ಕಲಬುರಗಿ: ‘ಮಹರ್ಷಿ ಸವಿತಾ ಸಮಾಜವು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅತಿ ಹಿಂದುಳಿದೆ. ಸಮಾಜದ ಮುಖಂಡರಿಗೆ ರಾಜಕೀಯ ಸ್ಥಾನಮಾನ ನೀಡಿ ಸಮಾಜದ ಅಭಿವೃದ್ಧಿಗೆ ಸರ್ಕಾರ ಶ್ರಮಿಸಬೇಕು’ ಎಂದು ರಾಮನಗರದ ಗೂಡೆಮಾರನಹಳ್ಳಿಯ ಮಹೇಶ್ವರಿ ಅಮ್ಮ ಹೇಳಿದರು.
ನಗರದ ಫಿಲ್ಟರ್‌ಬೆಡ್ ಸಮೀಪದ ಈಶ್ವರ ಪಾರ್ವತಿ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾ ಸವಿತಾ ಸಮಾಜದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಆರ್ಥಿಕವಾಗಿ, ಸಮಾಜಿಕವಾಗಿ ಸವಿತಾ ಸಮಾಜ ಮುಂದೆ ಬರಬೇಕಾದರೆ ಎಲ್ಲರೂ ಶಿಕ್ಷಣವಂತರಾಗಬೇಕು. ಸಮಾಜದ ವಿದ್ಯಾವಂತರು ಶಿಕ್ಷಣ ಬಗ್ಗೆ ಜಾಗೃತಿ ಮೂಡಿಸಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಆಗ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಲು ಸಾಧ್ಯವಿದೆ’ ಎಂದು ಹೇಳಿದರು.
ಸವಿತಾ ಸಮಾಜದ ಜಿಲ್ಲಾ ಘಟಕದ ನೂತನ ಅಧ್ಯಕ್ಷ ಆನಂದ ವಾರಿಕ ಮಾತನಾಡಿ, ‘ರಾಜ್ಯದಲ್ಲಿ ಸುಮಾರು 20 ಲಕ್ಷ ಸವಿತಾ ಸಮಾಜದ ಜನಸಂಖ್ಯೆಯಿದೆ. ಅಭಿವೃದ್ಧಿಗೆ ರಾಜ್ಯ ಸರ್ಕಾರ ಹೆಚ್ಚಿನ ಅನುದಾನವನ್ನು ನೀಡಬೇಕು. ಸವಿತಾ ಮಹರ್ಷಿ ಅಭಿವೃದ್ಧಿ ನಿಗಮಕ್ಕೆ ಈಗ ₹ 5 ಕೋಟಿ ಅನುದಾನ ನಿಗದಿಪಡಿಸಿದೆ. ಸಮಾಜದ ಹೆಚ್ಚಿನ ಜನರಿಗೆ ಅನುಕೂಲವಾಗುತ್ತಿಲ್ಲ. ಆದ್ದರಿಂದ ಸುಮಾರು ₹50 ಕೋಟಿ ಅನುದಾನ ಮೀಸಲಿಡಬೇಕು’ ಎಂದು ಆಗ್ರಹಿಸಿದರು.
‘ನಮ್ಮ ಪಕ್ಕದ ರಾಜ್ಯಗಳಾದ ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಸವಿತಾ ಸಮಾಜಕ್ಕೆ ಬಳಸುವ ಅಶ್ಲೀಲ ಪದ ನಿಷೇಧ ಮಾಡಲಾಗಿದೆ. ಕರ್ನಾಟಕದಲ್ಲಿಯೂ ಆ ಪದವನನ್ನು ನಿಷೇಧ ಮಾಡಬೇಕು. ಬಳಕೆ ಮಾಡಿ ಅಪಮಾನ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಿಬೇಕು’ ಎಂದು ಒತ್ತಾಯಿಸಿದರು.
ಸಮಾಜದ ಮುಖಂಡರಾದ ಮಂಡ್ಯದ ಲೋಕೇಶ, ತುಮಕೂರಿನ ನಾಗರಾಜ, ಕೋಲಾರದ ಶಬರೀಶ, ಬೆಂಗಳೂರಿನ ಅಂಜನಾಮೂರ್ತಿ ಮಾತನಾಡಿ, ‘ಸಮಾಜದ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವವ ಆನಂದ ವಾರಿಕ್ ಅವರಿಗೆ ಸವಿತಾ ಸಮಾಜದ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ನೇಮಕ ಮಾಡಬೇಕು’ ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಮಳಖೇಡ್ ಹಜರತ್ ಸೈಯದ್ ಶಹಾ ಮುಸ್ತಫಾ ಖಾದ್ರಿ ಅವರು ಸಾನ್ನಿಧ್ಯ ವಹಿಸಿದ್ದರು. ರೇವಣಸಿದ್ಧಪ್ಪ ವಾರಿಕ ಅಧ್ಯಕ್ಷತೆ ವಹಿಸಿದ್ದರು.
ಈ ವೇಳೆ ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ್ ಗೋನಾಯಕ, ಸವಿತಾ ಸಮಾಜದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಆಡಕಿ, ಸಮಾಜದ ಗೌರವ ಅಧ್ಯಕ್ಷ ಅಶೋಕ ಮಾನೆ, ಪ್ರಧಾನ ಕಾರ್ಯದರ್ಶಿ ವಿದ್ಯಾಸಾಗರ ಹಾಬಾಳ, ಸೂರ್ಯಕಾಂತ ಬೆಣ್ಣೂರ, ಮೋನಪ್ಪ ಚಿಂಚನಸೂರ, ಚಿಕ್ಕಬಳ್ಳಾಪುರದ ತ್ಯಾಗರಾಜ, ಯಲಹಂಕದ ಸವಿತಾ ಸಮಾಜದ ಕೋಮಲ್, ಮಹೇಶ ಉಜ್ಜಲಿಕರ್, ಹಾಲುಮತ ಸಮಾಜದ ಜಿಲ್ಲಾಧ್ಯಕ್ಷ ಗುರುನಾಥ ಪೂಜಾರಿ, ಎ.ವಿ. ವೆಂಕಟೇಶ, ರಘುಗುಂಡಪ್ಪ, ಜಯರಾಮ ಮಂಡ್ಯ, ರಘುರಂಗನಾಥ್, ರಾಮ ಆಂಜನಪ್ಪ ಇತರರು ವೇದಿಕೆ ಮೇಲಿದ್ದರು.
ಸಮಾರಂಭದಲ್ಲಿ ಮನೂರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಸಾರ್ವಜನಿಕರ ಆರೋಗ್ಯ ತಪಾಸಣೆ, ಅನುಗ್ರಹ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ಉಚಿತ ತಪಾಸಣೆ ಮತ್ತು ಶಸ್ತ್ರಚಿಕಿತ್ಸೆ ಶಿಬಿರ, ಉಚಿತ ಇ–ಶ್ರಮ ಮತ್ತು ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.