ಕಲಬುರಗಿ: ‘ಜಿಲ್ಲೆಯ ಎಲ್ಲ ಅಂಗವಿಕಲರಿಗೆ ಹೆಚ್ಚಿನ ಸ್ಥಾನಮಾನಗಳು ದೊರೆಯಬೇಕು. ಪ್ರತಿಯೊಬ್ಬರೂ ಕ್ರೀಡೆ ಹಾಗೂ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸ್ಫೂರ್ತಿ ಮೆರೆಯಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ ಹೇಳಿದರು.
ಇಲ್ಲಿನ ಚಂದ್ರಶೇಖರ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ ಹಾಗೂ ಅಂಗವಿಕಲರ ಸಂಘ, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಎಂ.ಆರ್.ಡಬ್ಲ್ಯು, ಯು.ಆರ್.ಡಬ್ಲ್ಯು, ವಿ.ಆರ್.ಡಬ್ಲ್ಯು ಅವರ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ನಿಮಿತ್ತ ಅಂಗವಿಕಲರಿಗಾಗಿ ಹಮ್ಮಿಕೊಂಡಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿದರು.
‘ಅಂಗವಿಕಲರು ವಿದ್ಯಾಭ್ಯಾಸದ ಜತೆಗೆ ಕ್ರೀಡೆಗಳಲ್ಲಿ ಭಾಗವಹಿಸಬೇಕು. ಕ್ರೀಡೆಯಲ್ಲಿ ಸೋಲು–ಗೆಲುವು ಸಾಮಾನ್ಯ. ಭಾಗವಹಿಸುವುದು ಮುಖ್ಯ. ಜತೆಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಜೀವನದಲ್ಲಿ ಉನ್ನತಿ ಸಾಧಿಸಬೇಕು’ ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಮಾತನಾಡಿ, ‘ಅಂಗವಿಕಲ ಮಕ್ಕಳ ಶಾಲೆ ನಡೆಸುವುದು ಸುಲಭವಲ್ಲ. ಸರ್ಕಾರದಿಂದ ಹೆಚ್ಚಿನ ಸೌಲಭ್ಯಗಳು ದೊರೆಯಬೇಕಿದೆ’ ಎಂದು ಹೇಳಿದರು.
ಕಲಬುರಗಿ–ಹೈದರಾಬಾದ್ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಸ್ಥೆಯ ದತ್ತು ಅಗರವಾಲ್ ಮತ್ತು ಅಂತರರಾಷ್ಟ್ರೀಯ ಕ್ರೀಡಾಪಟು ರಮೇಶ ಜಾಧವ ಮಾತನಾಡಿದರು.
ಕ್ರಿಕೆಟ್, ಓಟ, ಶಾಟ್‌ಪಟ್, ಡಿಸ್ಕಸ್ ಥ್ರೋ, ಲಾಂಗ್ ಜಂಪ್, ಮ್ಯೂಜಿಕಲ್ ಚೇರ್, ಗಾಯನ ಸ್ಪರ್ಧೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಅಂಗವಿಕಲರು ಪಾಲ್ಗೊಂಡಿದ್ದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ ಕೆ. ಕಲಬುರಗಿ ವಿನಾಯಕ ಎಜುಕೇಷನಲ್ ಸೂಸೈಟಿಯ ಶ್ರೀಮಂತ ರೇವೂರ, ಶ್ರೀಯಾನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜು ಶಾಖಾಪುರ, ಅಂಗವಿಕಲರ ಪುನರ್ವವಸತಿ ಕೇಂದ್ರ ನೋಡಲ್ ಅಧಿಕಾರಿ ಪ್ರಕಾಶ ದ್ಯಾಬೇರಿ, ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ ಭಜಂತ್ರಿ, ‘ಕಿವುಡ ಮಕ್ಕಳ ಸರ್ಕಾರಿ ಶಾಲೆ’ಯ ಅಧೀಕ್ಷಕ ಲೋಕೇಶ, ಎಲ್ಲ ತಾಲ್ಲೂಕಿನ ಎಂ.ಆರ್.ಡಬ್ಲ್ಯು ಸೇರಿದಂತೆ ಅಧಿಕಾರಿಗಳು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.