ವಾಡಿ: ‘ಐದು ವರ್ಷ ಸಂಸದರಾಗಿ ಕಾರ್ಯನಿರ್ವಹಿಸಿರುವ ಡಾ.ಉಮೇಶ ಜಾಧವ ಅವರು ನಮ್ಮ ಬಂಜಾರ ಸಮಾಜಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. ಮತ ಕೇಳುವ ನೈತಿಕತೆ ಅವರಿಗಿಲ್ಲ’ ಎಂದು ಅಖಿಲ ಭಾರತ ಬಂಜಾರ ಸೇವಾ ಸಂಘದ ಕಲಬುರಗಿ ಜಿಲ್ಲಾ ಘಟಕ ಆಕ್ರೋಶ ಹೊರಹಾಕಿದೆ.
ಈ ಬಗ್ಗೆ ಕುರಿತು ಪತ್ರಿಕಾ ಹೇಳಿಕೆ ನೀಡಿದ ಸಂಘಟನೆ ಜಿಲ್ಲಾ ಅಧ್ಯಕ್ಷ ಶಂಕರ ಜಾಧವ ಹಾಗೂ ವಿವಿಧ ಪದಾಧಿಕಾರಿಗಳು, ‘ಉಮೇಶ ಜಾಧವ ಅವರು ಬಂಜಾರ ಸಮಾಜಕ್ಕೆ ಮಾಡಿರುವ ಅನ್ಯಾಯದ ಕುರಿತು ನಮ್ಮ ಐದು ಪ್ರಶ್ನೆಗಳಿಗೆ ಉತ್ತರಿಸಲಿ’ ಎಂದು ಸವಾಲು ಹಾಕಿದ್ದಾರೆ.
‘5 ವರ್ಷಗಳ ಹಿಂದೆ ವಿಮಾನ ನಿಲ್ದಾಣದ ಬಳಿ ಇದ್ದ ಜಗದಂಬಾ ಹಾಗೂ ಸೇವಾಲಾಲ ಮಹಾರಾಜ ಮೂರ್ತಿಯನ್ನು ಬಿಜೆಪಿ ಸರ್ಕಾರ ಧ್ವಂಸ ಮಾಡಿತ್ತು. ಈ ಬಗ್ಗೆ ನೀವು ಇನ್ನೂ ಕ್ರಮ ತೆಗೆದುಕೊಂಡಿಲ್ಲ. ಕನಿಷ್ಠ ಪ್ರತಿಕ್ರಿಯೆಯನ್ನೂ ನೀಡಿಲ್ಲ. ಆ ಸ್ಥಳದಲ್ಲಿ ಹೊಸ ಮಂದಿರವನ್ನಾಗಲಿ ಅಥವಾ ವಿಮಾನ ನಿಲ್ದಾಣಕ್ಕೆ ಸಂತ ಸೇವಾಲಾಲ ಹೆಸರು ನಾಮಕರಣ ಮಾಡುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದ್ದಿರಿ’ ಎಂದು ತಿಳಿಸಿದ್ದಾರೆ.
‘ವಿಮಾನ ನಿಲ್ದಾಣ ನಿರ್ಮಾಣಕ್ಕೆ ಅತಿ ಹೆಚ್ಚು ಕೃಷಿಭೂಮಿಯನ್ನು ನಮ್ಮ ಸಮಾಜದವರು ನೀಡಿದ್ದಾರೆ. ಅವರಿಗೆ ಹುದ್ದೆ ನೀಡದೇ ವಂಚಿಸಲಾಗಿದೆ. ಕಲಬುರಗಿ ಮತದಾರರಿಗಾಗಲಿ ಅಥವಾ ನಮ್ಮ ಬಂಜಾರ ಸಮಾಜದ ಅಭಿವೃದ್ಧಿಗಾಗಿ ಯಾವ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ?’ ಎಂದು ಪ್ರಶ್ನಿಸಿದ್ದಾರೆ.
‘ಬಂಜಾರ ಸಮಾಜಕ್ಕೆ ಹಲವು ಅನ್ಯಾಯಗಳಾದರೂ ಸಂಸದರಾಗಿ ಮೌನವಾಗಿದ್ದು ಮೋಸ ಮಾಡಿದ್ದಿರಿ. ಈ ಬಾರಿಯ ಚುನಾವಣೆಯಲ್ಲಿ ಬಂಜಾರ ಸಮಾಜದವರು ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.