ ನಿಲಯ–2, ಮೆಟ್ರಿನ್ ನಂತರ ವಿದ್ಯಾರ್ಥಿನಿಯರ ವಸತಿ ನಿಲಯ–1, ಮೆಟ್ರಿಕ್ ನಂತರ ವಿದ್ಯಾರ್ಥಿಗಳ ವಸತಿ ನಿಲಯ–1 ಸೇರಿದಂತೆ ಒಟ್ಟು 11 ವಸತಿ ನಿಲಯಗಳಿವೆ.
ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ 2023–2024ನೇ ಸಾಲಿಗೆ 734 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಸುಮಾರು 334 ವಿದ್ಯಾರ್ಥಿಗಳಿಗೆ ಬೆಡ್ ಸೌಲಭ್ಯವಿಲ್ಲ. ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ 209 ವಿದ್ಯಾರ್ಥಿಗಳು ಬೆಡ್ ಸಮಸ್ಯೆ ಎದುರಿಸುತ್ತಿದ್ದಾರೆ. ಒಟ್ಟು ಸುಮಾರು 543 ಬೆಡ್ ಸಮಸ್ಯೆ ಇದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಜಯಕುಮಾರ ಪುಲಾರಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪೂರಕ ಮಾಹಿತಿ: ಮಲ್ಲಿಕಾರ್ಜುನ ಎಚ್.ಎಂ, ಸಂಜಯ ಪಾಟೀಲ, ಅವಿನಾಶ ಬೋರಂಚಿ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅಗತ್ಯವಿರುವಷ್ಟು ಕಾಟ್ ಬೆಡ್‌ಗಳನ್ನು ಒದಗಿಸಬೇಕು. ಇದಕ್ಕೆ ತಗಲುವ ಅನುದಾನವನ್ನು ಇಲಾಖೆ ವಿಳಂಬವಿಲ್ಲದೇ ಒದಗಿಸಬೇಕು. ಅಗತ್ಯವಿರುವಷ್ಟು ಹಾಸ್ಟೆಲ್ ಮಂಜೂರು ಮಾಡಬೇಕುಪ್ರೀತಿ ದೊಡ್ಡಮನಿ ಜಿಲ್ಲಾ ಉಪಾಧ್ಯಕ್ಷೆ ಎಐಡಿಎಸ್‌ಓ
ಇಲಾಖೆಯ ಹಾಸ್ಟೆಲ್‌ಗಳಲ್ಲಿ ಅಗತ್ಯವಿರುವ ಕಾಟ್ ಬೆಡ್‌ಗಳನ್ನು ಖರೀದಿಸಲು ಅನುದಾನ ನೀಡುವಂತೆ ಕೆಕೆಆರ್‌ಡಿಬಿಗೆ ಪ್ರಸ್ತಾವ ಸಲ್ಲಿಸಿದ್ದೆವು. ಅನುಮೋದನೆ ಸಿಕ್ಕಿದೆ. ಶೀಘ್ರವೇ ಬೆಡ್ ಕಾಟ್ ದೊರೆಯುವ ನಿರೀಕ್ಷೆ ಇದೆಎಂ.ಎಸ್. ಅಲ್ಲಾಬಕಾಷ್ ಹೆಚ್ಚುವರಿ ನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.