ADVERTISEMENT

ಕಾಳಗಿ: ನರಸಮ್ಮಗೆ ಬೇಕಿದೆ ಸ್ವಂತ ಸೂರಿನ ಆಸರೆ

ನಾಲ್ಕು ದಶಕದಿಂದ ಬಾಡಿಗೆ ಮನೆ ಅಲೆದಾಟದಲ್ಲೇ ಜೀವನ ನಿರ್ವಹಣೆ

ಗುಂಡಪ್ಪ ಕರೆಮನೋರ
Published 21 ಅಕ್ಟೋಬರ್ 2024, 5:22 IST
Last Updated 21 ಅಕ್ಟೋಬರ್ 2024, 5:22 IST
ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದ ನರಸಮ್ಮ
ಕಾಳಗಿ ತಾಲ್ಲೂಕಿನ ಕೋಡ್ಲಿ ಗ್ರಾಮದ ನರಸಮ್ಮ   

ಕಾಳಗಿ: ‘ಹೊಲ ಇಲ್ಲ, ಮನೆಯಿಲ್ಲ ಇಲ್ಲ ಸರ್‌, ಇಷ್ಟು ವರ್ಷ ಬಾಡಿಗೆ ಮನೆಯಲ್ಲಿಯೇ ಇದ್ದೇವೆ, ಈಗ ಬಾಡಿಗೆ ಕಟ್ಟಲು ಸಾಧ್ಯವಾಗುತ್ತಿಲ್ಲ, ಇನ್ನು ಮುಂದೆ ನಮಗೆ ಬಸ್ಟಾಂಡೇ ಗತಿ... ಇವು ತಾಲ್ಲೂಕಿನ ಕೋಡ್ಲಿ ಗ್ರಾಮದ ವೃದ್ಧೆ ನರಸರಮ್ಮ ನಾರಾಯಣ ಇಟಗಿ ಅವರ ಅಳಲು.

ಸರ್ಕಾರ, ನಿರ್ಗತಿಕರು, ಆರ್ಥಿಕವಾಗಿ ಹಿಂದುಳಿದವರಿಗಾಗಿಯೇ ವಸತಿ ಯೋಜನೆ ಜಾರಿಗೊಳಿಸಿದೆ. ಆದರೆ ಅರ್ಹರಿಗೆ ಮಾತ್ರ ಯೋಜನೆಗಳ ಲಾಭ ಸಿಗುತ್ತಿಲ್ಲ. ಅದಕ್ಕೆ ನರಸಮ್ಮ ತಾಜಾ ಉದಾಹರಣೆಯಾಗಿದ್ದಾರೆ.

ರಾಮತೀರ್ಥ ಗ್ರಾಮದ ನರಸಮ್ಮ ಅವರನ್ನು ಕೋಡ್ಲಿ ಗ್ರಾಮದ ನಾರಾಯಣ ಅವರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ನಾರಾಯಣ ಅವರಿಗೆ ಹೊಲ, ಮನೆಯಿಲ್ಲದೇ ಹಮಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಅವರು ನಿಧನರಾಗಿದ್ದರಿಂದ, ಕುಟುಂಬ ಬೀದಿಗೆ ಬಂದಿದೆ.

ADVERTISEMENT

ನರಸಮ್ಮ(65) ಅವರ ಪತಿ ತೀರಿಕೊಂಡು 7 ವರ್ಷಗಳಾಗಿವೆ. ಮೂವರು ಪುತ್ರರಲ್ಲಿ ಮೊದಲ ಮಗ ನಾಗಪ್ಪ ಮನೆಗೆ ಆಸರೆಯಾಗಿಲ್ಲ. 2ನೇ ಪುತ್ರ ರಮೇಶ ಆಕಸ್ಮಿಕವಾಗಿ ಮೃತಪಟ್ಟಿದ್ದಾನೆ. ಮತ್ತೊಬ್ಬ ಪುತ್ರ ಬಸವರಾಜ ಎಂಬಾತ, ಕೂಲಿನಾಲಿ ಮಾಡಿ, ತಾಯಿಯನ್ನು ಸಲಹುತ್ತಿದ್ದಾನೆ. ಆದರೆ ಕೂಲಿಯಿಂದ ಬರುವ ಹಣದಲ್ಲಿ ಮನೆ ಬಾಡಿಗೆ, ಖರ್ಚು ವೆಚ್ಚಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.

‘ನನಗೆ ವಯಸ್ಸಾಗಿದೆ. ಬಸವರಾಜ(ಪುತ್ರ) ಕೂಲಿ ಮಾಡಿ ನನ್ನನ್ನು ಸಾಕುತ್ತಿದ್ದಾನೆ. ಆದರೆ ಸ್ವಂತ ಮನೆಯಿಲ್ಲ. ಈಗಾಗಲೇ ಹಲವು ಬಾಡಿಗೆ ಮನೆಗಳನ್ನು ಬದಲಿಸಿದ್ದೇವೆ. ಈಗ ಬಾಡಿಗೆ ಇರುವ ಮನೆ ಮಾಲೀಕರು, ಮನೆಯನ್ನು ಬಿಡಲು ಹೇಳುತ್ತಿದ್ದಾರೆ. ಈಗ ಮತ್ತೆ ಮನೆ ಹುಡುಕು ಚಿಂತೆ ಎದುರಾಗಿದೆ’ ಎಂದು ಹೇಳುವಾಗ ನರಸಮ್ಮ ಕಣ್ಣೀರಾದರು.

ಪ್ರಸ್ತುತ ವಾರ್ಡ್ ನಂ.1ರ ತಮ್ಮಣ್ಣ ನರಬೋಳಿ ಎಂಬುವರ ಮನೆಯಲ್ಲಿ ಬಾಡಿಗೆ ಇದ್ದಾರೆ. ಈಗ ಮತ್ತೆ ಮನೆ ಬದಲಾಯಿಸುವ ಸಮಸ್ಯೆ ಕಾಡುತ್ತಿದೆ. ಸುಮಾರು ನಾಲ್ಕು ದಶಕಗಳಿಂದ ಮನೆ ಬದಲಾಯಿಸುತ್ತಲೇ ಇದ್ದಾರೆ. ಆದರೆ ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಮಾತ್ರ ನನಸಾಗಿಲ್ಲ. ಜತೆಗೆ ಮಗನ ಮದುವೆ ಮಾಡಬೇಕೆಂದರೂ ಬಾಡಿಗೆ ಮನೆಯಲ್ಲಿರುವ ನಮಗೆ ಯಾರು ಹೆಣ್ಣು ಕೊಡುತ್ತಾರೆ? ಎಂದು ಚಿಂತೆ ಮಾಡುತ್ತಿದ್ದಾರೆ.

ಕಾಳಗಿ ತಹಶೀಲ್ದಾರ್‌ಗೆ ಮಾಹಿತಿ ಕೊಡಲಾಗಿದೆ. ವಸತಿ ಯೋಜನೆಯಡಿ ಅಗತ್ಯ ನೆರವು ಕಲ್ಪಿಸಿಕೊಡಲಾಗುವುದು
ಗೀತಾ ಪಿ. ಯಲ್ಮಡಗಿ ಕೋಡ್ಲಿ ಗ್ರಾ.ಪಂ ಅಧ್ಯಕ್ಷೆ
2001ರಲ್ಲಿ ಆಶ್ರಯ ಯೋಜನೆಯಡಿ ಒಂದು ಮನೆ ಮಂಜೂರು ಮಾಡಲಾಗಿತ್ತು. ಆದರೆ ಜಾಗದ ಕೊರತೆಯಿಂದಾಗಿ ನರಸಮ್ಮಗೆ ಮನೆ ಕಟ್ಟಿಸಿಕೊಳ್ಳಲಾಗಿಲ್ಲ
ಮಲ್ಲಪ್ಪ ಚಿಂತಕುಂಟಾ ಗ್ರಾ.ಪಂ ಸದಸ್ಯ
ಮನೆ ಕಟ್ಟಿಸಿ ಕೊಡುವಂತೆ ಗ್ರಾ.ಪಂಗೆ ಅನೇಕ ಬಾರಿ ಓಡಾಡಿದ್ದೇನೆ. ಸ್ವಂತ ಜಾಗ ಇದ್ದರೆ ಅರ್ಜಿ ಕೊಡಿ ಕ್ರಮ ಕೈಗೊಳ್ಳುತ್ತೇವೆ. ಆದರೆ ಜಾಗ ಎಲ್ಲಿಂದ ತರಲಿ
ನರಸಮ್ಮ ವೃದ್ಧೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.