ADVERTISEMENT

ಮುಂಗಾರು ಮಳೆಗೆ ಮುನ್ನೋಳ್ಳಿ ಕೆರೆ ಭರ್ತಿ

ಧರ್ಮಸ್ಥಳ ಸಂಸ್ಥೆ, ಗ್ರಾಪಂ ನರೇಗಾ ಯೋಜನೆಯಡಿ ಕೆರೆ ಜೀರ್ಣೋದ್ದಾರ

​ಪ್ರಜಾವಾಣಿ ವಾರ್ತೆ
Published 20 ಜೂನ್ 2024, 7:18 IST
Last Updated 20 ಜೂನ್ 2024, 7:18 IST
ಮುನ್ನೋಳ್ಳಿ ಗ್ರಾಮದ ಗಂಗಮ್ಮನ ಕೆರೆಯು ಮುಂಗಾರು ಮಳೆಗೆ ಸಂಪೂರ್ಣ ಭರ್ತಿಯಾಗಿರುವ ದೃಶ್ಯ
ಮುನ್ನೋಳ್ಳಿ ಗ್ರಾಮದ ಗಂಗಮ್ಮನ ಕೆರೆಯು ಮುಂಗಾರು ಮಳೆಗೆ ಸಂಪೂರ್ಣ ಭರ್ತಿಯಾಗಿರುವ ದೃಶ್ಯ   

ಆಳಂದ: ತಾಲ್ಲೂಕಿನಲ್ಲಿ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮುಂಗಾರು ಮಳೆಗೆ ಮುನ್ನೋಳ್ಳಿ ಗ್ರಾಮದ ಗಂಗಮ್ಮನ ಕೆರೆ ಸಂಪೂರ್ಣ ಭರ್ತಿಯಾಗಿದೆ, ಮೈದುಂಬಿಕೊಂಡ ಕೆರೆ ಕಂಡು ಗ್ರಾಮಸ್ಥರಲ್ಲಿ ಸಂತಸ ಮೂಡಿದೆ.

ಹತ್ತಾರು ವರ್ಷದಿಂದ ಮಣ್ಣು, ಕಲ್ಲು ಕಟ್ಟಿಗೆಯಿಂದ ಹೂಳು ತುಂಬಿಕೊಂಡಿತ್ತು. ಕಳೆದ ಬೇಸಿಗೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯು ಕೆರೆ ಜೀರ್ಣೋದ್ದಾರಕ್ಕೆ ₹10 ಲಕ್ಷ ಅನುದಾನ ಒದಗಿಸಿತ್ತು. ಮುನ್ನೋಳ್ಳಿ ಗ್ರಾಮ ಪಂಚಾಯಿತಿಯು ಸಹ ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ₹15 ಲಕ್ಷ ವೆಚ್ಚದಲ್ಲಿ ಕೆರೆ ಜೀರ್ಣೋದ್ಧಾರ ಕಾಮಗಾರಿ ಕೈಗೊಳ್ಳಲಾಯಿತು. ಎರಡು ತಿಂಗಳ ಕಾಲ ಕೆರೆ ಕಾಮಗಾರಿ ಕೈಗೊಂಡು ಕಳೆದ ಎರಡು ವಾರದ ಹಿಂದೆ ಕೆರೆಗೆ ಕಲ್ಲಿನ ಬದು ನಿರ್ಮಾಣ ಮತ್ತಿತರ ಕಾಮಗಾರಿ ಪೂರ್ಣಗೊಳಿಸಲಾಗಿತ್ತು.

ಕಳೆದ ವಾರ ಸುರಿದ ಮುಂಗಾರು ಮಳೆಯಿಂದ ಮುನ್ನೋಳ್ಳಿ, ಕಿಣಿಸುಲ್ತಾನ ಗ್ರಾಮದ ಹಳ್ಳಕೊಳ್ಳಗಳ ನೀರು ತುಂಬಿ ಗಂಗಮ್ಮನ ಕೆರೆಯೂ ನೀರಿನಿಂದ ಸಂಪೂರ್ಣ ಭರ್ತಿಯಾಗಿದೆ. ಒಟ್ಟು 7 ಎಕರೆ ವಿಶಾಲದ ಈ ಕೆರೆ ಪಾತ್ರದಲ್ಲಿ ಅಂದಾಜು 8 ಅಡಿ ಆಳದಷ್ಟು ನೀರು ತುಂಬಿದೆ. ಕೆರೆ ಭರ್ತಿಯಿಂದ ಮುನ್ನೋಳ್ಳಿ, ಸಂಗೋಳಗಿ ಗ್ರಾಮದ ವ್ಯಾಪ್ತಿಯಲ್ಲಿನ ರೈತರ ಹೊಲಗದ್ದೆಗಳ ಬಾವಿ, ಕೊಳವೆಬಾವಿಯ ಅಂತರ್ಜಲ ಮಟ್ಟ ಹೆಚ್ಚಲು ಸಹಾಯಕವಾಗಲಿದೆ. ಮುನ್ನೋಳ್ಳಿ ಗ್ರಾಮದಲ್ಲಿನ ಕೊಳವೆ ಬಾವಿಗೆ ನೀರಿನ ಅಭಾವ ಹೆಚ್ಚಿತ್ತು. ‘ಕೆರೆ ಭರ್ತಿಯಿಂದ ಮುಂದಿನ ದಿನಗಳಲ್ಲಿ ಅಂತರ್ಜಲದ ಪ್ರಮಾಣದಲ್ಲಿ ಏರಿಕೆ ಕಾಣಲಿದೆ’ ಎಂದು ಗ್ರಾಮದ ಮುಖಂಡ ಮಹಾದೇವ ಗುಂಡೂರೆ ತಿಳಿಸಿದರು.

ADVERTISEMENT

ಹಳೆಯ ಕೆರೆಗೆ ಈಗ ಕಲ್ಲಿನ ತಡೆಗೋಡೆ ನಿರ್ಮಾಣ, ಸಂಪೂರ್ಣ ಹೂಳೆತ್ತುವ ಜತೆಗೆ ಕೆರೆಯಲ್ಲಿ ತಗ್ಗು ತೆಗೆದ ಪರಿಣಾಮ ಮೂರು ಪಟ್ಟು ನೀರು ಕೆರೆಯಲ್ಲಿ ಭರ್ತಿಯಾಗಿದೆ. ಮುನ್ನೋಳ್ಳಿ ಗ್ರಾಮ ಪಂಚಾಯಿತಿಯೂ ಸಹ ಕೆರೆ ಸುತ್ತಲೂ ತಂತಿ ಬೇಲಿ ನಿರ್ಮಿಸುವ ಜತೆಗೆ ಗಿಡಮರ ಬೆಳೆಸುವ ಉದ್ದೇಶದಿಂದ ಯೋಜನೆ ರೂಪಿಸಿದೆ. ಕೆರೆ ಸ್ವಚ್ಛತೆ ಹಾಗೂ ಸೌಂದರ್ಯ ಹೆಚ್ಚಿಸಲು ಮುಂದಿನ ದಿನಗಳಲ್ಲಿ ಬಟ್ಟೆ ತೊಳೆಯಲು ಹಾಗೂ ಜಾನುವಾರುಗಳಿಗೆ ನೀರಿನ ತೊಟ್ಟಿ ಕೆರೆ ಹೊರಭಾಗದಲ್ಲಿ ನಿರ್ಮಿಸಲಾಗುವುದು’ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗೇಶಮೂರ್ತಿ ತಿಳಿಸಿದರು.

ಪ್ರಸ್ತುತ ಮೊದಲ ಮಳೆಗೆ ಕೆರೆ ಸಂಪೂರ್ಣ ಭರ್ತಿಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರೂ ಸಹ ಕೆರೆಗೆ ಆಗಮಿಸಿ ತುಂಬಿದ ಕೆರೆ ವೀಕ್ಷಿಸಿ ಖುಷಿಪಟ್ಟು ಗ್ರಾಮ ಪಂಚಾಯಿತಿ ಹಾಗೂ ಧರ್ಮಸ್ಥಳದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಮುನ್ನೋಳ್ಳಿ ಕೆರೆ ಇದ್ದರೂ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಅದರ ಸದುಪಯೋಗ ಮಾಡಿಕೊಂಡಿರಲಿಲ್ಲ ಈಗ ಕೆರೆ ಜೀರ್ಣೋದ್ಧಾರ ಕಾರ್ಯದಿಂದ ಕೆರೆಗೆ ಹೊಸ ರೂಪ ಬಂದಿದೆ ಗ್ರಾಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ
ಶಿವಪುತ್ರಪ್ಪ ಪಾಟೀಲ, ರೈತ ಮುಖಂಡ ಮುನ್ನೋಳ್ಳಿ
Quote - ಬೇಸಿಗೆಯಲ್ಲಿ ನರೇಗಾ ಯೋಜನೆಯಡಿ ಕೆರೆ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿದೆ. ಶಾಸಕರ ಅನುದಾನದಲ್ಲಿ ಕೆರೆ ಅಭಿವೃದ್ಧಿ ಹಾಗೂ ಕೆರೆ ಸೌಂದರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.
ರಾಜಕುಮಾರ ಚವ್ಹಾಣ, ಅಧ್ಯಕ್ಷ ಗ್ರಾ.ಪಂ. ಮುನ್ನೋಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.