ಕಲಬುರ್ಗಿ: ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರೈತರ ₹2 ಲಕ್ಷದ ವರೆಗಿನ ಸುಸ್ಥಿ ಬೆಳೆಸಾಲ ಮನ್ನಾ ಮಾಡುವುದಾಗಿ ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಈ ಯೋಜನೆಯ ಪ್ರಯೋಜನ ಜಿಲ್ಲೆಯ ಎಷ್ಟು ರೈತರಿಗೆ ದೊರೆಯಲಿದೆ ಎಂಬ ಬಗ್ಗೆ ಇನ್ನೂ ಖಚಿತ ಮಾಹಿತಿ ದೊರೆಯುತ್ತಿಲ್ಲ.
‘ಸಾಲಮನ್ನಾ ಮತ್ತು ಅದರ ನಿಯಮಾವಳಿಯ ಅಧಿಸೂಚನೆಯನ್ನು ಸರ್ಕಾರ ಹೊರಡಿಸುತ್ತದೆ. ನಮ್ಮ ವ್ಯವಸ್ಥಾಪಕ ನಿರ್ದೇಶಕರು ಅಪೆಕ್ಸ್ ಬ್ಯಾಂಕ್ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಿದ್ದಾರೆ. ಈ ವಿಷಯವಾಗಿ ಶನಿವಾರ ಸಭೆ ನಡೆಸಲಿದ್ದೇವೆ’ಎಂದು ಕಲಬುರ್ಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಬಸವರಾಜ ವಾಲಿ ಹೇಳಿದರು.
‘ಜಿಲ್ಲಾ ಸಾಲ ಯೋಜನೆಯನ್ನು ಮಾತ್ರ ನಾವು ಮಾಡುತ್ತೇವೆ. ಜಿಲ್ಲೆಯಲ್ಲಿ ಎಷ್ಟು ಜನ ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ನಮ್ಮಲ್ಲಿ ಇರುವುದಿಲ್ಲ’ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಹೇಳಿದರು.
‘ಜಿಲ್ಲೆಯಲ್ಲಿ ಇಂತಿಷ್ಟು ರೈತರ ಸಾಲ ಇದೆ ಎಂಬ ಮಾಹಿತಿಯನ್ನು ನಾವು ಸರ್ಕಾರಕ್ಕೆ ಕೊಟ್ಟಿಲ್ಲ. ಸರ್ಕಾರದವೇ ಆಯಾ ಬ್ಯಾಂಕ್‌ಗಳಿಂದ ನೇರವಾಗಿ ಮಾಹಿತಿ ಪಡೆದಿರಬಹುದು’ ಎಂದು ಅವರು ಪ್ರತಿಕ್ರಿಯಿಸಿದರು.
₹432 ಕೋಟಿ ಸಾಲ: ‘ಕಲಬುರ್ಗಿ–ಯಾದಗಿರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ)ನಿಂದ ಉಭಯ ಜಿಲ್ಲೆಗಳ ರೈತರಿಗೆ ಒಟ್ಟಾರೆ ₹432 ಬೆಳೆ ಸಾಲ ನೀಡಲಾಗಿದೆ. ಈಗಿನ ಸರ್ಕಾರದ ನಿಯಮಾವಳಿಯಂತೆ ಈ ರೈತರಲ್ಲಿ ಎಷ್ಟು ರೈತರು ಸಾಲ ಮನ್ನಾಕ್ಕೆ ಅರ್ಹರು ಇದ್ದಾರೆ ಎಂಬುದನ್ನು ನಿರ್ಧರಿಸಬೇಕಿದೆ’ ಎಂದು ಡಿಸಿಸಿ ಬ್ಯಾಂಕ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ದೊಡ್ಡ ರೈತರದ್ದೂ ಅದೇ ಗೋಳು: ‘ನನಗೆ 18 ಎಕರೆ ಜಮೀನಿದೆ. 11 ಎಕರೆ ಜಮೀನು ಕೃಷಿಗೆ ಯೋಗ್ಯವಿಲ್ಲ. ಉಳಿದ 7 ಎಕರೆ ಜಮೀನಿನಲ್ಲಿ ಕಳೆದ ವರ್ಷ 9 ಕ್ವಿಂಟಲ್ ತೊಗರಿ ಬೆಳೆದಿದ್ದೇನೆ. ಕೃಷಿಗಾಗಿ 4 ವರ್ಷಗಳ ಹಿಂದೆ ₹4.5ಲಕ್ಷ ಭಾರತೀಯ ಸ್ಟೇಟ್ ಬ್ಯಾಂಕ್ ಚಿಂಚೋಳಿ ಶಾಖೆಯಲ್ಲಿ ಸಾಲ ಮಾಡಿದ್ದೇನೆ. ಸಾಲದ ಶೂಲಕ್ಕೆ ಸಿಲುಕಿ ಕಂಗಾಲಾಗಿದ್ದೇನೆ. ಸಾಲ ತೀರಿಸಲು ಹೊಲ ಮಾರುವುದೊಂದೆ ದಾರಿ ನಮ್ಮೆದುರಿಗೆ ಇತ್ತು. ಇಂತಹ ಆಪತ್ಕಾಲದಲ್ಲಿ ರೈತರ ನೆರವಿಗೆ ಧಾವಿಸಿದ್ದು ದೊಡ್ಡ ಸಹಾಯ’ ಎನ್ನುತ್ತಾರೆ ಚಿಂಚೋಳಿ ತಾಲ್ಲೂಕು ಪೋಲಕಪಳ್ಳಿಯ ರೈತ ಶ್ರೀಮಂತರಾವ ಹದನೂರು ಅವರು.
ಬಜೆಟ್‌ಗೆ ಒಪ್ಪಿಗೆ ದೊರೆಯಬೇಕು: ‘ಬಜೆಟ್‌ಗೆ ವಿಧಾನ ಮಂಡಲದ ಒಪ್ಪಿಗೆ ದೊರೆಯಬೇಕು. ಆ ನಂತರ ಸರ್ಕಾರ ಅಧಿಸೂಚನೆ ಹೊರಡಿಸುತ್ತದೆ. ಅಲ್ಲಿಯ ವರೆಗೂ ನಿಖರ ಮಾಹಿತಿ ಲಭ್ಯವಾಗುವುದು ಕಷ್ಟಸಾಧ್ಯ’ ಎಂದು ಸಹಕಾರ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಗ್ರಾಮೀಣ ಬ್ಯಾಂಕ್‌ನಿಂದ ₹450 ಕೋಟಿ ಅಂದಾಜು
‘ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್‌ನಿಂದ ಸಾಲ ಪಡೆದ ಜಿಲ್ಲೆಯ ರೈತರಿಗೆ ₹380ರಿಂದ ₹450 ಕೋಟಿ ವರೆಗೆ ಸಾಲಮನ್ನಾ ಪ್ರಯೋಜನ ದೊರೆಯಬಹುದು ಎಂಬ ಅಂದಾಜು ಮಾಡಿದ್ದೇವೆ’ ಎಂದು ಬ್ಯಾಂಕಿನ ಕಲಬುರ್ಗಿ ಪ್ರಾದೇಶಿಕ ವ್ಯವಸ್ಥಾಪಕ ಎಸ್.ಕೆ. ಮಾಹುಲಿ ಪ್ರತಿಕ್ರಿಯಿಸಿದರು.
‘ಜಿಲ್ಲೆಯಲ್ಲಿ 65 ಶಾಖೆಗಳನ್ನು ನಮ್ಮ ಬ್ಯಾಂಕ್ ಹೊಂದಿದೆ. ರೈತರಿಗೆ ಅತಿ ಹೆಚ್ಚು ಸಾಲ ನೀಡುವವರೂ ನಾವೇ. ಹೀಗಾಗಿ ಇತರೆ ಬ್ಯಾಂಕ್‌ಗಳಿಗೆ ಹೋಲಿಸಿದರೆ ನಮ್ಮ ಬ್ಯಾಂಕಿನ ಗ್ರಾಹಕರಿಗೆ ಹೆಚ್ಚು ಪ್ರಯೋಜನ ದೊರೆಯುತ್ತದೆ’ ಎಂದು ಅವರು ಹೇಳಿದರು.
‘ಸಾಲಮನ್ನಾದ ಸರ್ಕಾರಿ ಮಾರ್ಗಸೂಚಿ ಬಂದಿಲ್ಲ. ಆದರೂ, ನಮ್ಮ ಬ್ಯಾಂಕ್‌ನ ಎಲ್ಲ 12 ಜಿಲ್ಲೆಗಳ ಪ್ರಾದೇಶಿಕ ವ್ಯವಸ್ಥಾಪಕರೊಂದಿಗೆ ಆಡಳಿತ ಮಂಡಳಿಯವರು ಗುರುವಾರ ವಿಡಿಯೊ ಸಂವಾದ ನಡೆಸಿದರು. ನಮ್ಮ ಬ್ಯಾಂಕಿನಿಂದ ಸಾಲ ಪಡೆದ 12 ಜಿಲ್ಲೆಗಳ ರೈತರಿಗೆ ಒಟ್ಟಾರೆ ₹4 ಸಾವಿರ ಕೋಟಿ ಪ್ರಯೋಜನ ದೊರೆಯಲಿದೆ ಎಂದು ಅಂದಾಜು ಮಾಡಿದ್ದೇವೆ’ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.