ADVERTISEMENT

ರೈತರ ಆತ್ಮಹತ್ಯೆ ತಡೆಗೆ ಸಾಲ ಮನ್ನಾ ಮಾಡಿ: ಯು.ಬಸವರಾಜ

​ಪ್ರಜಾವಾಣಿ ವಾರ್ತೆ
Published 10 ಜುಲೈ 2024, 14:24 IST
Last Updated 10 ಜುಲೈ 2024, 14:24 IST
ಯು.ಬಸವರಾಜ
ಯು.ಬಸವರಾಜ   

ಕಲಬುರಗಿ: ‘ರಾಜ್ಯದಾದ್ಯಂತ ಕಳೆದ 15 ತಿಂಗಳಲ್ಲಿ ಸುಮಾರು 1200 ರೈತರು, ಕೂಲಿಕಾರರು ಮತ್ತು ರೈತ ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವುದು ಕಳವಳಕಾರಿ ಸಂಗತಿ. ರೈತರ ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಉಪಾಧ್ಯಕ್ಷ ಯು.ಬಸವರಾಜ ಆಗ್ರಹಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ನೇರ ಹೊಣೆಯಾಗಿವೆ. ಕಳೆದ ಅವಧಿಯ ಬರಗಾಲದ ಸಂದರ್ಭದಲ್ಲಿ ಸರ್ಕಾರಗಳು ಜಂಟಿಯಾಗಿ ಖಾಸಗಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳದ್ದೂ ಸೇರಿ ಎಲ್ಲ ಸಾಲ ಮನ್ನಾ ಮಾಡಲು ಕ್ರಮವಹಿಸಬೇಕಿತ್ತು. ಸಾಲ ಕೊಟ್ಟು ಒತ್ತಡ ನೀಡಿದವರ ವಿರುದ್ಧ ಗಂಭೀರ ಕ್ರಮ ಕೈಗೊಂಡಿದ್ದರೆ ಈ ಆತ್ಮಹತ್ಯೆಗಳನ್ನು ತಡೆಯಬಹುದಿತ್ತು’ ಎಂದರು.

‘ಈ ಕುರಿತು ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ಗಂಭೀರ ಧ್ವನಿ ಎತ್ತಿ ರೈತರ ರಕ್ಷಣೆಗೆ ಧಾವಿಸದ ಎಲ್ಲ ಸಂಸದರು ಮತ್ತು ಶಾಸಕರ ನಡೆಯು ಹೊಣೆಗೇಡಿತನದ್ದಾಗಿದೆ. ಕೇವಲ ನೂರು ಕಾರ್ಪೋರೇಟ್ ಕಂಪನಿಗಳ ಸುಮಾರು ₹35 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರ ರೈತರ ಸಾಲವನ್ನು ಯಾಕೆ ಮನ್ನಾ ಮಾಡಬಾರದು’ ಎಂದು ಪ್ರಶ್ನಿಸಿದರು.

ADVERTISEMENT

‘ಗ್ಯಾರಂಟಿ ಯೋಜನೆಗಳ ಜಾರಿಯಿಂದಾಗಿ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎನ್ನುವುದು ಸುಳ್ಳು. ದೊಡ್ಡ ಉದ್ಯಮಿಗಳಿಗೆ ಕೈಗಾರಿಕೆ ನಿರ್ಮಾಣಕ್ಕೆ ಲಕ್ಷಾಂತರ ಕೋಟಿ ರೂಪಾಯಿ ಸಹಾಯಧನ ಮತ್ತು ಬಡ್ಡಿರಹಿತ ಸಾಲ ಒದಗಿಸುತ್ತದೆ. ರೈತರ ಸಾಲಮನ್ನಾಕ್ಕಾಗಿ ಹಣ ಇಲ್ಲ ಎಂದರೆ ನಂಬಲು ಸಾಧ್ಯವೇ? ಇದು ಜನರ ದಿಕ್ಕು ತಪ್ಪಿಸುವ ಕೆಲಸ’ ಎಂದರು.

‘ರೈತರು, ಗೇಣಿದಾರರು ಮತ್ತು ಕೃಷಿ ಕೂಲಿಕಾರರು ಹಾಗೂ ಸ್ತ್ರೀಶಕ್ತಿ ಮತ್ತು ಮೈಕ್ರೋ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದ ಮಹಿಳೆಯರನ್ನು ರಕ್ಷಿಸಲು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇರಳ ಸರ್ಕಾರದ ಮಾದರಿಯ ಋಣ ಮುಕ್ತ ಕಾಯ್ದೆ ಜಾರಿಗೆ ತರಬೇಕು’ ಎಂದು ಆಗ್ರಹಿಸಿದರು.

ರೈತರ ಬೆಳೆಗೆ ಡಾ. ಎಂ.ಎಸ್. ಸ್ವಾಮಿನಾಥನ್ ಕೃಷಿ ಆಯೋಗದ ಸಲಹೆಯಂತೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾಯ್ದೆ ಜಾರಿಗೊಳಿಸಬೇಕು. ಅದೇ ರೀತಿ, ಉದ್ಯೋಗ ಖಾತ್ರಿ ದಿನಗೂಲಿಯನ್ನು ₹750ಗೆ ಹೆಚ್ಚಿಸಬೇಕು. 200 ದಿನ ಕೆಲಸ ಕೊಡಬೇಕು. ಯೋಜನೆಯನ್ನು ನಗರ ಪ್ರದೇಶಗಳಿಗೂ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸಾಯಬಣ್ಣ ಗುಡುಬಾ, ಪ್ರಭು ಪ್ಯಾರಾಬಾದಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.