ಚಿಂಚೋಳಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಬೆಳೆವಿಮೆಗೆ ನೋಂದಣಿ ಕಳೆದ ಮೂರು ವರ್ಷಗಳಲ್ಲಿ ವರ್ಷದಿಂದ ವರ್ಷಕ್ಕೆ ಏರಿಕೆ ಕಾಣಿಸಿಕೊಂಡಿದ್ದರೆ, ಪ್ರಸಕ್ತ ವರ್ಷ ಇಳಿಕೆ ಕಂಡು ಬಂದಿದೆ.
ಇದರ ಜತೆಗೆ ಮೂರು ವರ್ಷಗಳ ಮುಂಗಾರು ಬೆಳೆಗಳಿಗೆ ವಿಮೆ ಮಾಡಿಸಿದ್ದರಿಂದ ವಿಮೆ ಕಂಪನಿಗೆ ₹ 54.08 ಕೋಟಿ ಲಾಭವಾಗಿರುವ ಅಂಶ ಕೃಷಿ ಇಲಾಖೆಯ ಅಧಿಕಾರಿಗಳು ನೀಡಿದ ಮಾಹಿತಿಯಲ್ಲಿ ಪತ್ತೆಯಾಗಿದೆ. ಆದರೆ ರೈತರು ಯೋಜನೆ ಕುರಿತು ನಿರಾಸೆಗೊಂಡು ವಿಮೆ ಮಾಡಿಸಲು ಪ್ರಸಕ್ತ ವರ್ಷ ಹಿಂದೇಟು ಹಾಕಿದ್ದಾರೆ.
2020–21ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 36,226 ರೈತರು ವಿಮೆ ಮಾಡಿಸಿದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲು ಪ್ರಿಮಿಯಂ ಮೊತ್ತ ₹ 33.80 ಕೋಟಿ ಕಂಪನಿಗೆ ಸಂದಾಯವಾಗಿದೆ. ಸ್ಥಳೀಯ ಆಪತ್ತಿನ ಮೇರೆಗೆ 5433 ರೈತರಿಗೆ ₹ 4.7 ಕೋಟಿ ಹಾಗೂ ಬೆಳೆ ಇಳುವರಿ ಆಧರಿಸಿ ನಷ್ಟ ಪರಿಹಾರ 8869 ರೈತರಿಗೆ ₹ 10.88 ಕೋಟಿ ಪಾವತಿಸಲಾಗಿದೆ. ಕಂಪನಿಗೆ ₹ 14.96 ಕೋಟಿ ಲಾಭವಾಗಿದೆ.
2021–22ನೇ ಸಾಲಿನಲ್ಲಿ 65,170 ರೈತರು ನೋಂದಣಿ ಮಾಡಿಸಿದ್ದರು. ಇದರಿಂದ ಕಂಪನಿಗೆ ಪ್ರಿಮಿಯಂ ಬಾಬ್ತಿನಲ್ಲಿ ರೈತ ಹಾಗೂ ಸರ್ಕಾರದ ಪ್ರಿಮಿಯಂ ಸೇರಿ ₹ 54.34 ಕೋಟಿ ಸಂದಾಯವಾಗಿದೆ. ಇದರಲ್ಲಿ ಸ್ಥಳೀಯ ಆಪತ್ತಿನಡಿ 28,618 ರೈತರಿಗೆ ₹ 28.87 ಕೋಟಿ ಹಾಗೂ ಬೆಳೆ ಇಳುವರಿ ಆಧರಿಸಿ ನಷ್ಟ ಪರಿಹಾರ 23,370 ರೈತರಿಗೆ ₹ 24.54 ಕೋಟಿ ನೀಡಲಾಗಿದೆ. ಕಂಪನಿಗೆ ₹ 92.19 ಕೋಟಿ ಲಾಭವಾಗಿದೆ.
2022–23 ರಲ್ಲಿ 1,88,600 ರೈತರು ವಿಮಾ ನೋಂದಣಿ ಮಾಡಿಸಿದ್ದು, ಇದರಿಂದ ಕಂಪನಿಗೆ ರೈತರು, ಸರ್ಕಾರದ ಪ್ರಿಮಿಯಂ 124.77 ಕೋಟಿ ಸಂದಾಯವಾಗಿದೆ. ಇದರಲ್ಲಿ ಸ್ಥಳೀಯ ಆಪತ್ತಿನಲ್ಲಿ 64,764 ರೈತರಿಗೆ ₹ 39.93 ಕೋಟಿ ಹಾಗೂ ಬೆಳೆ ಇಳುವರಿ ನಷ್ಟ ಪರಿಹಾರ 51,093 ರೈತರಿಗೆ ₹ 50.52 ಕೋಟಿ ಪಾವತಿಸಲಾಗಿದೆ. ಈ ವರ್ಷದಲ್ಲಿ ಕಂಪನಿಗೆ ₹ 34.32 ಕೋಟಿ ಲಾಭವಾಗಿದೆ.
2023–24ನೇ ಸಾಲಿನಲ್ಲಿ 1,78, 370 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ 10,230 ರೈತರು ವಿಮಾ ನೋಂದಣಿಯಿಂದ ಹಿಂದಕ್ಕೆ ಸರಿದಿರುವುದನ್ನು ಅಧಿಕಾರಿಗಳು ನೀಡಿದ ಅಂಕಿ, ಅಂಶ ವಿವರಿಸಿದೆ. ಇದರಲ್ಲಿ ಚಿಂಚೋಳಿ, ಆಳಂದ, ಚಿತ್ತಾಪುರ, ಕಮಲಾಪುರ, ಸೇಡಂ ವಿಮೆ ನೋಂದಣಿ ಕಳೆದ ವರ್ಷಕ್ಕಿಂತ ಕಡಿಮೆಯಿದೆ. ಆದರೆ ಅಫಜಲಪುರ, ಜೇವರ್ಗಿ, ಕಲಬುರಗಿ, ಕಾಳಗಿ, ಶಹಾಬಾದ ಮತ್ತು ಯಡ್ರಾಮಿ ತಾಲ್ಲೂಕುಗಳಲ್ಲಿ ಏರಿಕೆ ಕಂಡಿದೆ.
ಹಿಂದಿನ ವರ್ಷಕ್ಕಿಂತ ಕಡಿಮೆ ರೈತರು ಪ್ರಸಕ್ತ ವರ್ಷ ನೋಂದಾಯಿಸಿದ್ದು ಯೋಜನೆಯಿಂದ ರೈತರಿಗೆ ನೆರವಾಗುತ್ತಿಲ್ಲ ಎಂಬುದು ತೋರಿಸಿ ಕೊಡುತ್ತದೆ. ಸಂಸದ ಡಾ.ಉಮೇಶ ಜಾಧವ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ರೈತರಿಗೆ ಅನ್ಯಾಯವಾಗುತ್ತಿರುವ ಕುರಿತು ಲೋಕಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಆದರೂ ರೈತರಿಗೆ ಪರಿಹಾರ ನಿರೀಕ್ಷಿತ ಮಟ್ಟದಲ್ಲಿ ಸಿಕ್ಕಿಲ್ಲ.
ಪ್ರಸಕ್ತ ವರ್ಷ ಮಳೆ ಬಂದಾಗ ದೂರು ಸಲ್ಲಿಸಲು ಹೋದರೂ ದೂರು ಸ್ವೀಕಾರವಾಗಿಲ್ಲ. ಗ್ರಾಹಕ ಸೇವಾ ಕೇಂದ್ರದ ಮೂಲಕ ದೂರು ದಾಖಲಿಸಲು ಮುಂದಾದರೂ ಪ್ರಯೋಜನವಾಗಿಲ್ಲ ಎಂದು ಹಲವು ರೈತರು ಅಳಲು ತೋಡಿಕೊಂಡಿದ್ದಾರೆ.
ಕೆಲವರಿಗೆ ಹಣ ಬಾರದೇ ಇರುವುದು ಮತ್ತು ಎಫ್‌ಐಡಿ ಸಂಖ್ಯೆ ಕಡ್ಡಾಯವಾಗಿದ್ದರಿಂದ ಹಾಗೂ ಮಳೆ ಕೊರತೆಯಿಂದಾಗಿ ಪ್ರಸಕ್ತ ವರ್ಷ ರೈತರು ಬೆಳೆ ವಿಮೆ ನೋಂದಣಿಯಲ್ಲಿ ಇಳಿಕೆಯಾಗಿರಬಹುದು ಎನ್ನುತ್ತಾರೆ ಯೂನಿವರ್ಸಲ್ ಸೊಂಪೊ ವಿಮಾ ಕಂಪನಿ ಜಿಲ್ಲಾ ಸಂಯೋಜಕ ಮನ್ಸೂರ್ ಶೇಖ್.
ಚಿಂಚೋಳಿ ತಾಲ್ಲೂಕಿನಲ್ಲಿ ಕಳೆದ ವರ್ಷ 31372 ರೈತರು ವಿಮೆ ನೋಂದಣಿ ಮಾಡಿಸಿದ್ದರು. ಪ್ರಸಕ್ತ ವರ್ಷ ಈ ಸಂಖ್ಯೆ 19693ಕ್ಕೆ ಕುಸಿದಿದೆ. ಕಳೆದ ವರ್ಷ ರೈತರಿಗೆ ನಿರೀಕ್ಷಿತ ಪರಿಹಾರ ಸಿಕ್ಕಿಲ್ಲ ಎಂಬ ಬೇಸರವಿದೆ.- ವೀರಶೆಟ್ಟಿ ರಾಠೋಡ್, ಸಹಾಯಕ ನಿರ್ದೆಶಕರು ಕೃಷಿ ಇಲಾಖೆ ಚಿಂಚೋಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.