ADVERTISEMENT

ಚಿತ್ತಾಪುರ | ಚಿರತೆ ದಾಳಿಗೆ ಆಕಳು ಬಲಿ: ಅರ್ಧ ಕಳೇಬರ ಪತ್ತೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2024, 8:21 IST
Last Updated 22 ಜುಲೈ 2024, 8:21 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಚಿತ್ತಾಪುರ(ಕಲಬುರಗಿ ಜಿಲ್ಲೆ): ತಾಲ್ಲೂಕಿನ ಯಾಗಾಪುರ ಗುಡ್ಡದಲ್ಲಿ ಚಿರತೆಯು ಆಕಳ ಮೇಲೆ ದಾಳಿ ಮಾಡಿ ಕೊಂದು ತಿಂದಿರುವ ಪ್ರಕರಣ ಸೋಮವಾರ ಬೆಳಕಿಗೆ ಬಂದಿದೆ.

ಗ್ರಾಮದ ಬಸಲಿಂಗಪ್ಪ ಮೋಟ್ನಳ್ಳಿ ಅವರಿಗೆ ಸೇರಿದ ಆಕಳು ಚಿರತೆಗೆ ಬಲಿಯಾಗಿದೆ. ಭಾನುವಾರ ದನಕರುಗಳನ್ನು ಮೇಯಿಸಲೆಂದು ಗುಡ್ಡದಲ್ಲಿ ಹೊಡೆದುಕೊಂಡು ಹೋಗಲಾಗಿತ್ತು. ಸಂಜೆ ಮನೆಗೆ ಮರಳಿ ಬಂದಾಗ ಆಕಳೊಂದು ಬಂದಿಲ್ಲ ಎಂಬುದು ಗೊತ್ತಾಗಿದೆ.

ADVERTISEMENT

ಸೋಮವಾರ ಬೆಳಿಗ್ಗೆ ಮೊಟ್ನಳ್ಳಿ ಕುಟುಂಬದವರು ಗುಡ್ಡದಲ್ಲಿ ಆಕಳನ್ನು ಹುಡುಕುತ್ತಿರುವಾಗ ಆಕಳ ಅರ್ಧ ಕಳೇಬರ ಕಂಡು ಬಂದಿದೆ ಎಂದು ಗ್ರಾಮದ ರಾಜಕುಮಾರ ಅವರು 'ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ಕಳೆದ ಜೂ.22ರಂದು ಆಹಾರ ಅರಸಿಕೊಂಡು ಗುಡ್ಡದ ಅರಣ್ಯದೊಳಗಿಂದ ಹೊರಗೆ ಬಂದಿದ್ದ ಚಿರತೆಯೊಂದು ಹೋರಿಯ ಮೇಲೆ ದಾಳಿ ಮಾಡಿ ಕತ್ತಿಗೆ ಗಂಭೀರವಾಗಿ ಗಾಯಗೊಳಿಸಿತ್ತು. ಮರುದಿನ ದನಗಾಯಿಗಳಿಗೆ ಚಿರತೆ ಕಂಡು ಬಂದಿತ್ತು. ಈಗ ಮತ್ತೆ ಆಕಳು ಬಲಿಯಾಗಿದ್ದು ದನಗಾಯಿಗಳಿಗೆ, ರೈತರಿಗೆ, ಕೃಷಿಕೂಲಿಕಾರರಿಗೆ ಆತಂಕವುಂಟು ಮಾಡಿದೆ.

ಹೋರಿಯ ಮೇಲೆ ದಾಳಿ ಮಾಡಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ಗುಡ್ಡದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಆಯಕಟ್ಟಿನ ಜಾಗ ಗುರುತಿಸಿ ಗುಡ್ಡದಲ್ಲಿ ಕಬ್ಬಿಣದ ಬೋನು ಅಳವಡಿಸಲಾಗಿತ್ತು. ಆದರೆ, ಚಿರತೆ ಪತ್ತೆಯಾಗಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.