ಚಿತ್ತಾಪುರ: ‘ನಾಡಿನಲ್ಲಿ ಮಠಗಳಿಗೆ ತನ್ನದೆಯಾದ ಪರಂಪರೆ, ಮಹತ್ವವಿದೆ. ಸಮಾಜದ ಸರ್ವಜನಾಂಗಕ್ಕೂ ಸರಿಯಾದ ಮಾರ್ಗ ತೋರುವ ಗುರುತರ ಹೊಣೆಗಾರಿಕೆ ಮಠಗಳಿಗಿದೆ. ಮಠದ ಪೀಠ ಅಲಂಕರಿಸಿದ ಮಠಾಧೀಶರು ರಾಜಕಾರಣದಿಂದ ದೂರು ಉಳಿದು ಸಮಾಜವನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ಕೆಲಸ ಮಾಡಬೇಕು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವಾನಂದ ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮಂಗಳವಾರ ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ಶಾಸಕ ಪ್ರಿಯಾಂಕ್ ಖರ್ಗೆ ಅವರು ಚಿತ್ತಾಪುರ ಕ್ಷೇತ್ರದ ಎಲ್ಲಾ ಜಾತಿಗಳ ಮಠಗಳ ಸಮಗ್ರ ಅಭಿವೃದ್ಧಿ, ದೇವಸ್ಥಾನಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಅನುದಾನ ಕೊಟ್ಟು ಸಹಕರಿಸಿದ್ದಾರೆ. ದೇವಸ್ಥಾನ ಮತ್ತು ಮಠಗಳ ಬೆಳವಣಿಗೆಗೆ ಹೆಚ್ಚಿನ ಮಹತ್ವ ನೀಡಿದ್ದಾರೆ. ಅನೇಕ ಮಠಗಳು ಅಭಿವೃದ್ಧಿಯ ಪಥದಲ್ಲಿ ಸಾಗಿವೆ. ಪರಿಸ್ಥಿತಿ ಹೀಗಿರುವಾಗ ಪೊಲೀಸ್ ಇಲಾಖೆ ಪ್ರಕಾರ ಆರೋಪಿ ಸ್ಥಾನದಲ್ಲಿರುವ ರೌಡಿಶೀಟರ್ ಮಣಿಕಂಠ ರಾಠೋಡ್ ಅವರ ಪರ ಕೆಲ ಮಠಾಧೀಶರು ನಿಂತಿರುವುದು ಇಡೀ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶಾಸಕ ಪ್ರಿಯಾಂಕ್ ಖರ್ಗೆ ಅವರು ಯಾರ ವಿರುದ್ಧ ಮತ್ತು ಪರವಾಗಿಲ್ಲ. ತಮಗೆ ದೊರೆತಿರುವ ಅಧಿಕಾರವನ್ನು ಸಮಾಜದ ಏಳಿಗೆಗೆ, ಅಭಿವೃದ್ಧಿಗೆ ಬಳಸುತ್ತಿದ್ದಾರೆ. ಯಾರ ವಿರುದ್ಧ ಸೇಡಿನ ಕೆಲಸ ಮಾಡುತ್ತಿಲ್ಲ. ಅಂತಹ ಕೆಲಸಕ್ಕೆ ಅವರ ಬೆಂಬಲವೂ ಇಲ್ಲ. ಆದರೆ ಶಾಸಕ ಪ್ರಿಯಾಂಕ್ ವಿರುದ್ಧ ಆರೋಪ ಮಾಡುವುದು ಸರಿಯಲ್ಲ. ಸಮಾಜಘಾತುಕ ಕೆಲಸದಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಹೊಣೆಗಾರಿಕೆ, ಜವಾಬ್ದಾರಿಪೊಲೀಸ್ ಇಲಾಖೆಗೆ ಇದೆ. ಅದು ಸಮಾಜವನ್ನು ರಕ್ಷಿಸುವ, ಕಾನೂನು ಸುವ್ಯವಸ್ಥೆ ಕಾಪಾಡುವ ಕೆಲಸ ಮಾಡುತ್ತದೆ. ಪೊಲೀಸರ ಕಾನೂನು ಕ್ರಮ ಪ್ರಶ್ನಿಸಲು ನ್ಯಾಯಾಲಯವಿದೆ. ಆದರೆ, ಕಾನೂನು ಪ್ರಕಾರ ಅರೋಪಿ ಸ್ಥಾನದಲ್ಲಿರುವ ಒಬ್ಬ ವ್ಯಕ್ತಿಗೆ ನಿಷ್ಠೆ ತೋರಿಸುವ ಅಥವಾ ರಾಜಕೀಯ ಮುಖಂಡರ, ಸರ್ಕಾರ, ಸಚಿವರ ಮೇಲೆ ಮಠಾಧೀಶರು ಪ್ರಭಾವ ಬೀರುವ ಕೆಲಸ ಮಾಡುವುದು ಸರಿಯಾದ ಮಾರ್ಗವಲ್ಲ ಎಂದು ಅವರು ಹೇಳಿದ್ದಾರೆ.
ರಾಜ್ಯದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದಲ್ಲಿರುವ ಯಾರೇ ತಪ್ಪು ಮಾಡಿದರೂ ಅವರಿಗೆ ಸರಿಯಾದ ಬುದ್ಧಿ ಹೇಳಿ ತಿದ್ದುವ ಸಮಾಜದ ಒಳಿತಿನ ಕೆಲಸವನ್ನು ಮಠಾಧೀಶರಾದವರು ಮಾಡಬೇಕು. ನೂರಾರು ಮಠಗಳು ಅಂತಹ ಒಳಿತನ ಕೆಲಸದಲ್ಲಿ ತೊಡಗಿವೆ. ಸಮಾನತೆಯ ಸಮಾಜದ ನಿರ್ಮಾಣಕ್ಕೆ ಮಠಾಧೀಶರು ಧರ್ಮ,ಜಾತಿ ತಾರತಮ್ಯವಿಲ್ಲದೆ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.