ವಾಡಿ (ಕಲಬುರಗಿ ಜಿಲ್ಲೆ): ‘ಬೌದ್ಧ ನಿಧಿಯನ್ನು ತನ್ನ ಒಡಲಾಳದಲ್ಲಿ ಅಡಗಿಸಿಕೊಂಡಿರುವ ಸನ್ನತಿ ಗ್ರಾಮದಲ್ಲಿ ಉತ್ಖನನ ಹಾಗೂ ಸಂರಕ್ಷಣೆ ಸಮರೋಪಾದಿಯಲ್ಲಿ ನಡೆಯಬೇಕು. ಕೃಷ್ಣಾ ನದಿ ದಂಡೆಯಲ್ಲಿರುವ ನಾಗಾರ್ಜುನ ಸಾಗರದಲ್ಲಿ ತೆಲಂಗಾಣ ಸರ್ಕಾರ ನಿರ್ಮಿಸಿರುವ ‘ಬುದ್ಧ ವನಂ’ ಮಾದರಿಯಲ್ಲಿ ಬೌದ್ಧ ಪರಂಪರೆಯ ಥೀಮ್ ಪಾರ್ಕ್ ನಿರ್ಮಿಸಬೇಕು’ ಎಂದು ಭಂತೆ ಬೋಧಿದತ್ತ ಥೇರೋ ಒತ್ತಾಯಿಸಿದರು.
ಸನ್ನತಿ ಗ್ರಾಮದ ಐತಿಹಾಸಿಕ ಬೌದ್ಧ ಸ್ಥಳ ಅಧೋಲೋಕ ಮಹಾಚೈತ್ಯದಿಂದ ವಿಧಾನಸೌಧ
ದವರೆಗೆ ಹಮ್ಮಿಕೊಂಡಿರುವ ‘ಪಂಚಶೀಲ ಪಾದಯಾತ್ರೆ’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.
‘ಕನಿಷ್ಠ ₹500 ಕೋಟಿ ಅನುದಾನ ಬಿಡುಗಡೆ ಮಾಡಿ, 200 ಎಕರೆ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಮಾಡಬೇಕು. ಬೌದ್ಧ ಅಭಿವೃದ್ಧಿ ಪ್ರಾಧಿಕಾರ ರಚಿಸಿ ₹1,000 ಕೋಟಿ ಅನುದಾನ ಮೀಸಲಿಡಬೇಕು. ಬುದ್ಧ ಪೂರ್ಣಿಮೆಯ ದಿನವನ್ನು ರಾಷ್ಟ್ರೀಯ ರಜಾ ದಿನವಾಗಿ ಘೋಷಿಸಬೇಕು’ ಎಂದು ಅವರು ಆಗ್ರಹಿಸಿದರು.
‘ಕರ್ನಾಟಕದಲ್ಲಿ ದೊರೆತಿರುವ ಸಾಮ್ರಾಟ್ ಅಶೋಕನ ಶಾಸನಗಳನ್ನು ಸಂರಕ್ಷಿಸಬೇಕು. ಶಹಾಪುರದಲ್ಲಿ ಬುದ್ಧ ಮಲಗಿದ ಬೆಟ್ಟ ಅಭಿವೃದ್ಧಿಪಡಿಸಬೇಕು. 18 ವರ್ಷಗಳ ಹಿಂದೆ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಿದ್ದು, ಬೇರೆ ಪ್ರಾಧಿಕಾರಗಳ ರೀತಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ ಎನ್ನುವುದು ವಿಷಾದದ ಸಂಗತಿ’ ಎಂದರು.
‘ಇಂದಿನಿಂದ ನಿರಂತರ 70 ದಿನಗಳ ಕಾಲ ನಡೆಯುವ ಪಂಚಶೀಲ ಪಾದಯಾತ್ರೆ ಸುಮಾರು ಒಂದು ಸಾವಿರ ಕಿ.ಮೀ ಸಾಗಲಿದೆ. ಈ ಯಾತ್ರೆ ಸಾಮ್ರಾಟ್ ಅಶೋಕ್ ಚಕ್ರವರ್ತಿಯ ಒಂಬತ್ತು ಐತಿಹಾಸಿಕ ಸ್ಥಳಗಳ ಮೂಲಕ ಹಾದು ಹೋಗಲಿದೆ. ಜೊತೆಗೆ ದಾರಿಯುದ್ದಕ್ಕೂ ಹಲವು ಉಪಾಸಕರಿಗೆ ಬೌದ್ಧ ಧರ್ಮ ದೀಕ್ಷೆ ನೀಡಲಾಗುವುದು. ನಾಡಿನ ಜನತೆಗೆ ಬೌದ್ಧ ಧರ್ಮದ ಅರಿವು ಮೂಡಿಸುವ ಮಹಾದಾಸೆ ಪಂಚಶೀಲ ಪಾದಯಾತ್ರೆ ಯದಾಗಿದೆ’ ಎಂದು ಹೇಳಿದರು.
ಅಣದೂರ (ಬೀದರ್) ಭಂತೆ ದಮ್ಮಾನಂದ ಮಹಾಥೇರೋ, ಭಂತೆ ಜ್ಞಾನಸಾಗರ ಥೇರೋ, ಭಂತೆ ವರಜ್ಯೋತಿ, ಭಂತೆ ಧಮ್ಮದೀಪ ಪಂಚಶೀಲ ಬೋಧಿಸಿದರು.
ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರಿಯಪ್ಪ ಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾರತೀಯ ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಸೂರ್ಯಕಾಂತ ನಿಂಬಾಳಕರ, ನೀಲಕಂಠ ಬಡಿಗೇರ, ಮರಿಯಪ್ಪ ಚಟ್ಟೆರ್ಕರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಸವರಾಜ ಬೆಣ್ಣೂರಕರ ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.