ADVERTISEMENT

ಕಲಬುರಗಿ: ಲೋಕ ಅದಾಲತ್ ಜುಲೈ 13ರಂದು

​ಪ್ರಜಾವಾಣಿ ವಾರ್ತೆ
Published 22 ಜೂನ್ 2024, 14:28 IST
Last Updated 22 ಜೂನ್ 2024, 14:28 IST
ಎಸ್‌.ನಾಗಶ್ರೀ
ಎಸ್‌.ನಾಗಶ್ರೀ   

ಕಲಬುರಗಿ: ‘ಜಿಲ್ಲೆಯ ನ್ಯಾಯಾಲಯಗಳಲ್ಲಿ ಜುಲೈ 13ರಂದು ಲೋಕ ಅದಾಲತ್ ಏರ್ಪಡಿಸಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ಎಸ್‌.ನಾಗಶ್ರೀ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕಲಬುರಗಿ ನಗರ ಹಾಗೂ ಜಿಲ್ಲೆಯ ತಾಲ್ಲೂಕು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ 50,300 ಪ್ರಕರಣಗಳು ಬಾಕಿ ಇವೆ. ರಾಜಿ ಸಂಧಾನದ ಮೂಲಕ ಗರಿಷ್ಠ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ. ಅದಾಲತ್‌ನಲ್ಲಿ ಎರಡೂ ಕಡೆಯವರಿಗೂ ಮಾರ್ಗದರ್ಶನ ನೀಡಲಾಗುವುದು. ಇಲ್ಲಿನ ತೀರ್ಪು ನ್ಯಾಯಾಲಯದ ತೀರ್ಪಿನಷ್ಟೇ ಪರಿಣಾಮಕಾರಿಯಾಗಿರುತ್ತದೆ. ಮೇಲ್ಮನವಿಗೆ ಅವಕಾಶ ಇರುವುದಿಲ್ಲ’ ಎಂದರು.

ADVERTISEMENT

‘ಪ್ರಕರಣಗಳನ್ನು ಖರ್ಚಿಲ್ಲದೆ ಹಾಗೂ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದು. ವಕೀಲರ ಮೂಲಕ ಅಥವಾ ನೇರವಾಗಿ ಅದಾಲತ್‌ನಲ್ಲಿ ಭಾಗವಹಿಸಬಹುದು. ಇಲ್ಲಿ ಪ್ರಕರಣ ಇತ್ಯರ್ಥಪಡಿಸಿಕೊಂಡವರಿಗೆ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕವನ್ನು ಪೂರ್ಣವಾಗಿ ಹಿಂದಿರುಗಿಸಲಾಗುವುದು’ ಎಂದರು.

‘ರಾಜಿ ಮಾಡಿಕೊಳ್ಳಬಹುದಾದ ಪ್ರಕರಣಗಳು’: ‘ರಾಜಿಯಾಗಬಲ್ಲ ಅಪರಾಧಿಕ ಪ್ರಕರಣಗಳು, ಚೆಕ್‌ ಬೌನ್ಸ್‌, ಕಾರ್ಮಿಕರ ವೇತನ, ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಪ್ರಕರಣ, ವೈವಾಹಿಕ ಕುಟುಂಬ ನ್ಯಾಯಾಲಯದ ಪ್ರಕರಣ, ಅಪಘಾತ ಪರಿಹಾರ, ಬ್ಯಾಂಕ್ ವಸೂಲಾತಿ, ಭೂ ಪರಿಹಾರ, ಕಂದಾಯ, ನೀರಿನ ಕರಕ್ಕೆ ಸಂಬಂಧಿಸಿದ ಪ್ರಕರಣಗಳೂ ಸೇರಿದಂತೆ ಇತರ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದು’ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆದ ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀನಿವಾಸ ನವಲೆ ಮಾತನಾಡಿ, ‘ಜನರಿಗೆ ತ್ವರಿತವಾಗಿ ನ್ಯಾಯದಾನ ಮಾಡುವುದು ಅದಾಲತ್‌ನ ಉದ್ದೇಶವಾಗಿದೆ. ಇದರಿಂದ ದಾವೇದಾರರಿಗೆ ಸಮಯ ಹಾಗೂ ಹಣ ಉಳಿಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.