ADVERTISEMENT

ಆಳಂದ: ಲಾಡ್ಲೆ ಮಶಾಕ್‌ ಉರುಸ್‌ ಇಂದಿನಿಂದ

ಮೂರು ದಿನ ವಿವಿಧ ಕಾರ್ಯಕ್ರಮ ಆಯೋಜನೆ; ಸಂದಲ್‌ ಮೆರವಣಿಗೆ ಇಂದು

ಸಂಜಯ್ ಪಾಟೀಲ
Published 13 ಅಕ್ಟೋಬರ್ 2024, 5:55 IST
Last Updated 13 ಅಕ್ಟೋಬರ್ 2024, 5:55 IST
ಲಾಡ್ಲೆ ಮಶಾಕ್‌ ದರ್ಗಾ
ಲಾಡ್ಲೆ ಮಶಾಕ್‌ ದರ್ಗಾ   

ಆಳಂದ: ತಾಲ್ಲೂಕಿನ ಲಾಡ್ಲೆ ಮಶಾಕ್‌ ಅವರ 669 ಉರುಸ್‌ ಅ.13ರಿಂದ ಮೂರು ದಿನಗಳವರೆಗೆ ಜರುಗಲಿದೆ. ದರ್ಗಾ ಸಮಿತಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ತಾಲ್ಲೂಕಿನ ಹೊಸ ಆಡಳಿತ ಭವನದಲ್ಲಿ ಸಂಜೆ 5ಕ್ಕೆ ಕವ್ವಾಲಿ ಕಾರ್ಯಕ್ರಮ ನಡೆಯಲಿದೆ. 6 ಗಂಟೆಗೆ ತಹಶೀಲ್ದಾರ್‌ ಅಣ್ಣಾರಾವ ಪಾಟೀಲ, ದರ್ಗಾ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ತಹಶೀಲ್ದಾರ್‌ ಕಚೇರಿಯಿಂದ ಪವಿತ್ರ ಸಂದಲ್‌(ಗಂಧೋತ್ಸವ) ಹೊತ್ತು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.

ಲಾತೂರು, ಹೈದರಾಬಾದ್‌, ಉಮರ್ಗಾ ಕಲಾತಂಡಗಳಿಂದ ಭಾಜಾಭಜಂತ್ರಿ, ಡಿಜೆ ಮತ್ತಿತರ ನೃತ್ಯಗಳ ಸಡಗರದ ಉತ್ಸವದೊಂದಿಗೆ ಸಂದಲ್‌ ಮೆರವಣಿಗೆ, ಕುರ್‌ಆನ್‌ ಪಠಣ, ಚಾದರ್‌– ಎ– ಗುಲ್‌, ನಮಾಜ್‌–ಇ–ಫಜರ್‌ ಮತ್ತಿತರ ಧಾರ್ಮಿಕ ಆಚರಣೆಯೊಂದಿಗೆ ರಾತ್ರಿಯಿಡೀ ಪಟ್ಟಣದ ಮುಖ್ಯಬೀದಿಗಳ ಮೂಲಕ ಸೋಮವಾರ ಬೆಳಿಗ್ಗೆ ದರ್ಗಾ ತಲುಪಲಿದೆ.

ADVERTISEMENT

ಅ.14ರಂದು ದರ್ಗಾ ಆವರಣದಲ್ಲಿ ಮಧ್ಯಾಹ್ನ 2ಕ್ಕೆ ಖುತುಬೆ–ಎ–ದಖನ್‌ ಧಾರ್ಮಿಕ ಸಮಾವೇಶ ಜರುಗಲಿದೆ. ರಾತ್ರಿ 8ಕ್ಕೆ ದೀಪೋತ್ಸವ, ನಮಾಜ್‌–ಎ–ಇಶಾ ಮತ್ತು ಹೈದರಾಬಾದ್‌ನ ಕಲಾವಿದರಿಂದ ಕವ್ವಾಲಿ ಹಮ್ಮಿಕೊಳ್ಳಲಾಗಿದೆ. ಅ. 15ರಂದು ದರ್ಗಾ ಸಮಿತಿಯಿಂದ ವಿವಿಧ ಧಾರ್ಮಿಕ ಆಚರಣೆ ಹಾಗೂ ಸನ್ಮಾನ ನಡೆಯಲಿವೆ ಎಂದು ದರ್ಗಾ ಸಮಿತಿ ಅಧ್ಯಕ್ಷ ಆಸೀಫ್‌ ಅನ್ಸಾರಿ, ಮೋಹಿಜ್‌ ಕಾರಬಾರಿ ತಿಳಿಸಿದರು.

ಉರುಸ್‌ ಸಿದ್ಧತೆ: ಉರುಸ್‌ ನಿಮಿತ್ತ ದರ್ಗಾ ಆವರಣವನ್ನು ಸ್ವಚ್ಛಗೊಳಿಸಲಾಗಿದ್ದು, ದೀಪಾಲಂಕಾರ ಮಾಡಲಾಗಿದೆ. 200ಕ್ಕೂ ಅಧಿಕ ಮಾರಾಟ ಮಳಿಗೆಗಳನ್ನು ತೆರೆಯಲಾಗಿದೆ. ಮಕ್ಕಳ ಆಟಿಕೆ, ಮನರಂಜನೆ ಕೇಂದ್ರಗಳು ಠಿಕಾಣಿಹೂಡಿವೆ. ಹೈದರಾಬಾದ್‌, ಪುಣೆ, ಸೊಲ್ಲಾಪುರ ಸೇರಿದಂತೆ ವಿವಿಧೆಡೆಯ ಭಕ್ತರು, ಯಾತ್ರಿಕರು ಬರುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.