ಕಲಬುರಗಿ: ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿ ಸಂರಕ್ಷಣೆ ಮಾಡಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಿಬ್ಬಂದಿ ಕೊರತೆ ಕಾಡುತ್ತಿದೆ.
ಮೂರು ಹುದ್ದೆಗಳಿಗೆ ಮಾತ್ರ ಮಂಜೂರಾತಿ ನೀಡಿದ ಕಾರಣ ಈ ಸಮಸ್ಯೆ ಉಲ್ಬಣಿಸಿದೆ.
ನಗರದ ರಾಜಾಪುರದ ಬಳಿಯ ಸರ್ಕಾರಿ ಮಹಾವಿದ್ಯಾಲಯದ ಹತ್ತಿರ ಇರುವ ಈ ಕಚೇರಿಯಲ್ಲಿ ಒಬ್ಬರು ಸಹಾಯಕ ನಿರ್ದೇಶಕರು ಹಾಗೂ ಇಬ್ಬರು ಸಿಬ್ಬಂದಿ ಇದ್ದಾರೆ. ಈಚೆಗೆ ಡಿ ಗ್ರೂಪ್ ನೌಕರ ನಿವೃತ್ತಿ ಹೊಂದಿದ ಕಾರಣ ಒಬ್ಬರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ.
ಸಹಾಯಕ ನಿರ್ದೇಶಕರಿಗೆ ಪ್ರಭಾರ: ಇಲ್ಲಿಯ ಸಹಾಯಕ ನಿರ್ದೇಶಕರಿಗೆ ರಾಯಚೂರು ಕಚೇರಿಯ ಪ್ರಭಾರ ನೀಡಲಾಗಿದೆ. ಆದ್ದರಿಂದ ಅವರು ವಾರದ ಕೆಲ ದಿನ ಇಲ್ಲಿ, ಇನ್ನೂ ಕೆಲ ದಿನ ಅಲ್ಲಿ ಕೆಲಸ ಮಾಡಬೇಕಾಗಿದೆ. ಇದರಿಂದ ಕೆಲಸದ ಮೇಲೆ ಕಚೇರಿಗೆ ಬರುವ ಕಲಾವಿದರು ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ.
ನಗರದ ಎಸ್.ಎಂ.ಪಂಡಿತ್ ರಂಗಮಂದಿರ ಇದೇ ಕಚೇರಿ ವ್ಯಾಪ್ತಿಗೆ ಒಳಪಡುತ್ತದೆ. ಹೆಚ್ಚು ಜನ ಇದನ್ನು ಬಾಡಿಗೆಗೆ ತೆಗೆದುಕೊಳ್ಳುತ್ತಾರೆ. ಟೈಪಿಸ್ಟ್ ಹಾಗೂ ಡಿ ಗ್ರೂಪ್ ಸಿಬ್ಬಂದಿಯೇ ರಂಗಮಂದಿರ ಕಾಯ್ದಿರಿಸುವಿಕೆ, ಕಚೇರಿ ನಿರ್ವಹಣೆ ಸೇರಿ ಎಲ್ಲ ಕೆಲಸಗಳನ್ನು ನಿರ್ವಹಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಜಯಂತಿಗಳ ಆಚರಣೆ ಜವಾಬ್ದಾರಿ: ರಾಜ್ಯ ಸರ್ಕಾರ ವಿವಿಧ ಜಯಂತಿಗಳ ಆಚರಣೆ ಜವಾಬ್ದಾರಿಯನ್ನು ಇಲಾಖೆಗೆ ವಹಿಸಿದ ಕಾರಣ ಜಿಲ್ಲೆಯಲ್ಲಿ ಆ ಕಾರ್ಯವನ್ನೂ ನಿರ್ವಹಿಸಬೇಕಿದೆ. ಕಾರ್ಯಕ್ರಮಕ್ಕೆ ತಯಾರಿ ಮಾಡಿಕೊಳ್ಳಬೇಕು. ಪೂರ್ವಭಾವಿ ಸಭೆಗಳಲ್ಲಿ ಭಾಗವಹಿಸಬೇಕು. ಸಿಬ್ಬಂದಿ ಕೊರತೆಯ ನಡುವೆಯೂ ಇದೆಲ್ಲವನ್ನೂ ನಿಭಾಯಿಸಬೇಕಿದೆ.
ಪುಸ್ತಕ ಮಾರಾಟ ಮಳಿಗೆಗೆ ಬೀಗ: ಕಚೇರಿ ಆವರಣದಲ್ಲಿ ಪುಸ್ತಕ ಮಾರಾಟ ಮಳಿಗೆ ನಿರ್ಮಿಸಲಾಗಿದೆ. ಇಲಾಖೆ ಅಧೀನದ ಪ್ರಾಧಿಕಾರ ಹಾಗೂ ಅಕಾಡೆಮಿಗಳು ಪ್ರಕಟಿಸಿದ ಪುಸ್ತಕಗಳನ್ನು ಇಲ್ಲಿ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತದೆ. ಸಿಬ್ಬಂದಿ ಕೊರತೆಯ ಕಾರಣಕ್ಕೆ ಅದು ಯಾವಾಗಲೂ ಬೀಗ ಹಾಕಿದ ಸ್ಥಿತಿಯಲ್ಲಿರುತ್ತದೆ.
‘ಓದುಗರು ವಿಚಾರಿಸಿದಾಗ ಮಾತ್ರ ಸಿಬ್ಬಂದಿ ಪುಸ್ತಕ ಮಳಿಗೆಯ ಬೀಗ ತೆಗೆಯುತ್ತಾರೆ. ಪುಸ್ತಕ ಖರೀದಿಸಿದ ಬಳಿಕ ಅದಕ್ಕೆ ಮತ್ತೆ ಬೀಗ ಹಾಕಲಾಗುತ್ತದೆ. ಇಲ್ಲಿ ಸಾಹಿತ್ಯಕ್ಕೆ ಸಂಬಂಧಿಸಿದ ಉತ್ತಮ ಪುಸ್ತಕಗಳು ದೊರೆಯುತ್ತವೆ. ಇದು ಬಹಳಷ್ಟು ಜನರಿಗೆ ತಿಳಿದಿಲ್ಲ. ಆದ್ದರಿಂದ ಪ್ರಚಾರದ ಅಗತ್ಯ ಇದೆ. ಅಲ್ಲದೆ, ಇದಕ್ಕೆ ಪ್ರತ್ಯೇಕ ಸಿಬ್ಬಂದಿಯನ್ನು ನೇಮಕ ಮಾಡಬೇಕು’ ಎಂದು ಸಾಹಿತ್ಯಾಸಕ್ತರು ಒತ್ತಾಯಿಸುತ್ತಾರೆ.
ಡಿ ಗ್ರೂಪ್ ನೌಕರರು ನಿವೃತ್ತರಾದ ಬಳಿಕ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗಿದೆ. ಇರುವ ಸಿಬ್ಬಂದಿಯನ್ನು ಬಳಸಿಕೊಂಡು ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದೇವೆದತ್ತಪ್ಪ ಸಾಗನೂರು ಸಹಾಯಕ ನಿರ್ದೇಶಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಪುಸ್ತಕ ಓದುವ ಸಂಸ್ಕೃತಿ ಕಡಿಮೆಯಾಗುತ್ತಿದೆ. ಸಾಹಿತ್ಯದ ಓದಿಗೆ ಉತ್ತೇಜನ ನೀಡಬೇಕಾಗಿರುವುದು ಇಲಾಖೆಯ ಜವಾಬ್ದಾರಿ. ಪುಸ್ತಕ ಮಳಿಗೆ ತೆರೆಯುವಂತಾಗಬೇಕುಪವನ್ ಸಾಹಿತ್ಯಾಸಕ್ತ ಹೀರಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.