ADVERTISEMENT

ಕಲಬುರಗಿ | ಮರಾಠಿ, ಉರ್ದು ಶಾಲೆಗೆ ಅನಾಥ ಪ್ರಜ್ಞೆ

ಬೆರಳೆಣಿಕೆಯಷ್ಟು ಮಕ್ಕಳು ದಾಖಲು: ಹೆಡ್‌ಮಾಸ್ಟರ್ ಕೋಣೆಯಲ್ಲೇ ಬೋಧನೆ

ಮಲ್ಲಿಕಾರ್ಜುನ ನಾಲವಾರ
Published 3 ಜುಲೈ 2024, 6:06 IST
Last Updated 3 ಜುಲೈ 2024, 6:06 IST
ಕಲಬುರಗಿ ನಗರದ ಸರಾಫ್‌ ಬಜಾರ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಮತ್ತು ಉರ್ದು ಮಾಧ್ಯಮ ಶಾಲಾ ಕೊಠಡಿಯಲ್ಲಿ ಕುಳಿತ ಮಕ್ಕಳು
ಕಲಬುರಗಿ ನಗರದ ಸರಾಫ್‌ ಬಜಾರ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಮತ್ತು ಉರ್ದು ಮಾಧ್ಯಮ ಶಾಲಾ ಕೊಠಡಿಯಲ್ಲಿ ಕುಳಿತ ಮಕ್ಕಳು   

ಕಲಬುರಗಿ: ಸಿಮೆಂಟ್‌ ಚಾವಣಿಯಿಂದ ಚಾಚಿಕೊಂಡು ತುಕ್ಕು ಹಿಡಿದ ಕಬ್ಬಿಣದ ಕಂಬಿಗಳು, ಮಳೆ ಬಂದಾಗಲೆಲ್ಲ ಕಿಟಕಿ–ಬಾಗಿಲು, ಚಾವಣಿ ಮೂಲಕ ಸೋರುವ ಮಳೆ ನೀರು, ಕಿಷ್ಕಿಂಧೆಯಂತಿರುವ ಕೊಠಡಿಯಲ್ಲಿ ಮುಖ್ಯಶಿಕ್ಷಕರ ಕಾರ್ಯಾಭಾರ, ಅದೇ ಕೊಠಡಿಯ ನೆಲದಲ್ಲಿ ಕುಳಿತು ಮಕ್ಕಳ ವಿದ್ಯಾಭ್ಯಾಸ, ಬೈಕ್‌ಗಳ ನಿಲ್ದಾಣವಾದ ಶಾಲಾ ಮೈದಾನ...

ಹೀಗೆ ಸಾಲು– ಸಾಲು ಮೂಲಸೌಕರ್ಯಗಳ ಕೊರತೆಯಿಂದ ಕಲಬುರಗಿ ಉತ್ತರ ವಲಯದ ಆಸೀಫ್‌ ಗಂಜ್‌ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಮತ್ತು ಉರ್ದು ಮಾಧ್ಯಮ ಶಾಲೆ ಅನಾಥ ಪ್ರಜ್ಞೆಯಿಂದ ನರಳುತ್ತಿದೆ. ಅವ್ಯವಸ್ಥೆಯ ಆಗರವಾದ ಈ ಶಾಲೆ ನಗರದ ಹೃದಯ ಭಾಗವಾದ ಸರಾಫ್‌ ಬಜಾರ್‌ನ ಹಳೆ ಭೋವಿ ಗಲ್ಲಿಯಲ್ಲಿದೆ.

ಜಿಲ್ಲೆಯ ಹಲವು ಶಾಲೆಗಳಲ್ಲಿ ಕಾಯಂ ಶಿಕ್ಷಕರಿಲ್ಲದೇ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಆದರೆ, ಇಲ್ಲಿನ ಶಾಲೆ ವಿದ್ಯಾರ್ಥಿಗಳು ಇಲ್ಲದೇ ಮುಚ್ಚುವ ಸ್ಥಿತಿಗೆ ಹಾಗೂ ಮೂಲಸೌಕರ್ಯಗಳಿಲ್ಲದ ಕಟ್ಟಡ ಶಿಥಿಲವಾಗುವ ಹಂತ ತಲುಪಿದೆ. ಶಾಲೆಯ ಗೋಡೆಗಳು ಸುಣ್ಣ–ಬಣ್ಣ ಕಾಣದೆ ದಶಕಗಳೇ ಕಳೆದಿವೆ.

ADVERTISEMENT

ಈ ಶಾಲೆಯು ಉರ್ದು ಮತ್ತು ಮರಾಠಿ ಮಾಧ್ಯಮದಲ್ಲಿ 1ರಿಂದ 7ನೇ ತರಗತಿಗಳನ್ನು ಹೊಂದಿದೆ. ಉರ್ದುವಿನಲ್ಲಿ ಒಬ್ಬರೇ ಶಿಕ್ಷಕಿ ಇದ್ದು, ಏಳು ತರಗತಿಗಳನ್ನು ಒಂದೇ ಕೊಠಡಿಯಲ್ಲಿ ನಡೆಸಲಾಗುತ್ತಿದೆ. 1ನೇ, 2ನೇ ಹಾಗೂ 5ನೇ ತರಗತಿಯಲ್ಲಿ ತಲಾ ಇಬ್ಬರು ಮಕ್ಕಳಿದ್ದರೆ 3ನೇ ಮತ್ತು 4ನೇ ತರಗತಿಯಲ್ಲಿ ತಲಾ ಮೂವರು ವಿದ್ಯಾರ್ಥಿಗಳಿದ್ದಾರೆ. ಒಟ್ಟು 12 ಮಕ್ಕಳು ದಾಖಲಾಗಿದ್ದು, ನಿತ್ಯ ಒಂದಲ್ಲಾ ಒಂದು ತರಗತಿಯ ಮಕ್ಕಳು ಗೈರಾಗುವುದು ಸಹಜವಾಗಿದೆ.

ಮರಾಠಿ ಮಾಧ್ಯಮಕ್ಕೆ ಎರಡು ಕೊಠಡಿಗಳಿದ್ದು, ಇಬ್ಬರು ಮರಾಠಿ ಭಾಷಾ ಶಿಕ್ಷಕಿಯರು ಹಾಗೂ ಒಬ್ಬರು ಕನ್ನಡ ಶಿಕ್ಷಕಿಯರಿದ್ದಾರೆ. 1ನೇ ತರಗತಿಯಲ್ಲಿ ಇಬ್ಬರು ಮಕ್ಕಳು ದಾಖಲಾಗಿದ್ದಾರೆ. 2ನೇ, 3ನೇ ಮತ್ತು 5ನೇ ತರಗತಿಯಲ್ಲಿ ತಲಾ ಮೂವರು, 6ನೇ ಮತ್ತು 7ನೇ ತರಗತಿಯಲ್ಲಿ ತಲಾ ಇಬ್ಬರು ಹಾಗೂ 4ನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿ ಸೇರಿ ಒಟ್ಟು 14 ಮಕ್ಕಳು ಪ್ರವೇಶ ಪಡೆದಿದ್ದಾರೆ.

ಕೊಠಡಿ ಪ್ರವೇಶ ದ್ವಾರದ ಎದುರಿನ ಮೂಲೆಯಲ್ಲಿ ಮುಖ್ಯಶಿಕ್ಷಕರ (ಎಚ್‌ಎಂ) ಕುರ್ಚಿ ಹಾಗೂ ಅವರ ಬಲ ಬದಿಯಲ್ಲಿ ಶಾಲಾ ದಾಖಲಾತಿಗಳ ಅಲಮಾರಿ ಇದೆ. ಗೋಡೆಗೆ ಹೊಂದಿಕೊಂಡು ಕಲಿಕಾ ಹಾಗೂ ಆಟಿಕೆ ಸಾಮಗ್ರಗಳಿವೆ. ಎಚ್‌ಎಂ ಕುರ್ಚಿ ಎಡಭಾಗದಲ್ಲಿ 1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ‍ಪಾಠ ಕೇಳಬೇಕಿದೆ. 6ನೇ ಮತ್ತು 7ನೇ ತರಗತಿ ಬೇರೊಂದು ಕೊಠಡಿಯಲ್ಲಿ ನಡೆಯುತ್ತಿದೆ.

‘2013ರಲ್ಲಿ ಮೊದಲ ಬಾರಿಗೆ ಶಾಲೆಗೆ ಬಂದಾಗ 81 ವಿದ್ಯಾರ್ಥಿಗಳಿದ್ದರು. ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಜೋಪಡಿಗಳಲ್ಲಿ ವಾಸಿಸುವ ಕುಲುಮೆ ಕಮ್ಮಾರರಂತಹ ಬಡ ಶ್ರಮಿಕರ ಮಕ್ಕಳು ಬೆರಳೆಣಿಕೆಯಷ್ಟು ಪ್ರವೇಶ ಪಡೆದಿದ್ದಾರೆ’ ಎಂದು ಮುಖ್ಯಶಿಕ್ಷಕಿ ಜಯಶ್ರೀ ಶಿಂಧೆ ‘ಪ್ರಜಾವಾಣಿ’ಗೆ ತಿಳಿಸಿದರು.

ಕಲಬುರಗಿ ನಗರದ ಸರಾಫ್‌ ಬಜಾರ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಮತ್ತು ಉರ್ದು ಮಾಧ್ಯಮ ಶಾಲಾ ಮೈದಾನದಲ್ಲಿ ನಿಲ್ಲಿಸಲಾದ ಬೈಕ್‌ಗಳು
ಕಲಬುರಗಿ ನಗರದ ಸರಾಫ್‌ ಬಜಾರ್‌ನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಮತ್ತು ಉರ್ದು ಮಾಧ್ಯಮ ಶಾಲಾ ಕಟ್ಟಡದ ದುಸ್ಥಿತಿ
ಸಕ್ರೆ‍‍‍ಪ್ಪಗೌಡ ಬಿರಾದಾರ

ಶಾಲೆಯ ಅವ್ಯವಸ್ಥೆ ಹಾಗೂ ಮಕ್ಕಳ ದಾಖಲಾತಿಯನ್ನು ಪರಿಶೀಲನೆ ಮಾಡಲಾಗುವುದು. ಅಗತ್ಯ ಬಿದ್ದರೆ ಹತ್ತಿರದ ಬೇರೊಂದು ಶಾಲೆಗೆ ತರಗತಿಗಳ ಸ್ಥಳಾಂತರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು

-ಸಕ್ರೆ‍‍‍ಪ್ಪಗೌಡ ಬಿರಾದಾರ ಡಿಡಿಪಿಐ

ಬೈಕ್‌ಗಳ ನಿಲ್ದಾಣವಾದ ಮೈದಾನ ಶಾಲೆಯ ಮುಂಭಾಗದಲ್ಲಿನ ಮೈದಾನವು ಮಾರ್ಕೆಟ್‌ಗೆ ಬರುವ ಗ್ರಾಹಕರ ಮತ್ತು ಮಳಿಗೆಗಳ ವರ್ತಕರಿಗೆ ವಾಹನ ನಿಲ್ದಾಣವಾಗಿದೆ. ಶಾಲೆಯ ರಸ್ತೆ ಮುಂಭಾಗ ಸೇರಿ ಎಲ್ಲೆಂದರಲ್ಲಿ ಬೈಕ್‌ಗಳನ್ನು ನಿಲ್ಲಿಸಲಾಗುತ್ತದೆ. ವಿದ್ಯಾರ್ಥಿಗಳು ಬೈಕ್‌ಗಳ ನಡುವೆ ನುಸುಳಿ ಶಾಲೆ ಪ್ರವೇಶಿಸುವ ಅನಿವಾರ್ಯತೆ ಇದೆ. ಮೈದಾನದ ಬದಿಯಲ್ಲಿ ತ್ಯಾಜ್ಯ ಎಸೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.