ADVERTISEMENT

ಮಳೆಗೆ ಸೋರುತ್ತಿರುವ ಕೆಕೆಆರ್‌ಟಿಸಿ ಬಸ್!

​ಪ್ರಜಾವಾಣಿ ವಾರ್ತೆ
Published 1 ಜುಲೈ 2024, 5:48 IST
Last Updated 1 ಜುಲೈ 2024, 5:48 IST
ಕೆಕೆಆರ್‌ಟಿಸಿ ಬಸ್‌ನಲ್ಲಿ ಸೋರಿಕೆಯಾದ ಮಳೆ ನೀರು
ಕೆಕೆಆರ್‌ಟಿಸಿ ಬಸ್‌ನಲ್ಲಿ ಸೋರಿಕೆಯಾದ ಮಳೆ ನೀರು   

ಕಲಬುರಗಿ: ಕಲಬುರಗಿ–ಬೆಂಗಳೂರು ನಡುವೆ ಸಂಚರಿಸುವ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (ಕೆಕೆಆರ್‌ಟಿಸಿ) ನಾನ್‌ ಎ.ಸಿ. ಸ್ಲೀಪರ್ ಬಸ್‌ನಲ್ಲಿ ಮಳೆ ನೀರು ಸೋರುತ್ತಿದೆ ಎಂದು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದರು.

ಕೆಎ 32ಎಫ್‌ 1121 ಬಸ್‌ನ ಸೀಟ್ ನಂಬರ್‌ 14 ಮತ್ತು 15ರ ಮೇಲೆ ಜೋಡಿಸಿರುವ ಕಾರ್ಯನಿರ್ವಹಿಸದ ಎ.ಸಿ. ಮತ್ತು ಲೈಟ್‌ ಮೂಲಕ ಮಳೆಯ ನೀರು ಹನಿ ಹನಿಯಾಗಿ ಒಳಬರುತ್ತಿದೆ. ದೂರದ ಬೆಂಗಳೂರಿಗೆ ಮಳೆಯ ನೀರಿನ ಸೀಟ್‌ನಲ್ಲಿ ಮಲಗಿ ಪ್ರಯಾಣಿಸುವ ಅನಿವಾರ್ಯತೆ ಬಂದಿದೆ ಎಂದು ಬೆಂಗಳೂರು ಮೂಲದ ಪ್ರಯಾಣಿಕ ಪದ್ಮನಾಭ ಅಲವತ್ತುಕೊಂಡರು.

‘ವಾರದ ರಜೆ ಭಾನುವಾರ ಇರುವುದರಿಂದ ರೈಲಿನ ಸೀಟ್‌ಗಳು ಸಿಗಲಿಲ್ಲ. ಬೆಳಿಗ್ಗೆ ಬೇಗ ಬೆಂಗಳೂರು ತಲುಪಿ ನಿಗದಿತ ಕೆಲಸದಲ್ಲಿ ತೊಡಗಿಸಿಕೊಳ್ಳಲು ಕೆಕೆಆರ್‌ಟಿಸಿಯ ಎ.ಸಿ. ಸ್ಲೀಪರ್‌ ಬಸ್‌ಗೆ ₹1,150 ಕೊಟ್ಟು ಸೀಟ್‌ ಬುಕ್ ಮಾಡಿದೆ. ಬಸ್‌ ಹತ್ತುವಾಗ ಎ.ಸಿ. ಸ್ಲೀಫರ್‌ ಬಸ್ ಫೇಲಾಗಿದೆ ಎಂದು ನಾನ್‌ ಎ.ಸಿ. ಸ್ಲೀಪರ್‌ ಬಿಟ್ಟಿದ್ದಾರೆ. ಮಳೆ ನೀರು ಬಸ್‌ ಒಳಗೆ ಸೋರಿಕೆಯಾಗುತ್ತಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ನಿಕಟ ಪೂರ್ವ ಅಧ್ಯಕ್ಷ ವೀರಭದ್ರ ಸಿಂಪಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಕೊರೊನಾ ಅವಧಿಯಲ್ಲಿ ಬಳಸಿದ್ದ ಬಸ್‌ ಅನ್ನೇ ಸ್ವಲ್ಪ ಬದಲಾವಣೆ ಮಾಡಿ ಬೆಂಗಳೂರು– ಕಲಬುರಗಿ ನಡುವಿನ ಪ್ರಯಾಣಕ್ಕೆ ಬಿಟ್ಟಿದ್ದಾರೆ. ಬಸ್‌ನಲ್ಲಿ ಸರಿಯಾದ ಸೌಕರ್ಯಗಳಲ್ಲಿ. ಎ.ಸಿ. ಸೀಟ್‌ಗೆ ದುಡ್ಡು ಕೊಟ್ಟು ಅವ್ಯವಸ್ಥೆಯ ಬಸ್‌ನಲ್ಲಿ ಪ್ರಯಾಣಿಸುವಂತೆ ಆಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕೆಕೆಆರ್‌ಟಿಸಿಯ ಸಾರಿಗೆ ವಿಭಾಗದ ಅಧಿಕಾರಿ ನಾರಾಯಣ, ‘ಬೆಂಗಳೂರಿಗೆ ನಿಗದಿಯಾಗಿದ್ದ ಎ.ಸಿ. ಸ್ಲೀಪರ್ ಬಸ್‌ನ ಬ್ರೇಕ್ ಫೇಲಾಗಿತ್ತು. ಪ್ರಯಾಣಿಕರಿಗೆ ಅನಾನುಕೂಲ ಆಗದಿರಲಿ ಎಂದು ನಾನ್‌ ಎ.ಸಿ. ಸ್ಲೀಪರ್‌ ಬಸ್‌ ವ್ಯವಸ್ಥೆ ಮಾಡಿದ್ದೇವೆ’ ಎಂದರು.

ಕೆಕೆಆರ್‌ಟಿಸಿ ಬಸ್‌ ಸೀಟ್‌ ಮಳೆ ನೀರಿನಿಂದ ತೊಯ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.