ಕಲಬುರ್ಗಿ: ‘ನನ್ನನ್ನು ಸೋಲಿಸಲು ಗಲ್ಲಿಯಿಂದ ದಿಲ್ಲಿ ಲೀಡರ್ ತನಕ ಸಂಚು ರೂಪಿಸಿದ್ದಾರೆ’ ಎಂದು ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಸಭೆಯೊಂದರಲ್ಲಿ ಹೇಳಿದ್ದರು. ವಾಸ್ತವದಲ್ಲಿ ಚುನಾವಣಾ ಅಖಾಡ ಹಾಗೆಯೇ ಕಾಣಿಸುತ್ತಿದೆ.
‘ಖರ್ಗೆ’ ಎಂಬ ಬೃಹತ್ ಆಲದಮರವನ್ನು ಉರುಳಿಸಲು ಬಿಜೆಪಿ ಎಲ್ಲ ‘ಅಸ್ತ್ರ’ಗಳನ್ನೂ ಪ್ರಯೋಗಿಸುತ್ತಿದೆ. ಆದರೆ, ಹನ್ನೊಂದು ಚುನಾವಣೆಗಳನ್ನು ಜಯಿಸಿರುವ ‘ಅನುಭವಿ’ ಖರ್ಗೆ ಮಾತ್ರ ಬಗ್ಗುತ್ತಿಲ್ಲ.
‘ಖರ್ಗೆ ಅವರನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿ ಅವರೇ ಆಸಕ್ತಿ ತೋರಿಸಿದ್ದಾರೆ’ ಎನ್ನುವ ಮಾತು ಕ್ಷೇತ್ರದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಆದ್ದರಿಂದಲೇ ಖರ್ಗೆ ಹಾಗೂ ಮೋದಿ ನಡುವಿನ ಚುನಾವಣೆ ಎನ್ನುವಂತೆಯೂ ಬಿಂಬಿತವಾಗಿದೆ.
ಖರ್ಗೆ ಅವರ ವಿರುದ್ಧ ‘ಕುಸ್ತಿ’ಗೆ ನಿಂತಿರುವ ಡಾ.ಉಮೇಶ ಜಾಧವ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದವರು. ತಮಗೆ ಸಚಿವ ಸ್ಥಾನ ತಪ್ಪಲು ಖರ್ಗೆ ಅವರ ‘ಪುತ್ರ ವ್ಯಾಮೋಹ’ವೇ ಕಾರಣ ಎಂದು ಅಸಮಾಧಾನ ಹೊಂದಿದ್ದರು. ಇದನ್ನೇ ‘ಬಂಡವಾಳ’ ಮಾಡಿಕೊಂಡ ಬಿಜೆಪಿ ‘ಆಪರೇಷನ್ ಕಮಲ’ ಮಾಡಿ ತನಗೆ ಇದ್ದ ‘ಅಭ್ಯರ್ಥಿ’ ಕೊರತೆಯನ್ನು ನೀಗಿಸಿಕೊಂಡಿದೆ.
ಉಮೇಶ ಜಾಧವ ಬೆನ್ನಿಗೆಹೇಳಿಕೊಳ್ಳಲು ಸಾಧನೆಗಳು ಇಲ್ಲ. ಏಕೆಂದರೆ, ಐದೂವರೆ ವರ್ಷ ಮಾತ್ರ ಶಾಸಕರಾಗಿದ್ದರು. ಅಲ್ಲದೇ, ಹೆಚ್ಚಿನ ಮತದಾರರಿಗೆ ಡಾ.ಜಾಧವ ಪರಿಚಯವಿಲ್ಲ. ಆದರೆ, ಮೋದಿ ಹೆಸರು, ಯಡಿಯೂರಪ್ಪನವರ ಅಭಿವೃದ್ಧಿ ಕೆಲಸ, ಮೇಲ್ವರ್ಗ ಹಾಗೂ ತಮ್ಮ ಬಂಜಾರ ಸಮುದಾಯವನ್ನು ಹೆಚ್ಚಾಗಿ ನಂಬಿಕೊಂಡಿದ್ದಾರೆ. ಜಾಧವ ಉತ್ಸಾಹಿ, ಸಂಭಾವಿತ, ಜನರಿಗೆ ಸುಲಭವಾಗಿ ಸಿಗುತ್ತಾರೆ ಎನ್ನುವ ಮಾತಿದೆ.
ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಹಿರಿಯರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ ಚಿಂಚನಸೂರ, ಡಾ.ಎ.ಬಿ.ಮಾಲಕರಡ್ಡಿ ಅವರು ಖರ್ಗೆ ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ. ಆದ್ದರಿಂದ ಕಣ ರಂಗೇರಿದೆ.
ಖರ್ಗೆ ಅವರು 50 ವರ್ಷಗಳಿಂದಲೂ ಆಯ್ಕೆಯಾಗುತ್ತಿದ್ದರೂ ಕಲಬುರ್ಗಿ ಹೇಳಿಕೊಳ್ಳುವಂತೆ ಅಭಿವೃದ್ಧಿ ಹೊಂದಿಲ್ಲ. 371(ಜೆ) ಜಾರಿ ಎಲ್ಲರ ಹೋರಾಟದ ಫಲ. ಆದರೆ, ಅದನ್ನು ಖರ್ಗೆ ತಮ್ಮದೇ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಪುತ್ರನಿಗೆ ಅಧಿಕಾರ ಕೊಡಿಸುವ ಕಾರಣಕ್ಕಾಗಿ ಹಿರಿಯರನ್ನು ಕಡೆಗಣಿಸಿ, ಪಕ್ಷದಿಂದ ಹೊರ ಹೋಗುವಂತೆ ಮಾಡಿದರು ಎನ್ನುವುದು ವಿರೋಧಿಗಳ ಟೀಕೆ.
ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮರೆಮಾಚಿ ‘ಪುತ್ರ ವ್ಯಾಮೋಹಿ’ ಎನ್ನುವ ಹಣೆಪಟ್ಟಿ ಹಚ್ಚಿರುವುದಕ್ಕೆ ಖರ್ಗೆಯವರು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ, ವಿರೋಧಿಗಳು ಕೆಣಕಿದರೂ ವೈಯಕ್ತಿಕವಾಗಿ ಟೀಕಿಸುವುದಿಲ್ಲ. ಸೈದ್ಧಾಂತಿಕ ವಿಚಾರ ಬಂದಾಗ ತಮ್ಮ ನಿಲುವನ್ನು ಗಟ್ಟಿ ಧ್ವನಿಯಲ್ಲಿ ಪ್ರತಿಪಾದಿಸುವುದನ್ನೂ ಬಿಟ್ಟಿಲ್ಲ.
ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕರಾದ ನಂತರ ಖರ್ಗೆ ಅವರ ‘ಇಮೇಜ್’ ರಾಷ್ಟ್ರಮಟ್ಟದಲ್ಲಿ ಹೆಚ್ಚಾಗಿದೆ. ಸಂಸತ್‌ನಲ್ಲಿ ಮೋದಿಯವರಿಗೆ ತೀಕ್ಷ್ಣವಾಗಿಯೇ ಉತ್ತರ ನೀಡುವ ಮುಖಾಂತರ ಗಮನ ಸೆಳೆದಿದ್ದಾರೆ. ಮುತ್ಸದ್ಧಿರಾಜಕಾರಣಿ. ಆದ್ದರಿಂದ ಇವರು ಸಂಸತ್‌ನಲ್ಲಿ ಇರಬೇಕು ಎನ್ನುವ ಮಾತೂ ಇದೆ.
ಖರ್ಗೆ ಅವರು ಲಿಂಗಾಯತ ಹಾಗೂ ಮೇಲ್ವರ್ಗಗಳ ವಿರೋಧಿ ಎನ್ನುವಂತೆ ಆರ್‌ಎಸ್‌ಎಸ್ ಅಪಪ್ರಚಾರ ಮಾಡುತ್ತಿದೆ ಎನ್ನುವುದು ಕಾಂಗ್ರೆಸ್ ಮುಖಂಡರ ದೂರು.
ಕಳೆದ ಚುನಾವಣೆಯಲ್ಲಿ ಮೋದಿ ಅಲೆ ಇತ್ತು. ಆದರೂ ಖರ್ಗೆ ಈಗಿನಷ್ಟು ವ್ಯವಸ್ಥಿತವಾಗಿ ಪ್ರಚಾರ ಕೈಗೊಂಡಿರಲಿಲ್ಲ. ಆದರೆ, ಈಗ ಪರಿಸ್ಥಿತಿ ‘ಭಿನ್ನ’ವಾಗಿದೆ. ಜಾತಿ ರಾಜಕೀಯ ಮುನ್ನೆಲೆಗೆ ಬಂದಿದೆ. ಉಮೇಶ ಜಾಧವ ಕಾರಣಕ್ಕಾಗಿ ಬಂಜಾರ ಸಮಾಜ ಒಂದಾಗಿದೆ. ಇದಕ್ಕೆ ಪ್ರತಿಯಾಗಿ ಬಲಗೈ–ಎಡಗೈ ಸಮುದಾಯದವರು ಭಿನ್ನಾಭಿಪ್ರಾಯವನ್ನು ಮರೆತು ಒಟ್ಟಾಗುತ್ತಿದ್ದಾರೆ. ಬಿಜೆಪಿಯಲ್ಲಿದ್ದ ಎಡಗೈ ಮುಖಂಡ ಕೆ.ಬಿ.ಶಾಣಪ್ಪ ಈಗ ಕಾಂಗ್ರೆಸ್ ಸೇರಿದ್ದಾರೆ.
ಎಂದೂ ಜಾತಿಗಳ ಸಭೆ, ಸಮಾವೇಶಗಳನ್ನು ಮಾಡದ ಖರ್ಗೆ ಅವುಗಳ ಮೊರೆ ಹೋಗಿದ್ದಾರೆ. ವೀರಶೈವ–ಲಿಂಗಾಯತರ ಸಮಾವೇಶ ಮಾಡಿ ತಾವು ಲಿಂಗಾಯತರ ವಿರೋಧಿಯಲ್ಲ ಎನ್ನುವ ಸಂದೇಶ ನೀಡಿದ್ದಾರೆ. ಬಿಜೆಪಿ ಪರ ಬಹುಸಂಖ್ಯಾತ ಲಿಂಗಾಯತರು ಸೇರಿದಂತೆ ಮೇಲ್ವರ್ಗ ಹಾಗೂ ಬಂಜಾರ ಸಮಾಜ ಒಟ್ಟಾಗುವ ಲಕ್ಷಣ ಕಂಡು ಬಂದಿದೆ. ಇದಕ್ಕೆ ಪ್ರತಿಯಾಗಿ ಅಹಿಂದ ಕೂಡ ಒಂದಾಗುವ ಸೂಚನೆ ಗೋಚರಿಸಿದೆ.
ಕಾಂಗ್ರೆಸ್‌ನ ಮೈತ್ರಿ ಪಕ್ಷವಾದ ಜೆಡಿಎಸ್‌ಗೆ ಇಲ್ಲಿ ನೆಲೆ ಇಲ್ಲ. ಆದರೆ, ಗುರುಮಠಕಲ್‌ನಲ್ಲಿ ಜೆಡಿಎಸ್ ಶಾಸಕ ನಾಗನಗೌಡ ಕಂದಕೂರು 79 ಸಾವಿರ ಮತಗಳನ್ನು ಪಡೆದಿದ್ದಾರೆ. ಆದರೆ, ಖರ್ಗೆ ಹಾಗೂ ನಾಗನಗೌಡ ಅವರ ನಡುವಿನ ‘ಪುರಾತನ ಮನಸ್ತಾಪ’ ತಿಳಿಯಾಗದೇ ಹೋದರೆ ಹೆಚ್ಚು ಬೆವರು ಹರಿಸಬೇಕಾಗುತ್ತದೆ.
ಖರ್ಗೆ ಅವರ ತೂಕದ ವ್ಯಕ್ತಿತ್ವ, ಅಭಿವೃದ್ಧಿ ಪರ ಚಿಂತನೆ, ನೇರ ಮಾತು ಹಾಗೂ ತಾಳ್ಮೆಯನ್ನು ಬಹುತೇಕರು ಮೆಚ್ಚುತ್ತಾರೆ. ಆದರೆ, ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ಅವರ ಆಕ್ರಮಣಕಾರಿ ಮಾತು ಮತ್ತು ನಡವಳಿಕೆ ಅಪ್ಪನಿಗೆ ‘ವಜ್ಜಿ’ (ಭಾರ)ಯಾಗಿದೆ ಎನ್ನುವ ಮಾತಿದೆ. ಇವೆಲ್ಲ ಕಾರಣಕ್ಕಾಗಿಯೇ ‘ಕದನ’ ಇನ್ನೂ ಕುತೂಹಲವನ್ನು ಉಳಿಸಿಕೊಂಡಿದೆ.
**
ನನ್ನನ್ನು ಗೆಲ್ಲಿಸಿದರೆ ಕ್ಷೇತ್ರಕ್ಕೆ ಮತ್ತು ರಾಜ್ಯಕ್ಕೆ ಏನು ಪ್ರಯೋಜನಾಗುತ್ತದೆ? ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದರೆ ಏನು ಲಾಭ ಆಗುತ್ತದೆ ಯೋಚಿಸಿ ಮತ ನೀಡಿ.
-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಭ್ಯರ್ಥಿ
**
ಕಾಂಗ್ರೆಸ್‌ಗೆ ಅವಕಾಶ ಕೊಟ್ಟಿದ್ದೀರಿ, ನನಗೂ ಒಂದು ಅವಕಾಶ ಕೊಡಿ ಎಂದು ಮತದಾರರನ್ನು ಕೇಳುತ್ತಿದ್ದೇನೆ. ನರೇಂದ್ರ ಮೋದಿ ಅಲೆ ದಡ ಸೇರಿಸಲಿದೆ ಎನ್ನುವ ಭರವಸೆ ಇದೆ.
-ಡಾ.ಉಮೇಶ ಜಾಧವ, ಬಿಜೆಪಿ ಅಭ್ಯರ್ಥಿ
**
ಕೆರೆಗಳ ನಿರ್ಮಾಣ, ನೀರಾವರಿಗೆ ಆದ್ಯತೆ ನೀಡಬೇಕು. ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ, ಮೂಲಸೌಕರ್ಯ ಒದಗಿಸಬೇಕು.
-ಬಸವರಾಜ ತಳವಾರ, ಅಲ್ಲೂರ (ಕೆ), ಚಿತ್ತಾಪುರ
**
ಸಮಾನ ಶಿಕ್ಷಣ ನೀತಿ ಜಾರಿಗೆ ತರಬೇಕು. ಹಸಿರೀಕರಣಕ್ಕೆ ಆದ್ಯತೆ ನೀಡಬೇಕು. ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವವರು ಗೆಲ್ಲಬೇಕು.
-ಸುಮಾ ಭಗವತಿ, ಕಲಬುರ್ಗಿ
–––
ಪ್ರಜಾವಾಣಿ ವಿಶೇಷಸಂದರ್ಶನಗಳು...
*ನಾನೆಂದೂ ಕುಟುಂಬ ರಾಜಕಾರಣ ಮಾಡಿಲ್ಲ: ದೇವೇಗೌಡ
*ಕುಟುಂಬ ರಾಜಕಾರಣದಿಂದಲೇ ಉಳಿದಿವೆ ಪ್ರಾದೇಶಿಕ ಪಕ್ಷಗಳು: ಕುಮಾರಸ್ವಾಮಿ
*ನಾನು ಈ ಜನ್ಮದಲ್ಲಿ ಯಾವ ರಾಜ್ಯದ ರಾಜ್ಯಪಾಲನೂ ಆಗಲ್ಲ: ಯಡಿಯೂರಪ್ಪ
*ಮೈತ್ರಿ ಸರ್ಕಾರಕ್ಕೆ ನಾನು ಮೂಗುದಾರ ಹಾಕಿಲ್ಲ: ಸಿದ್ದರಾಮಯ್ಯ
*ನಾಯಕರ ಮೌನದಿಂದ ಅವಮಾನವಾಗಿದೆ: ತೇಜಸ್ವಿನಿ ಅನಂತಕುಮಾರ್
*ಬಡವರದ್ದಲ್ಲ, ಕಾಂಗ್ರೆಸ್ನವರ ಗರೀಬಿ ಹಠಾವ್ ಆಯಿತು: ಸದಾನಂದಗೌಡ
*ದಲಿತರನ್ನು ಒಡೆಯಬೇಡಿ, ಎಡಗೈ–ಬಲಗೈ ಅಂತ ಎತ್ತಿಕಟ್ಟಿದರೆ ಯಾರಿಗೂ ಲಾಭವಿಲ್ಲ: ಮಲ್ಲಿಕಾರ್ಜುನ ಖರ್ಗೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.