ADVERTISEMENT

ಸರ್ಕಾರಿ ನೌಕರರ ಕೆಲಸ ಜನಸ್ನೇಹಿಯಾಗಿರಲಿ: ಜಿಲ್ಲಾಧಿಕಾರಿ ಫೌಜಿಯಾ

ಕಾಳಗಿ: ಜನಸ್ಪಂದನದಲ್ಲಿ ಜಿಲ್ಲಾಧಿಕಾರಿ ಫೌಜಿಯಾ ಸಲಹೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 5:16 IST
Last Updated 25 ಜುಲೈ 2024, 5:16 IST
ಕಾಳಗಿಯಲ್ಲಿ ಮಂಗಳವಾರ ಜರುಗಿದ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ.ಉದ್ಘಾಟಿಸಿದರು
ಕಾಳಗಿಯಲ್ಲಿ ಮಂಗಳವಾರ ಜರುಗಿದ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ.ಉದ್ಘಾಟಿಸಿದರು   

ಕಾಳಗಿ: ‘ಸರ್ಕಾರಿ ಅಧಿಕಾರಿ, ನೌಕರರು ಕಚೇರಿ ಸಮಯದ ನಿಗದಿಯಂತೆ ಕೆಲಸ ಮಾಡಬೇಕು. ಕುಂದುಕೊರತೆ ಹೊತ್ತು ತರುವ ಜನರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬೇಕು. ವಿನಾಕಾರಣ ಸತಾಯಿಸದೆ ಪ್ರೀತಿ, ವಿಶ್ವಾಸದಿಂದ ಕೆಲಸ ಮಾಡಲಬೇಕು. ನಾವು ಜನಸೇವಕರು ಎಂಬುದನ್ನು ಮರೆಯದೆ ಪರಸ್ಪರ ಖುಷಿ, ಸಹಕಾರದಿಂದ ಒಟ್ಟಿಗೆ ಕೆಲಸ ಮಾಡಿ ಜನಸ್ನೇಹಿ ಆಡಳಿತ ನೀಡಬೇಕು’ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಬಿ. ಹೇಳಿದರು.

ತಾಲ್ಲೂಕು ಆಡಳಿತ ಮಂಗಳವಾರ ಸಂಜೆ ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

‘ಸ್ವೀಕೃತ ಅಹವಾಲುಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಿತಿಗತಿ ಪರಿಶೀಲಿಸಿ ಶೀಘ್ರದಲ್ಲಿ ಪರಿಹಾರ ಕಲ್ಪಿಸಬೇಕು. ಬೆಳೆ ಪರಿಹಾರ ಮತ್ತು ಬೆಳೆ ವಿಮೆಗಾಗಿ ಈ ವರ್ಷ ಜಿಲ್ಲೆಗೆ ₹730ಕೋಟಿ ಅನುದಾನ ಬಂದಿದೆ’ ಎಂದು ತಿಳಿಸಿದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಮಾತನಾಡಿ, ‘ಈ ಪ್ರದೇಶದಲ್ಲಿ ಕಳ್ಳತನ, ಅಪಘಾತ, ಅಪರಾಧ ಚಟುವಟಿಕೆಗಳು ಕಡಿಮೆ ಇವೆ. ಆದರೂ ಹಳ್ಳಿ, ಆಸ್ಪತ್ರೆ, ಶಾಲಾ-ಕಾಲೇಜು ಮತ್ತಿತರ ಸಾರ್ವಜನಿಕ ಸ್ಥಳಗಳ ಬೀಟ್ ವ್ಯವಸ್ಥೆ ಕಟ್ಟುನಿಟ್ಟಾಗಿ ಕೈಗೊಂಡು ಅಪರಾಧ ಕೃತ್ಯ ಮುಕ್ತ ಸಮಾಜ ಸುಧಾರಣೆಗೆ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಜನರು ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು’ ಎಂದು ಪೊಲೀಸ್ ಇಲಾಖೆ ಕೈಗೊಳ್ಳುವ ಕ್ರಮಗಳನ್ನು ವಿವರಿಸಿದರು.

ತಹಶೀಲ್ದಾರ್ ಘಮಾವತಿ ರಾಠೋಡ, ತಾ.ಪಂ ಇಒ ವಿಲಾಸರಾಜ ಪ್ರಸನ್ನ ಮಾತನಾಡಿದರು.

ಸಹಾಯಕ ಆಯುಕ್ತೆ ರೂಪಿಂದರ ಕೌರ್, ಜಿ.ಪಂ ಯೋಜನಾಧಿಕಾರಿ ಜಗದೇವಪ್ಪ ಬೈಗೊಂಡ, ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ, ಕೃಷಿ ಇಲಾಖೆ ಉಪನಿರ್ದೇಶಕಿ ಅನಸೂಯ ಹೂಗಾರ, ಟಿಎಚ್ಒ ಡಾ.ಮಹ್ಮದ್ ಗಫೂರ, ಡಾ.ರಜ್ವುಲ್ಲಾ ಖಾದರಿ, ಕೃಷಿ ಎಡಿ ಸಂಜು ಮಾನಕರ್, ಪ.ಪಂ ಮುಖ್ಯಾಧಿಕಾರಿ ಪಂಕಜಾ ರಾವೂರ ವೇದಿಕೆ ಮೇಲಿದ್ದರು.

ಚಿತ್ತಾಪುರ ಬಿಇಒ ಶಶಿಧರ ಬಿರಾದಾರ, ಅಕ್ಷರದಾಸೋಹ ಅಧಿಕಾರಿ ಪ್ರಕಾಶ ನಾಯಿಕೋಡಿ, ಜೆಸ್ಕಾಂ ಎಇಇ ಪ್ರಭುದೇವ ಮಡ್ಡಿತೋಟ, ಲೋಕೋಪಯೋಗಿ ಇಲಾಖೆ ಎಇಇ ಮಲ್ಲಿಕಾರ್ಜುನ ಸಂಗನ, ಡಾ.ಅಮರೇಶ ಎಮ್.ಎಚ್, ಸಿಪಿಐ ಜಗದೇವಪ್ಪ ಪಾಳಾ, ಆರ್.ಎಫ್.ಒ ವಿಜಯಕುಮಾರ ಬಡಿಗೇರ, ಜಯವರ್ಧನ್ ತಳವಾರ, ಕೃಷಿ ಅಧಿಕಾರಿ ಸರೋಜಾ ಕಲಬುರಗಿ, ಡಾ.ರೇಣುಕಾದೇವಿ ಕಾಬಾ, ವೆಂಕಟರೆಡ್ಡಿ ಕೊಲ್ಲೂರ, ಗ್ರೇಡ್-2 ತಹಶೀಲ್ದಾರ್ ರಾಜೇಶ್ವರಿ, ಉಪತಹಶೀಲ್ದಾರ್ ಮಾಣಿಕ ಘತ್ತರಗಿ, ಪಿಎಸ್ಐ ವಿಶ್ವನಾಥ ಬಾಕಳೆ, ಚೇತನ ಪೂಜಾರಿ, ಅಮೋಜ್ ಕಾಂಬಳೆ ಸೇರಿದಂತೆ ವಿವಿಧ ಇಲಾಖೆಗಳ 34 ಅಧಿಕಾರಿಗಳು ಉಪಸ್ಥಿತರಿದ್ದರು.

ಬೆಳೆವಿಮೆ ಜಾಗೃತಿ, ಸಸಿ ವಿತರಣೆ, ಫಲಾನುಭವಿಗಳಿಗೆ ಪಿಂಚಣಿ, ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ಜರುಗಿತು. ಜನರ ವಿವಿಧ ಸಮಸ್ಯೆಗಳ 83 ಅರ್ಜಿಗಳು ಸಲ್ಲಿಕೆಯಾದವು. ಶಿಕ್ಷಕಿ ಶಿವಲೀಲಾ ಅಷ್ಟಗಿ ಪ್ರಾರ್ಥನೆಗೀತೆ ಹಾಡಿದರು. ಶಿಕ್ಷಕ ಶಿವಕುಮಾರ ಶಾಸ್ತ್ರಿ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.