ಬಸವಕಲ್ಯಾಣ: ‘ಸರ್ಕಾರ ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಿ ಬಸವಾದಿ ಶರಣರ ವಿಚಾರಗಳನ್ನು ಎತ್ತಿ ಹಿಡಿಯಬೇಕು’ ಎಂದು ಹುಲಸೂರ ಶಿವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.
ನಗರದ ಗುಣತೀರ್ಥವಾಡಿ ಕಲ್ಯಾಣ ಮಹಾಮನೆಯಲ್ಲಿ ಶನಿವಾರ ನಡೆದ ಬಸವ ಜಯಂತಿಯ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜಾಶ್ರಯ ಇಲ್ಲದ್ದರಿಂದ ಬಸವಧರ್ಮಕ್ಕೆ ಹಿನ್ನಡೆಯಾಗಿದೆ. ಲಿಂ.ಮಾತೆ ಮಹಾದೇವಿಯವರು ಲಿಂಗಾಯತ ಧರ್ಮ ಮಾನ್ಯತೆಗಾಗಿ ದೆಹಲಿವರೆಗೂ ಹೋರಾಟ ಕೊಂಡೊಯ್ದು ಇತಿಹಾಸ ನಿರ್ಮಿಸಿದರು. ಶರಣರ ಧ್ಯೇಯ ಸರ್ವ ಸಮಾನತೆ ಆಗಿತ್ತು. ಇದಕ್ಕಾಗಿ ಕಲ್ಯಾಣ ಕ್ರಾಂತಿನಡೆಸಿ ಜಾತ್ಯತೀತ ಸಮಾಜ ನಿರ್ಮಾಣಕ್ಕಾಗಿ ಮೊದಲ ಮುನ್ನುಡಿ ಬರೆದರು'ಎಂದರು.
ನಿಜಲಿಂಗ ಸ್ವಾಮೀಜಿ ಮಾತನಾಡಿ, ‘ಬಸವಪ್ರಭು ಸ್ವಾಮೀಜಿಯವರು ಕಲ್ಯಾಣ ಮಹಾಮನೆ ಕಟ್ಟಿಕೊಂಡು ಬಸವಾದಿ ಶರಣರ ತತ್ವಗಳ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಸ್ವಾಮೀಜಿಯವರು ಜಂಗಮದೀಕ್ಷೆ ಪಡೆದು 16 ವರ್ಷವಾಗಿದ್ದು ನಿಜ ಜಂಗಮರಾಗಿ ಉತ್ತಮ ಸೇವೆಗೈಯುತ್ತಿದ್ದಾರೆ’ ಎಂದರು.
ತಹಶೀಲ್ದಾರ್ ಶಿವಾನಂದ ಮೇತ್ರೆ ಮಾತನಾಡಿ, ‘ಬಸವಣ್ಣನವರ ಸಮಾನತೆಯ ತತ್ವವನ್ನು ಕೇವಲ ವೇದಿಕೆಗೆ ಸೀಮಿತಗೊಳಿಸದೆ ಅದನ್ನು ಆಚರಣೆಯಲ್ಲಿ ತರಬೇಕು. ಆಗ ಮಾತ್ರ ಇತರರೂ ಅದನ್ನು ಅನುಸರಿಸುವರು' ಎಂದರು.
ಬಸವಪ್ರಭು ಸ್ವಾಮೀಜಿ ಮಾತನಾಡಿ, `ಶರಣರ, ಸಂತರ, ಸತ್ಪುರುಷರ ಸಂದೇಶದ ಪಾಲನೆ ಮಾಡಬೇಕು. ಗುರುಗಳ ಮಾರ್ಗದರ್ಶನದಲ್ಲಿ ನಡೆದು ಜೀವನ ಸಾರ್ಥಕಪಡಿಸಿಕೊಳ್ಳಬೇಕು' ಎಂದರು.
ಶ್ರೀದೇವಿ ಕಾಕನಾಳೆ, ಸುಮಿತ್ರಾ ದಾವಣಗಾವೆ, ಚಂದ್ರಕಾಂತ ಗುಂಗೆ ಮಾತನಾಡಿದರು.
ತೀರ್ಥಪ್ಪ ಹುಮನಾಬಾದ್, ದಿಲೀಪ ಶಿಂಧೆ, ಸಂಗಮೇಶ ತಾವರಖೇಡ, ಮಲ್ಲಿಕಾರ್ಜುನ ಸಲಗರ, ಸುಧಾಕರರೆಡ್ಡಿ, ಲಕ್ಷ್ಮಣ ಮೇತ್ರೆ, ನಾಗಶೆಟ್ಟಿ ದಾಡಗೆ, ಸವಿತಾ ಸಜ್ಜನಶೆಟ್ಟಿ, ರಾಮ ಮೇತ್ರೆ, ರಾಮ ಮಜಗೆ, ಗುರುದೇವಿ, ಸೋನಾಲಿ, ವಿಠಲ್ ಮೇತ್ರೆ, ಮಲ್ಲಿಕಾರ್ಜುನ ಮಾಳಿಸೇರಿದಂತೆ ಸಮಾಜದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.