ADVERTISEMENT

₹38 ಸಾವಿರ ದರದ ಲ್ಯಾಪ್‌ಟಾಪ್‌ಗೆ ₹71 ಸಾವಿರ: ಅಕ್ರಮ ನಡೆದಿಲ್ಲ ಎಂದ ಲಾಡ್

₹49.73 ಕೋಟಿ ವೆಚ್ಚದಲ್ಲಿ 7,000 ಲ್ಯಾಪ್‌ಟಾಪ್‌ ಖರೀದಿಸಿರುವ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ

ಮನೋಜ ಕುಮಾರ್ ಗುದ್ದಿ
Published 20 ಜನವರಿ 2024, 22:45 IST
Last Updated 20 ಜನವರಿ 2024, 22:45 IST
ಸಂತೋಷ ಲಾಡ್‌
ಸಂತೋಷ ಲಾಡ್‌   

ಕಲಬುರಗಿ: ಕಟ್ಟಡ ಹಾಗೂ ಇತರ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ವಿತರಿಸಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಮುಕ್ತ ಮಾರುಕಟ್ಟೆಯಲ್ಲಿ ₹38 ಸಾವಿರಕ್ಕೆ ಸಿಗುವ ಲ್ಯಾಪ್‌ಟಾಪ್‌ಗೆ ₹71 ಸಾವಿರ ತೆತ್ತು ಖರೀದಿ ಮಾಡಿರುವ ಸಂಗತಿ ಬೆಳಕಿಗೆ ಬಂದಿದೆ.

2023ರ ಆಗಸ್ಟ್ 11ರಂದು ಮಂಡಳಿಯು ಟೆಂಡರ್‌ನಲ್ಲಿ ಅತಿ ಕಡಿಮೆ ದರಕ್ಕೆ ಬಿಡ್ ಮಾಡಿದ ಬೆಂಗಳೂರಿನ ನೈನ್‌ರಿಚ್ ಇನ್ಫೊಟೆಕ್ ಸಂಸ್ಥೆಯೊಂದಿಗೆ ಎಚ್‌ಪಿ ಕಂಪನಿಯ 7,000 ಲ್ಯಾಪ್‌ಟಾಪ್‌ಗಳನ್ನು ಪೂರೈಕೆ ಮಾಡುವಂತೆ ಒಪ್ಪಂದ ಮಾಡಿಕೊಂಡಿತ್ತು. ಕಲಬುರಗಿ, ಬೆಳಗಾವಿ, ಹಾಸನ, ಬೆಂಗಳೂರು ಪ್ರಾದೇಶಿಕ ಕಚೇರಿ 1 ಹಾಗೂ 2ರ ವ್ಯಾಪ್ತಿಯಲ್ಲಿ ತಲಾ 1,400 ಲ್ಯಾಪ್‌ಟಾಪ್‌ಗಳನ್ನು ಒದಗಿಸುವಂತೆ ಸೂಚಿಸಿತ್ತು. ಇದಕ್ಕಾಗಿ ಪ್ರತಿ ಪ್ರಾದೇಶಿಕ ಕಚೇರಿ ವ್ಯಾಪ್ತಿಯಲ್ಲಿ ₹9.94 ಕೋಟಿ ಮೊತ್ತ ಪಾವತಿಸಿದೆ.

ಈ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ವಿವರಗಳನ್ನು ಪಡೆದಿರುವ ಕಲಬುರಗಿಯ ಕಾರ್ಮಿಕ ಮುಖಂಡ ಹಣಮಂತರಾಯ ಪೂಜಾರಿ ಅವರು, ನೈನ್‌ರಿಚ್‌ ಸಂಸ್ಥೆ ‍ಪೂರೈಸಿರುವ ಲ್ಯಾಪ್‌ಟಾಪ್‌ನ ತಾಂತ್ರಿಕ ವಿವರಗಳನ್ನು ನೀಡಿ ಕಲಬುರಗಿಯ ಲ್ಯಾಪ್‌ಟಾಪ್‌ ಪೂರೈಸುವ ಇಬ್ಬರು ಡೀಲರ್‌ಗಳಿಂದ ದರಪಟ್ಟಿ ತರಿಸಿಕೊಂಡಿದ್ದಾರೆ. ಅದರಲ್ಲಿ ಒಬ್ಬ ಡೀಲರ್ ಪ್ರತಿ ಲ್ಯಾಪ್‌ಟಾಪ್‌ಗೆ ₹38,200 ಹಾಗೂ ಮತ್ತೊಬ್ಬರು ₹38 ಸಾವಿರಕ್ಕೆ ಇದೇ ಮಾದರಿಯ ಲ್ಯಾಪ್‌ಟಾಪ್‌ಗಳನ್ನು ನೀಡುವುದಾಗಿ ದರಪಟ್ಟಿಯಲ್ಲಿ ತಿಳಿಸಿದ್ದಾರೆ. ಅಧಿಕಾರಿಗಳು ದುಬಾರಿ ದರಕ್ಕೆ ಲ್ಯಾಪ್‌ಟಾಪ್ ಖರೀದಿಸುವ ಮೂಲಕ ಮಂಡಳಿಯ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಹಣಮಂತರಾಯ ಪೂಜಾರಿ ಆರೋಪಿಸಿದ್ದಾರೆ.

ADVERTISEMENT

ಎಚ್‌ಪಿ ಕಂಪನಿಯ ಪ್ರೊಸೆಸರ್ ಇಂಟೆಲ್ i3 (10ನೇ ಜನರೇಶನ್), 14 ಇಂಚಿನ ಪರದೆ, 1 ಟಿಬಿ ಹಾರ್ಡ್ ಡಿಸ್ಕ್, 3 ಯುಎಸ್‌ಬಿ ಪೋರ್ಟ್, ಇಂಟೆಗ್ರೇಟೆಡ್ ಎಚ್‌ಡಿ ಗ್ರಾಫಿಕ್ಸ್, ಎಚ್‌ಡಿ ವೆಬ್‌ಕ್ಯಾ‌ಮ್ ಒಳಗೊಂಡ ವಿಂಡೋಸ್ 10 ಸರಣಿಯ ಲ್ಯಾಪ್‌ಟಾಪ್‌ ಒದಗಿಸುವ ಜೊತೆಗೆ 128 ಜಿ.ಬಿ. ಸಾಮರ್ಥ್ಯದ ಪೆನ್‌ಡ್ರೈವ್ ನೀಡುವ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಕಂಪನಿ ನಮೂದಿಸಿರುವ ಬೆಲೆಗಿಂತ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಲ್ಯಾಪ್‌ಟಾಪ್ ಲಭ್ಯವಿದ್ದರೂ ದುಬಾರಿ ದರಕ್ಕೆ ಖರೀದಿ ಮಾಡಲಾಗಿದೆ ಎಂದು ಹಣಮಂತರಾಯ ಆರೋಪಿಸಿದ್ದಾರೆ.

ಲ್ಯಾಪ್‌ಟಾಪ್‌ಗಳು ಈಗಾಗಲೇ ಕಾರ್ಮಿಕ ಅಧಿಕಾರಿಗಳ ಕಚೇರಿಗಳಿಗೆ ಪೂರೈಕೆಯಾಗಿದ್ದು, ವಿದ್ಯಾರ್ಥಿಗಳಿಗೆ ಇನ್ನಷ್ಟೇ ವಿತರಿಸಬೇಕಿದೆ.

ಖರೀದಿಯಲ್ಲಿ ಅಕ್ರಮ ನಡೆದಿಲ್ಲ: ಲಾಡ್

‘ಹಿಂದಿನ ಸರ್ಕಾರದ ಅವಧಿಯಲ್ಲಿಯೇ ಅತಿ ಕಡಿಮೆ ದರ ನಮೂದಿಸಿದವರೊಂದಿಗೆ 7 ಸಾವಿರ ಲ್ಯಾಪ್‌ಟಾಪ್‌ಗಳ ಪೂರೈಕೆಗೆ ಒಪ್ಪಂದವಾಗಿತ್ತು. ನಿಯಮಾನುಸಾರ ಟೆಂಡರ್ ಪ್ರಕ್ರಿಯೆ ನಡೆದಿದ್ದರಿಂದ ನಾವೂ ಲ್ಯಾಪ್‌ಟಾಪ್ ಖರೀದಿಗೆ ಒಪ್ಪಿಗೆ ನೀಡಿದ್ದೇವೆ. ಇದರಲ್ಲಿ ಅಕ್ರಮ ನಡೆದಿಲ್ಲ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದರು. ಈ ಕುರಿತು ‘ಪ್ರಜಾವಾಣಿ’ಗೆ ಸ್ಪಷ್ಟನೆ ನೀಡಿದ ಅವರು ‘ಲ್ಯಾಪ್‌ಟಾಪ್‌ನ ಮೂಲಬೆಲೆ ₹42 ಸಾವಿರ. ವಾರಂಟಿಗೆ ₹3600 ಆಂಟಿವೈರಸ್ ಅಳವಡಿಕೆಗೆ ₹1330 128 ಜಿಬಿ ಪೆನ್‌ಡ್ರೈವ್‌ಗೆ ₹1 ಸಾವಿರ ಲ್ಯಾಪ್‌ಟಾಪ್‌ನಲ್ಲಿ ಸಿಲೆಬಸ್‌ ಅಳವಡಿಸಲು ₹7686 ಎಂಡಿಎಂ ಸಾಫ್ಟ್‌ವೇರ್‌ಗೆ ₹2370 ಹಾಗೂ ಜಿಎಸ್‌ಟಿ ಶುಲ್ಕ ಸೇರಿ ಪ್ರತಿ ಲ್ಯಾಪ್‌ಟಾಪ್‌ಗೆ ₹71 ಸಾವಿರ ಆಗಲಿದೆ’ ಎಂದರು. ‘ಮಂಡಳಿಯಿಂದ ಇನ್ನು ಮುಂದೆ ಲ್ಯಾಪ್‌ಟಾಪ್‌ ಖರೀದಿಸುವ ಪ್ರಸ್ತಾವ ನಮ್ಮ ಮುಂದೆ ಇಲ್ಲ’ ಎಂದು ಸಚಿವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.