ADVERTISEMENT

ಉತ್ತರ ಭಾರತದ 8 ಭಾಷೆಗಳಿಗೆ ಉತ್ತರ ಕರ್ನಾಟಕವೇ ನೆಲೆ!

ಕಲಬುರಗಿ, ಬೀದರ್, ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಹಲವು ಭಾಷೆಗಳ ಸಂಗಮ

ಮನೋಜ ಕುಮಾರ್ ಗುದ್ದಿ
Published 26 ನವೆಂಬರ್ 2024, 4:45 IST
Last Updated 26 ನವೆಂಬರ್ 2024, 4:45 IST
<div class="paragraphs"><p>ಉತ್ತರ ಕರ್ನಾಟಕ&nbsp;</p></div>

ಉತ್ತರ ಕರ್ನಾಟಕ 

   

ಪ್ರಾತಿನಿಧಿಕ ಚಿತ್ರ

ಕಲಬುರಗಿ: ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಪ್ರಮುಖ ಭಾಷೆಗಳಾದ ಲಂಬಾಣಿ, ಹಿಂದಿ, ಉರ್ದು, ಗುಜರಾತಿ, ಮಾರ್ವಾರಿ, ಬಂಗಾಳಿ, ರಾಜಸ್ಥಾನಿ, ಸಿಂಧಿ ಭಾಷೆ ಮಾತನಾಡುವವರು ರಾಜ್ಯದ ದಕ್ಷಿಣದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಕುತೂಹಲಕಾರಿ ಅಂಶವನ್ನು ಸಂಶೋಧನೆಯೊಂದು ಹೊರಗೆಡವಿದೆ.

ADVERTISEMENT

ಅದರಲ್ಲೂ ಧಾರವಾಡ ಜಿಲ್ಲೆ ಉತ್ತರದ ನಾಲ್ಕು ಪ್ರಮುಖ ಭಾಷೆಗಳಾದ ಗುಜರಾತಿ, ಮಾರ್ವಾರಿ, ಪಂಜಾಬಿ ಮತ್ತು ರಾಜಸ್ಥಾನಿ ಭಾಷಿಕರಿಗೆ ನೆಲೆ ಒದಗಿಸಿದೆ. ಕಲ್ಯಾಣ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಹಿಂದಿ, ರಾಯಚೂರಿನಲ್ಲಿ ಬಂಗಾಲಿ, ಕಿತ್ತೂರು ಕರ್ನಾಟಕದ ಬೆಳಗಾವಿಯಲ್ಲಿ ಸಿಂಧಿ ಹಾಗೂ ವಿಜಯಪುರ ಜಿಲ್ಲೆ ಅತಿ ಹೆಚ್ಚು ಲಂಬಾಣಿ ಭಾಷಿಕರಿರುವ ಜಿಲ್ಲೆಯಾಗಿ ಗುರುತಿಸಿಕೊಂಡಿವೆ.

ಕಲಬುರಗಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರಾಗಿರುವ ಭಾಷಾ ವಿಜ್ಞಾನಿ ಪ್ರೊ. ಬಸವರಾಜ ಕೋಡಗುಂಟಿ ಅವರು ಉತ್ತರ ಭಾರತದಲ್ಲಿ ಪ್ರಮುಖವಾಗಿ ಬಳಕೆಯಲ್ಲಿರುವ 11 ಭಾಷೆಗಳ ಕುರಿತು ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.

ರಾಜ್ಯದ ರಾಜಧಾನಿ ಬೆಂಗಳೂರು ಹೆಚ್ಚಿನ ಉದ್ಯೋಗ ಸೃಷ್ಟಿ ಮಾಡುತ್ತಿರುವುದರಿಂದ ಉತ್ತರ ಭಾರತದ ಹಲವು ಭಾಷಿಕರು ಅಲ್ಲಿ ನೆಲೆಸಿರುವುದು ಸಹಜ ಪ್ರಕ್ರಿಯೆ. ಆದರೆ, ಉದ್ಯೋಗ ಸೃಷ್ಟಿಯಂತಹ ಹೇಳಿಕೊಳ್ಳುವಂತಹ ಆಕರ್ಷಣೆಗಳಿಲ್ಲದ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಉತ್ತರ ಭಾರತದ ಭಾಷಿಕರು ನೆಲೆ ನಿಂತಿದ್ದಾರೆ. ಇದಕ್ಕೆ ಹಲವು ಐತಿಹಾಸಿಕ ಕಾರಣಗಳೂ ಇರುವುದನ್ನು ಪ್ರೊ. ಕೋಡಗುಂಟಿ ಅವರು ಪತ್ತೆ ಹಚ್ಚಿದ್ದಾರೆ.

ಕರ್ನಾಟಕವು ಬದಾಮಿ ಚಾಲುಕ್ಯರ ಕಾಲದಿಂದಲೂ ಪಶ್ಚಿಮ ಭಾರತದ ಜೊತೆಗೆ ರಾಜಕೀಯ ಮಾತ್ರವಲ್ಲದೇ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿತ್ತು. ಹೀಗಾಗಿ ಲಂಬಾಣಿ, ಹಿಂದಿ ಮತ್ತು ಗುಜರಾತಿ ಭಾಷೆಗಳ ಪ್ರಸರಣ ಈ ಭಾಗದಲ್ಲಿ ವ್ಯಾಪಕವಾಗಿ ಆಗಿದೆ. ಲಂಬಾಣಿ ಮತ್ತು ಗುಜರಾತಿಗಳು ಮಧ್ಯಕಾಲದಿಂದಲೂ ಕರ್ನಾಟಕಕ್ಕೆ ವಲಸೆ ಬಂದಿದ್ದಾರೆ. ಇತ್ತೀಚಿನ ದಶಕಗಳಲ್ಲಿ ರಾಜಸ್ಥಾನಿ, ಪಂಜಾಬಿ, ಮಾರ್ವಾರಿ ಭಾಷೆಗಳು ಈ ನೆಲದ ಜೊತೆಗೆ ಸಂಬಂಧವನ್ನು ಹೊಂದಿದೆ.

ಭಾಷಾ ಸಂಕರದಿಂದ ಹುಟ್ಟಿದ ಮರಾಠಿ, ಉರ್ದು: ಉತ್ತರ ಕರ್ನಾಟಕ ಮತ್ತು ದಕ್ಷಿಣ ಮಹಾರಾಷ್ಟ್ರ ‍‍ಪರಿಸರಗಳು ಒಂದು ವಿಸ್ತಾರವಾದ ಭಾಷಾ ಸಂಪರ್ಕ ಪ್ರದೇಶವನ್ನು ರೂಪಿಸಿದ್ದು, ಮಹಾರಾಷ್ಟ್ರದ ಬಹುಭಾಗ ಹಾಗೂ ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿದ್ದ ಕನ್ನಡದೊಂದಿಗೆ ನಡೆಸಿದ ಅನುಸಂಧಾನವು ಮರಾಠಿ ಭಾಷೆಯಾಗಿ ಬೆಳೆಯುವುದಕ್ಕೆ ಪೂರಕವಾಯಿತು ಎನ್ನುತ್ತಾರೆ ಪ್ರೊ. ಬಸವರಾಜ ಕೋಡಗುಂಟಿ.

ಅದಕ್ಕಾಗಿಯೇ ಮಹಾರಾಷ್ಟ್ರದ ಗಡಿಯೊಂದಿಗೆ ಬೆಸೆದುಕೊಂಡಿರುವ ಬೆಳಗಾವಿ, ವಿಜಯಪುರ, ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ಮರಾಠಿ ಭಾಷೆಯಲ್ಲಿ ಹಾಸುಹೊಕ್ಕಾದ ಪದಗಳು ಸಹಜ ಕನ್ನಡವೆಂಬಂತೆ ಕೇಳಿ ಬರುತ್ತವೆ.

ಹೈದರಾಬಾದ್ ನಿಜಾಮರ ಆಳ್ವಿಕೆಗೆ ಒಳಪಟ್ಟಿದ್ದ ರಾಜ್ಯದ ಬೀದರ್, ಕಲಬುರಗಿ, ರಾಯಚೂರು ಸೀಮೆಗಳಲ್ಲಿ ಅರಬ್‌ ದೇಶದಿಂದ ಬಂದ ಪರ್ಷಿಯನ್ ಭಾಷೆಯು ಈ ನೆಲದ ಕನ್ನಡದೊಂದಿಗೆ ಬೆರೆತು ಉರ್ದು ಭಾಷೆ ಹುಟ್ಟಲು ಕಾರಣವಾಯಿತು ಎನ್ನುತ್ತವೆ ಸಂಶೋಧನೆಗಳು.

ರಾಜ್ಯದಲ್ಲಿ 25 ಪ್ರಮುಖ ಭಾಷೆ

ಕರ್ನಾಟಕದಲ್ಲಿ 10 ಸಾವಿರಕ್ಕಿಂತ ಹೆಚ್ಚು ಜನ ಕನ್ನಡ, ಉರ್ದು, ತೆಲುಗು, ತಮಿಳು, ಮರಾಠಿ, ತುಳು, ಲಂಬಾಣಿ, ಹಿಂದಿ, ಕೊಂಕಣಿ, ಮಲಯಾಳಂ, ಗುಜರಾತಿ, ಕೊಡವ, ಮಾರ್ವಾರಿ, ಬಂಗಾಳಿ, ಒಡಿಯಾ, ಆರೆ, ಟಿಬೆಟನ್, ಯರವ, ಪಂಜಾಬಿ, ರಾಜಸ್ಥಾನಿ, ಇಂಗ್ಲಿಷ್, ನೇಪಾಳಿ, ಕುರುಬ, ಸಿಂಧಿ ಮತ್ತು ನವಾಯತಿ ಭಾಷೆಗಳನ್ನು ಮಾತನಾಡುತ್ತಾರೆ.

ಇಂಡೊ–ಆರ್ಯನ್ ಕುಲದ ಭಾಷೆಗಳಾದ ಉರ್ದು, ಮರಾಠಿಯನ್ನು ಉತ್ತರ ಕರ್ನಾಟಕದಲ್ಲಿ ಹೆಚ್ಚು ಬಳಕೆ ಮಾಡಿದರೆ, ಕೊಂಕಣಿ, ಆರೆ ಮತ್ತು ನವಾಯತಿ ಭಾಷೆಗಳನ್ನು ಕರಾವಳಿ ಜಿಲ್ಲೆಗಳಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ. 

ಮರಾಠಿ ಉರ್ದು ಲಂಬಾಣಿ ತೆಲುಗು ಭಾಷೆ ವ್ಯಾಪಕವಾಗಿ ಪಸರಿಸಿದ್ದರಿಂದ ಕಲ್ಯಾಣ ಕರ್ನಾಟಕ ಸಣ್ಣ ಭಾಷಾ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಇತಿಹಾಸದ ಉದ್ದಕ್ಕೂ ಕಾಣಿಸುವ ಸಂಕೀರ್ಣ ರಚನೆ ಇಂದಿಗೂ ಮುಂದುವರಿದಿದೆ.
ಪ್ರೊ.ಬಸವರಾಜ ಕೋಡಗುಂಟಿ, ಭಾಷಾ ವಿಜ್ಞಾನಿ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.